ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆಗೆ ನೆರವಾದ ₹ 52 ಲಕ್ಷ ಮೌಲ್ಯದ ವಸ್ತುಗಳ ಕೊಡುಗೆ

ಡಬ್ಲುಎಂಜಿ ಫೌಂಡೇಷನ್‌ನಿಂದ ಶೂ, ಜಾಕೆಟ್‌, ಗಸ್ತು ವಾಹನ
Last Updated 2 ಮೇ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಡಬ್ಲುಎಂಜಿ ಫೌಂಡೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆಯು ‘ವನ್ಯಜೀವಿಗಳಿಗಾಗಿ ನಾವು’ ಎಂಬ ಕಾರ್ಯಕ್ರಮದ ಅಡಿಯಲ್ಲಿ, ಅರಣ್ಯ ಇಲಾಖೆಗೆ ಅಂದಾಜು ₹ 52 ಲಕ್ಷ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಿದೆ.

ಸಂಸ್ಥೆಯು, ವಿವಿಧ ಕಾರ್ಪೊರೇಟ್‌ ಸಂಸ್ಥೆಗಳ ನೆರವಿನೊಂದಿಗೆ ಈ ಸಹಾಯ ಮಾಡಿದ್ದು, ಕೋವಿಡ್‌ ಕಾರಣಕ್ಕೆ ಅನುದಾನದ ಕೊರತೆ ಎದುರಿಸುತ್ತಿದ್ದ ಅರಣ್ಯ ಇಲಾಖೆಗೆ ಇದರಿಂದಾಗಿ ಅನುಕೂಲವಾಗಿದೆ.

ಕಾವೇರಿ ಮತ್ತು ಮಲೆಮಹದೇಶ್ವರ ವನ್ಯಧಾಮಗಳ ಅರಣ್ಯ ರಕ್ಷಕರಿಗಾಗಿ 600 ಜಂಗಲ್‌ ಶೂಗಳು ಹಾಗೂ 600 ಸರ್ವ ಋತು ಜಾಕೆಟ್‌ಗಳು, ಕಾವೇರಿ ವನ್ಯಧಾಮಕ್ಕೆ ₹ 16 ಲಕ್ಷ ಮೌಲ್ಯದ ಎರಡು ಗಸ್ತು ವಾಹನಗಳು (ಜೆಡಿಎಲ್‌ ಸಂಸ್ಥೆಯ ಪ್ರಾಯೋಜಕತ್ವ), ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ₹ 7 ಲಕ್ಷ ಮೌಲ್ಯದ ಕಳ್ಳ ಬೇಟೆ ತಡೆ ಶಿಬಿರದ ಕಂಟೇನರ್‌ಗಳು (ವಿಸ್ತಾರ್ ಫೈನಾನ್ಸ್‌ ಪ್ರಾಯೋಜಕತ್ವ), ₹ 4 ಲಕ್ಷ ಮೌಲ್ಯದ ಸೋಲಾರ್‌ ವ್ಯವಸ್ಥೆ, ಕಳ್ಳಬೇಟೆ ತಡೆ ಶಿಬಿರಗಳ ಸಿಬ್ಬಂದಿಗೆ 600 ಹಾಸಿಗೆಗಳು, 200ಕ್ಕೂ ಹೆಚ್ಚು ಬೆಡ್‌ಶೀಟ್‌ಗಳನ್ನು ಸಂಸ್ಥೆ ನೀಡಿದೆ.

ಜಿಲ್ಲೆ ಮಾತ್ರವಲ್ಲದೇ, ಕೊಡಗು ಹಾಗೂ ಚಿಕ್ಕಮಗಳೂರು ವಿಭಾಗಗಳಲ್ಲೂ ಅರಣ್ಯ ಸಿಬ್ಬಂದಿಗೆ ಶೂ ಹಾಗೂ ಜಾಕೆಟ್‌ಗಳನ್ನು ನೀಡಲಿದೆ.

ಎಲ್ಲರ ಸಹಕಾರದಿಂದ ನೆರವು: ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಬ್ಲುಎಂಜಿ ಸಮೂಹದ ನಿರ್ದೇಶಕರಾದ ಶ್ರೀಕರ ಐ.ಪಿ ಮತ್ತು ರಾಜೇಶ ಬಾಬು ಎಸ್‌. ಅವರು, ‘ನಮ್ಮ ಸಂಸ್ಥೆಯ ಅಡಿಯಲ್ಲಿ ಡಬ್ಲುಎಂಜಿ–ಎಲೈಟ್‌ ಎಂಬ ತಂಡ ಇದೆ. ಕಾರ್ಪೊರೇಟ್‌ ಸಂಸ್ಥೆಗಳ ಸಿಇಒ, ಸಿಎಫ್‌ಒ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಇದರಲ್ಲಿದ್ದಾರೆ. ಎಲ್ಲರ ಸಹಕಾರದಿಂದ ಡಬ್ಲುಎಂಜಿ ಫೌಂಡೇಷನ್‌ ಹುಟ್ಟು ಹಾಕಿದ್ದೇವೆ. ಇದರ ಅಡಿಯಲ್ಲಿ ‘ಶಿಕ್ಷಣಕ್ಕಾಗಿ ನಾವು’ ಹಾಗೂ ‘ವನ್ಯಜೀವಿಗಳಿಗಾಗಿ ನಾವು’ ಎಂಬ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದರು.

‘ಕೆಲವು ತಿಂಗಳ ಹಿಂದೆ ನಮ್ಮ ಎಲೈಟ್‌ ಗ್ರೂಪಿನ ಸದಸ್ಯರು ಕಾವೇರಿ ವನ್ಯಧಾಮ, ಬಿಆರ್‌ಟಿ ಅರಣ್ಯಕ್ಕೆ ಭೇಟಿ ನೀಡಿದ್ದೆವು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಕೊರತೆಗಳ ಬಗ್ಗೆ ಮನವರಿಕೆಯಾಯಿತು. ಸಿಎಸ್‌ಆರ್‌ ಯೋಜನೆ ಅಡಿಯಲ್ಲಿ ಇಲಾಖೆಗೆ ಅಗತ್ಯವಾಗಿ ಬೇಕಾಗಿದ್ದ ವಸ್ತುಗಳನ್ನು ಕೊಡಲು ತೀರ್ಮಾನಿಸಿದೆವು. ಕಂಪನಿಗಳು ಹಾಗೂ ಅವುಗಳ ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದರು.

ಮುಂದಿನ ಗುರಿ: ಕಾಳ್ಗಿಚ್ಚನ್ನು ಗುರುತಿಸುವುದಕ್ಕಾಗಿ, ವನ್ಯಜೀವಿ ಬೇಟೆಗಾರರ ಚಲನವಲನಗಳ ಮೇಲೆ ನಿಗಾ ಇಡುವುದಕ್ಕಾಗಿ ಡ್ರೋನ್‌, ಹೈ ರೆಸೆಲ್ಯೂಷನ್ ಕ್ಯಾಮೆರಾ, ಟಾರ್ಚ್‌ಗಳು, ಬೈನಾಕ್ಯುಲರ್‌ಗಳು, ವಾಹನಗಳು, ಸೋಲಾರ್‌ ಪಂಪ್‌ಗಳನ್ನು ಮುಂದಿನ ವರ್ಷ ನೀಡುವ ಗುರಿಯನ್ನು ಫೌಂಡೇಷನ್‌ ಹೊಂದಿದೆ.

ಜನರ ಸಹಭಾಗಿತ್ವ ಅಗತ್ಯ: ಸಿಸಿಎಫ್‌

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ‘ಇದೊಂದು ಉತ್ತಮ ಬೆಳವಣಿಗೆ. ಪರಿಸರ, ವನ್ಯಜೀವಿಗಳನ್ನು ಸಂರಕ್ಷಿಸುತ್ತಿರುವ ಅರಣ್ಯ ಇಲಾಖೆಯಂತಹ ಸಂಸ್ಥೆಗಳಿಗೆ ನೆರವಾಗಲು ಜನರು ಮುಂದೆ ಬರಬೇಕು. ಇದು ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ’ ಎಂದರು.

‘ಇಲಾಖೆಯ ಚಟುವಟಿಕೆಗಳಲ್ಲಿ ಸಾರ್ವಜನಿಕರು ಭಾಗಿಯಾದರೆ, ಇಲಾಖೆಯು ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT