ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಂಗವಿಕಲರ ಮಹಿಳಾ ಆರೈಕೆದಾರರ ಕಷ್ಟ ಕೇಳೋರಿಲ್ಲ

ರಾಜ್ಯದಲ್ಲೇ ಮೊದಲ ಬಾರಿ ಗಡಿ ಜಿಲ್ಲೆಯಲ್ಲಿ ಸಮೀಕ್ಷೆ: ಆರೈಕೆದಾರರ ಕಷ್ಟದ ಜೀವನದ ಮೇಲೆ ಬೆಳಕು
Last Updated 8 ಮಾರ್ಚ್ 2021, 4:42 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮೂರು ವರ್ಷಗಳಿಂದ ಪತಿ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನೋಡಿಕೊಳ್ಳಲು ಜೊತೆಯಲ್ಲೇ ಇರಬೇಕು. ಕೆಲಸಕ್ಕೂ ಹೋಗಲಾಗುತ್ತಿಲ್ಲ. ಅಗತ್ಯ ವಸ್ತು ಖರೀದಿಸಲು ಅಂಗಡಿಗೆ ಹೋಗಲೂ ಆಗುವುದಿಲ್ಲ. ಆರೈಕೆ ಮಾಡಲು ಬೇರೆ ಯಾರೂ ಇಲ್ಲ’

– ಚಾಮರಾಜನಗರದ ಅಂಬೇಡ್ಕರ್‌ ಬೀದಿಯ ನಿವಾಸಿ ಹೇಮಲತಾ ಅವರ ಅಳಲು ಇದು. ಅವರು ಮಾತ್ರ ಅಲ್ಲ; ತೀವ್ರ ಸ್ವರೂಪದ ಅಂಗವೈಕಲ್ಯ ಹೊಂದಿರುವವರನ್ನು ನೋಡಿಕೊಳ್ಳುವ ಎಲ್ಲ ಆರೈಕೆದಾರರ ಸಮಸ್ಯೆ ಇದು.

ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ, ಅಂಗವಿಕಲರಷ್ಟೇ ಕಷ್ಟ ಪಡುವ ಆರೈಕೆದಾರರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅಂಗವಿಕಲರ ಪರವಾಗಿ ಕೆಲಸ ಮಾಡುವ ‘ಮಾರ್ಗದರ್ಶಿ’ ಸ್ವಯಂ ಸೇವಾ ಸಂಸ್ಥೆ, ರಾಜ್ಯದಲ್ಲಿ ಮೊದಲ ಬಾರಿ ಚಾಮರಾಜನಗರದಲ್ಲಿ ಆರೈಕೆದಾರರ ಸಮೀಕ್ಷೆ ನಡೆಸಿದೆ. ಅವರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದೆ. ಸರ್ಕಾರವು ಅಂಗವಿಕಲರಿಗೆ ನೀಡುವಂತೆ ಇವರಿಗೂ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಪಾದಿಸಿದೆ.

ಶೇ 91ರಷ್ಟು ಮಹಿಳೆಯರು: ಮಾರ್ಗದರ್ಶಿ ಸಂಸ್ಥೆಯು, ಕೇರರ್ಸ್‌ ವರ್ಲ್ಡ್‌ ವೈಡ್‌ ಸಂಸ್ಥೆಯ (ಕನ್ನಡಿಗ ಪಶು ವೈದ್ಯ ಡಾ.ಅನಿಲ್‌ ಕೆ.ಪಾಟೀಲ ಇಂಗ್ಲೆಂಡ್‌ನಲ್ಲಿ ಸ್ಥಾಪಿಸಿರುವ ಸಂಸ್ಥೆ) ಸಹಕಾರದೊಂದಿಗೆ ಆರೈಕೆದಾರರ ಸಮೀಕ್ಷೆ ನಡೆಸಿದ್ದು, ಅವರ ಸ್ಥಿತಿಯನ್ನು ಅಧ್ಯಯನ ಮಾಡಿದೆ.

2019ರಲ್ಲಿ ಸಮೀಕ್ಷೆ ಆರಂಭವಾಗಿದ್ದರೂ, ಕೋವಿಡ್‌ ಕಾರಣದಿಂದ ವಿಳಂಬವಾಗಿತ್ತು. ಶೇ 90ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, 1,500 ಆರೈಕೆದಾರರನ್ನು ಗುರುತಿಸಲಾಗಿದೆ. ಈ ಪೈಕಿ ಶೇ 91ರಷ್ಟು ಮಹಿಳೆಯರೇ ಇದ್ದಾರೆ.

‘ಆರೈಕೆದಾರರ ಸಮೀಕ್ಷೆ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಕೊಪ್ಪಳದಲ್ಲೂ ಈ ಪ್ರಯತ್ನ ನಡೆಯುತ್ತಿದೆ. ಮಹಿಳೆಯರ ಸಂಖ್ಯೆ ಹೆಚ್ಚಿದೆ. ಆಂಧ್ರ ಪ್ರದೇಶ ಹಾಗೂ ಒಡಿಶಾಗಳಲ್ಲಿ ಸಮೀಕ್ಷೆ ನಡೆದಿದ್ದು, ಅಲ್ಲೂ ಶೇ 85ರಿಂದ 90ರಷ್ಟು ಮಹಿಳೆಯರೇ ಇದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ, ಅಂಗವಿಕಲರ ಕಾಯ್ದೆಯ ಮಾಜಿ ಆಯುಕ್ತ ಕೆ.ವಿ.ರಾಜಣ್ಣ, ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಗವಿಕಲರನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಆರೈಕೆದಾರರು ದೈಹಿಕವಾಗಿ, ಮಾನಸಿಕವಾಗಿ ದಣಿದಿರುತ್ತಾರೆ. ಅಂಗವಿಕಲರಿಗಿಂತಲೂ ಹೆಚ್ಚು ಕಷ್ಟವನ್ನು ಅನುಭವಿಸುತ್ತಿರುತ್ತಾರೆ. ಆದರೆ, ಅದು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ’ ಎಂದರು.

ಹೊರೆ ಇಳಿಸುವ ಪ್ರಯತ್ನ

ಆರೈಕೆದಾರರ ಮೇಲಿನ ಹೊರೆ ಇಳಿಸುವುದಕ್ಕಾಗಿ ಮಾರ್ಗದರ್ಶಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ.

ಅಂಗವಿಕಲರನ್ನು ನೋಡಿಕೊಳ್ಳುವ ಕೌಶಲವನ್ನು ತಿಳಿಸುವುದಕ್ಕೆ ವಿಶೇಷ ಕಾರ್ಯಾಗಾರ ಆಯೋಜನೆ, ಅಂಗವಿಕಲರ ಅಗತ್ಯಕ್ಕೆ ತಕ್ಕಂತೆ ಸಲಕರಣೆಗಳನ್ನು ಮಾರ್ಪಾಡು ಮಾಡುವುದು, ಆರೈಕೆದಾರರ ವಿಶ್ರಾಂತಿಗಾಗಿ ಆರೈಕೆ ಕೇಂದ್ರಗಳ ಸ್ಥಾಪನೆ, ಆಪ್ತ ಸಮಾಲೋಚನೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಭತ್ಯೆ ನೀಡುವುದು... ಮುಂತಾದ ಕಾರ್ಯಕ್ರಮಗಳ ಬಗ್ಗೆ ಅದು ಪ್ರಸ್ತಾಪಿಸಿದೆ.

‘2016ರ ಅಂಗವಿಕಲರ ಕಾಯ್ದೆಯಲ್ಲಿ ಆರೈಕೆದಾರರನ್ನೂ ಗುರುತಿಸಲಾಗಿದೆ. ಅವರ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ. ಅದನ್ನು ತಿಳಿ ಹೇಳುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ರಾಜಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT