ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರದಲ್ಲಿ ಕಾಣಿಯಾಗುತ್ತಿದೆ ವೈವಿಧ್ಯತೆ: ಸಸ್ಯ ಸಂಕುಲದ ವಿಕಾಸಕ್ಕೆ ಕಂಟಕ

ವಿಶ್ವ ಪರಿಸರ ದಿನ
Published 5 ಜೂನ್ 2024, 7:18 IST
Last Updated 5 ಜೂನ್ 2024, 7:18 IST
ಅಕ್ಷರ ಗಾತ್ರ

ಯಳಂದೂರು: ಬಿಳಿಗಿರಿಬೆಟ್ಟದ ಹುಲಿ ಸಂರಕ್ಷಿತ ಪ್ರದೇಶ ಜೀವ ವೈವಿಧ್ಯತೆಯ ತಾಣ. ವೃಕ್ಷ, ಪ್ರಾಣಿ, ಕೀಟ, ಪಕ್ಷಿ ಸಂಕುಲಗಳ ತವರು. ಜೀವಜಾಲದ ಖಜಾನೆ. ಶುದ್ಧ ಹವೆಯ ಪುನರುತ್ಪತಿ ತಾಣ. ವಲಸೆ ಹಕ್ಕಿಗಳ ಕಣ. ಜೇಡ, ಉರಗ ಪ್ರಭೇದಗಳ ನಿಲ್ದಾಣ. ಇಂತಹ ಪರಿಸರದಲ್ಲಿ ಈಗ ನವನವೀನ ಸಸ್ಯ ವರ್ಗಗಳ ಜಾಲ ಶಿಥಿಲವಾಗುತ್ತಿದ್ದು. ಮಳೆ ಕಾಡಿನ ದಟ್ಟಣೆ ತೆಳುವಾಗುತ್ತ, ನೀರಿನ ಪಸೆ ಕುಸಿದು, ವನ್ಯಜೀವಿಗಳು ತಮ್ಮ ಆವಾಸ ಬದಲಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.  

ತಾಲ್ಲೂಕಿನ ಜೀವ ಮಂಡಲದಲ್ಲಿ ಬಗೆಬಗೆ ವೃಕ್ಷ ನಮೂನೆಗಳು ಜೀವತಾಳಿವೆ. ಸಸ್ಯ ವಿಜ್ಞಾನಿಗಳಿಗಿಂತ ಮೊದಲೇ ಸಸ್ಯಗಳಿಗೆ ನಾಮಕರಣ ಮಾಡಲಾಗಿದೆ. ಇಲ್ಲಿನ ಮಳೆ ಪ್ರಮಾಣ, ಮಣ್ಣಿನಗುಣ, ತಾಪಮಾನ, ಭೌಗೋಳಿಕ ಸ್ಥಾನಮಾನಕ್ಕೆ ತಕ್ಕಂತೆ ಬೆಳೆಯುವ ಗಿಡ, ಹುಲ್ಲು, ಹೂ, ಮೂಲಿಕೆಗಳನ್ನು ಗುರುತಿಸಿದ್ದಾರೆ. ಆದರೆ, ಈಚಿನ ದಶಕಗಳಲ್ಲಿ ಶೋಲಾ ಮತ್ತು ಹುಲ್ಲು ಬೆಟ್ಟದ ಹರವು ಕುಸಿಯುತ್ತಿರುವುದು ಹಾಗೂ ನೆಲ್ಲಿ, ನತ್ತಿ, ಬೆಜ್ಜೆ, ಚೌವೆ, ದಡಸಲು ಮರಗಳು ಮರು ಹುಟ್ಟು ಪಡೆಯದಿರುವುದು ಗಿರಿಜನರಲ್ಲಿ ಆತಂಕ ತಂದಿತ್ತಿದೆ.  

280 ಪಕ್ಷಿ ಪ್ರಭೇದಗಳು, 150 ಚಿಟ್ಟೆ, 11 ದ್ವಿಚರಿ, 22 ಸರೀಸೃಪ ಸಂಕುಲ, ಸಾವಿರಕ್ಕೂ ಹೆಚ್ಚಿನ ಮರ, ಪೊದೆ, ಆರ್ಕಿಡ್, ಬಳ್ಳಿ, ಹತ್ತಾರು ಜಾತಿಯ ಕೆಂಪಿರುವೆ, ಚೇಳು, ಗೆದ್ದಿಲು ಈ ಅರಣ್ಯದಲ್ಲಿ ಆಶ್ರಯ ಪಡೆದಿವೆ. 

‘ಇಲ್ಲಿನ ವನ ಮತ್ತು ಸಸ್ಯ ಏಕ ಬಗೆಯಲ್ಲ. ಆಯಾ ಬೆಟ್ಟ ಗುಡ್ಡಗಳ ಏರಿಳಿತ, ಮಣ್ಣಿನ ಗುಣದ ವ್ಯತ್ಯಾಸ, ತಾಪದ ವಿವಿಧತೆಗಳು ಸೇರಿ ಇಲ್ಲಿನ ಸಸ್ಯ ಸಂಕುಲದ ವಿಕಾಸಕ್ಕೆ ಕಾರಣವಾಗಿದೆ. ಆಗಾಗ ಕಾಡುವ ಬೆಂಕಿ ಪ್ರಕೋಪ, ಮನುಷ್ಯನ ಹಸ್ತಕ್ಷೇಪ, ಆಧುನಿಕ ಜೀವನ ವಿಧಾನಗಳ ಪ್ರಭಾವ ಇಲ್ಲಿನ ನಿಸರ್ಗದ ಮೇಲೆ ಪ್ರಭಾವ ಬೀರಿವೆ’ ಎಂದು ಹೇಳುತ್ತಾರೆ ಮೂಲಿಕೆ ತಜ್ಞ ಬೊಮ್ಮಯ್ಯ.

ಕಳೆ ಸಸ್ಯ ಮಾರಕ: ‘ಕಾಡು-ನಾಡು ಪ್ರಕೃತಿಯನ್ನು ವ್ಯಾಪಕವಾಗಿ ಚಾಚುತ್ತಿರುವ ಲಂಟಾನ ಮತ್ತು ಯುಪರೈಟಿಸ್ ಕಳೆ ಗಿಡಗಳು ಸಸ್ಯಸಂಕುಲದ ಜೀವಿತ ಅವಧಿಯನ್ನು ಕಡಿಮೆ ಮಾಡಿವೆ. ನೂರಾರು ತಳಿಯ  ಬೀಜ ಪ್ರಸಾರದ ಆವಾಸವನ್ನು ಕುಗ್ಗಿಸಿದೆ. ಬಿದಿರು, ಕಕ್ಕೆ, ಕಾಡುಗೇರು, ಬೈಸೆ, ಕಿಂಚಗ ಸಸ್ಯ ವಿಶೇಷತೆಗೆ ಕಾರಣವಾಗಿದ್ದ ಆನೆ, ಜಿಂಕೆ, ಕಡವೆಗಳ ಸಂಚಾರಕ್ಕೂ ಕಳೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಏಕ ನಮೂನೆಯ ಸಸ್ಯ ವೃದ್ಧಿಸಿ, ಸಸ್ಯಗಳ ಬೆಳವಣಿಗೆಗೆ ವಿಕಾಸ ನಿಲ್ಲುತ್ತದೆ’ ಎಂದು ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಆವಾಸ ಬದಲಿಸುವ ಜೀವಿ: ‘ಮಳೆಕಾಡುಗಳಲ್ಲಿ ಮರಬೆಕ್ಕು, ಚೀರನಾಯಿ, ಕೇಶಳಿಲು‌, ಮೊಲ, ಮುಳ್ಳುಹಂದಿ, ಬಾವಲಿಗಳು ಜೀವಜಾಲ ವಿಸ್ತರಿಸಲು ತಮ್ಮದೇ ಕಾಣಿಕೆ ಸಲ್ಲಿಸುತ್ತವೆ. ಕಾಡಂಚಿನಲ್ಲಿ ಕಾಡೆಮ್ಮೆ, ಕರಡಿ, ದೊಡ್ಡಕೀರ ಮುಂತಾದ ಪ್ರಾಣಿಗಳು ನೇರಳೆ, ಅರಳೆ, ಸಂಪಿಗೆ, ಜಾಲ, ಬೂರಗ, ಕಾಡುಬಾಳೆಗಳನ್ನು ಅವಲಂಬಿಸಿ ಜೀವಿಸುತ್ತವೆ. ಇಂತಹ ಅಪರೂಪದ  ಸಸ್ಯವರ್ಗದ ಬೆಳವಣಿಗೆ ಕುಂಠಿತವಾದರೆ ವನ್ಯ ಜೀವಿಗಳು ಹೊಲ, ಗದ್ದೆ, ಊರು, ಕೇರಿಯತ್ತ ನುಗ್ಗುತ್ತವೆ’ ಎಂಬುದು ಬುಡಕಟ್ಟು ಜನರ ಹೇಳಿಕೆ. 

ಬರದ ನಡುವೆ ಕಾಣೆಯಾದ ಡ್ಯಾನ್ಸಿಂಗ್ ಗರ್ಲ್ ಅಣಬೆ
ಬರದ ನಡುವೆ ಕಾಣೆಯಾದ ಡ್ಯಾನ್ಸಿಂಗ್ ಗರ್ಲ್ ಅಣಬೆ

ವಿಶ್ವ ಪರಿಸರ ದಿನ ಇಂದು

ಪ್ರತಿ ವರ್ಷ ಜೂನ್‌ 5ರಂದು ವಿಶ್ವಸಂಸ್ಥೆ ಪರಿಸರ ದಿನಾಚರಣೆ ಆಚರಿಸಲು ವಿಶ್ವದ 195 ರಾಷ್ಟ್ರಗಳಿಗೆ ಕರೆ ನೀಡಿದೆ. ‘ನಮ್ಮ ಭೂಮಿ ನಮ್ಮ ಭವಿಷ್ಯ’ ಧ್ಯೇಯವಾಕ್ಯದೊಂದಿಗೆ ಭೂ ಸಂಪನ್ಮೂಲ ಮರುಭೂಮಿ ತಡೆ ಮತ್ತು ಬರ ನಿರೋಧಕತೆ ಹೆಚ್ಚಿಸುವ ಬಗ್ಗೆ ಅರಿವು ಮೂಡಿಸುತ್ತಿದೆ. ಸಸಿ ನೆಡುವುದು ಅಳಿಯುತ್ತಿರುವ ಸಸ್ಯ ಮತ್ತು ಪ್ರಾಣಿ ಸಂಕುಲ ಉಳಿಸುವುದು ಮಣ್ಣಿನ ಆರೋಗ್ಯ ಹೆಚ್ಚಿಸುವುದು ‍ಪರಿಸರ ದಿನ ಆಚರಣೆಯ ವಿಶೇಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT