ಶನಿವಾರ, ಮೇ 15, 2021
29 °C
10ನೇ ದಿನವೂ ಮುಂದುವರೆದ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ: 195 ಬಸ್‌ಗಳ ಸಂಚಾರ

ಕೈತಪ್ಪಿದ ₹ 5 ಕೋಟಿ ಆದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರನೇ ವೇತನ ಆಯೋಗದ ಶಿಫಾರಸಿನನ್ವಯ ಸಂಬಳ ನೀಡುವಂತೆ ಆಗ್ರಹಿಸಿ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು 10 ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ಕೆಎಸ್‌ಆರ್‌ಟಿಸಿಯ ಚಾಮರಾಜನಗರ ವಿಭಾಗಕ್ಕೆ ₹ 5 ಕೋಟಿ ಆದಾಯ ಖೋತಾ ಆಗಿದೆ. 

ವಿಭಾಗದ ವ್ಯಾಪ್ತಿಯಲ್ಲಿ 518 ಬಸ್‌ಗಳಿದ್ದು, 460 ಮಾರ್ಗಗಳಿಂದ ಮುಷ್ಕರ ಆರಂಭಕ್ಕೂ ಮೊದಲು ಪ್ರತಿ ದಿನದ ಆದಾಯ ಸರಾಸರಿ ₹ 50 ಲಕ್ಷ ಇತ್ತು. 10 ದಿನಗಳಿಂದ ಎಲ್ಲ ಬಸ್‌ಗಳು ಸಂಚಾರ ನಡೆಸಿಲ್ಲ. ವಾರದಿಂದ ಕೆಲವು ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಪ್ರಮುಖ ನಗರ ಮತ್ತು ಪಟ್ಟಣಗಳ ನಡುವೆ ಬಸ್‌ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ದೊಡ್ಡ ಆದಾಯ ಬರುತ್ತಿಲ್ಲ. 

‘ವಾರದಲ್ಲಿ ಬಸ್‌ಗಳ ಸಂಚಾರದಿಂದ ₹ 10 ಲಕ್ಷ ಆದಾಯ ಬಂದಿರಬಹುದು. ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೆ, ದಿನಕ್ಕೆ ₹ 50 ಲಕ್ಷದಂತೆ ಹತ್ತು ದಿನದಲ್ಲಿ ₹ 5 ಕೋಟಿ ಸಂಗ್ರಹವಾಗುತ್ತಿತ್ತು. ₹ 10 ಲಕ್ಷ ಸಂಗ್ರಹವಾಗಿರುವುದನ್ನು ಪರಿಗಣಿಸಿದರೆ, ₹ 4.90 ಕೋಟಿ ಆದಾಯ ಖೋತಾ ಆಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.  

ಹೆಚ್ಚಿದ ಬಸ್‌ಗಳ ಸಂಚಾರ

ಈ ಮಧ್ಯೆ, ನೌಕರರು ಮುಷ್ಕರ ಮುಂದುವರಿಸಿರುವಂತೆಯೇ, ಚಾಮರಾಜನಗರ ವಿಭಾಗದಲ್ಲಿ ಬಸ್‌ಗಳ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಕರ್ತವ್ಯಕ್ಕೆ ಮರಳುತ್ತಿರುವ ನೌಕರರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ.

ಮುಷ್ಕರದ 10ನೇ ದಿನವಾದ ಶುಕ್ರವಾರ ಒಟ್ಟು 195 ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಿವೆ. ವಿಭಾಗದಲ್ಲಿ 2,300ರಷ್ಟು ನೌಕರರಿದ್ದು, 400ಮಂದಿ ಚಾಲಕರು, ನಿರ್ವಾಹಕರು ಮತ್ತು 60 ಮಂದಿ ಮೆಕ್ಯಾನಿಕ್‌ಗಳು ಕೆಲಸಕ್ಕೆ ಬಂದಿದ್ದಾರೆ. 

ಗ್ರಾಮೀಣ ಭಾಗದಲ್ಲೂ ಸಂಚಾರ

ಮುಷ್ಕರ ಆರಂಭಗೊಂಡ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳು ನಗರ ಮತ್ತು ಪಟ್ಟಣ ಪ್ರದೇಶಗಳ ನಡುವೆ ಮಾತ್ರ ಸಂಚರಿಸಿವೆ. ಶುಕ್ರವಾರ ಗ್ರಾಮೀಣ ಭಾಗದ ಮಾರ್ಗಗಳಲ್ಲೂ ಓಡಾಡಿವೆ. 

‘ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಗ್ರಾಮೀಣ ಮಾರ್ಗಗಳಲ್ಲಿ ಒಟ್ಟು 35 ಬಸ್‌ಗಳು ಸಂಚಾರ ನಡೆಸಿವೆ’ ಎಂದು ಶ್ರೀನಿವಾಸ ಮಾಹಿತಿ ನೀಡಿದರು. 

ವರ್ಗಾವಣೆ, ವಜಾ

ಮುಷ್ಕರದಲ್ಲಿ ಭಾಗವಹಿಸುವುದರ ಜೊತೆಗೆ, ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಕೆಲಸ ಮಾಡಲು ತೊಂದರೆ ಮಾಡಿದ ಆರೋಪದಲ್ಲಿ ಚಾಮರಾಜನಗರ ವಿಭಾಗದಲ್ಲಿ ಇದೂವರೆಗೆ 25 ಮಂದಿಯನ್ನು ಬೇರೆ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ. ಆರು ಮಂದಿ ವಜಾ ಮಾಡಲಾಗಿದೆ. 

‘ನಂಜನಗೂಡು ಡಿಪೊದಲ್ಲಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಏಳು ನೌಕರರ ಮೇಲೆ ಗುರುವಾರ ಎಫ್‌ಐಆರ್‌ ದಾಖಲಿಸಲಾಗಿದೆ. ಕೊಳ್ಳೇಗಾಲದಲ್ಲೂ ಆರು ನೌಕರರ ವಿರುದ್ಧ ದೂರು ನೀಡಿದ್ದು, ಅಲ್ಲಿ ಎಫ್‌ಐಆರ್‌ ದಾಖಲಾಗಿಲ್ಲ. ಆದರೆ, ಪೊಲೀಸರು ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ’ ಎಂದು ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಮಾಹಿತಿ ನೀಡಿದರು.

ಚಳವಳಿಗೆ ಅವಕಾಶ ಕೊಡುತ್ತಿಲ್ಲ: ಆರೋಪ

‘ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿ ದಿನವೂ ಒಂದೊಂದು ಚಳವಳಿ ನಡೆಸಲು ತೀರ್ಮಾನಿಸಿದ್ದೆವು. ಆದರೆ, ಪೊಲೀಸರು ಅನುಮತಿ ನೀಡುತ್ತಿಲ್ಲ’ ಎಂದು ಸಾರಿಗೆ ನೌಕರರ ಕೂಟದ ಬಿ.ರಾಜೇಶ್ ಆರೋಪಿಸಿದರು. 

‘ತಟ್ಟೆ ಚಳವಳಿ ಯಶಸ್ವಿಯಾಗಿರುವುದರಿಂದ ಸರ್ಕಾರ ಬೆದರಿದೆ. ಇದರಿಂದ ನಮ್ಮ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಸಂಸ್ಥೆಗಳ ಅಧಿಕಾರಿಗಳು ಕೂಡ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಧಿಕಾರಿಗಳು ನೌಕರರನ್ನು ಬೆದರಿಸಿ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ’ ಎಂದು ಅವರು ಹೇಳಿದರು. 

‘ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಗೋಗರೆಯುತ್ತಿದ್ದೇವೆ. ಶಾಂತಿಯುತವಾಗಿ ರಾಜ್ಯದಾದ್ಯಂತ ಚಳವಳಿ ನಡೆಸುತ್ತಿದ್ದೇವೆ. ಅದನ್ನು ಹತ್ತಿಕ್ಕಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ’ ಎಂದು ರಾಜೇಶ್‌ ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.