ಚಾಮರಾಜನಗರ: ‘ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಹೆಚ್ಚು ಅವಕಾಶ ಕಲ್ಪಿಸಬೇಕಾದ ಅಗತ್ಯ ಇದೆ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಶನಿವಾರ ಹೇಳಿದರು.
ನಗರದ ರೋಟರಿ ಭವನದಲ್ಲಿ ನೆಹರು ಯುವ ಕೇಂದ್ರ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್, ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕವಾಗಿ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯದಲ್ಲಿ ಮಹಿಳೆಯರಿಗೆ ಇನ್ನಷ್ಟು ಮೀಸಲಾತಿ ನೀಡಬೇಕಾಗಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನೀಡಿದರೆ ಸಾಲುವುದಿಲ್ಲ. ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲೂ ನೀಡಬೇಕಾಗಿದೆ. ಆಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯ’ ಎಂದು ಹೇಳಿದರು.
ಬಿಜೆಪಿ ಮುಖಂಡ ಎಂ. ರಾಮಚಂದ್ರ ಮಾತನಾಡಿ, ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಿದ ಕಾರಣದಿಂದ ಮಹಿಳೆಯರು ನಾಲ್ಕು ಗೋಡೆಗೆ ಸೀಮಿತವಾಗದೆ ಉನ್ನತ ಮಟ್ಟದ ಅಧಿಕಾರಿಗಳಾಗಿ ಬರುತ್ತಿದ್ದಾರೆ’ ಎಂದರು.
ನಗರಸಭಾ ಅಧ್ಯಕ್ಷೆ ಆಶಾ ನಟರಾಜು ಮಾತನಾಡಿ, ‘ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು’ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸರಸ್ವತಿ ಮಾತನಾಡಿ, ‘ಮಹಿಳೆಯರ ಯಶಸ್ಸಿಗೆ ಪುರುಷರೂ ಕಾರಣ. ನಾವು ಈ ಮಟ್ಟಕ್ಕೆ ಬೆಳೆಯಲು ನಮ್ಮ ಪೋಷಕರು ನೆರವಾಗಿದ್ದಾರೆ. ಮಹಿಳೆಯರು ಶ್ರಮಜೀವಿಗಳು. ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುವುದು ಎಲ್ಲರ ಕರ್ತವ್ಯ’ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕೆಂಪನಪುರ ಮಾದೇವಸ್ವಾಮಿ ಅವರು 20 ಮಂದಿ ವಿದ್ಯಾರ್ಥಿನಿಯರನ್ನು ಗೌರವಿಸಿದರು. 30 ಮಂದಿ ಮಹಿಳೆಯರಿಗೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಂದಿನಿ ಸುಮನ್ ಗೌರವಿದರು.
ನೆಹರು ಯುವ ಕೇಂದ್ರದ ಸಹನ, ಶಂಕರ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು, ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ನಿರ್ದೇಶಕರಾದ ಪೂಜಾ, ಶ್ವೇತ, ರಂಜಿತ, ಯಶೋಧ, ಅರ್ಪಿತ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.