ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡೆಕುರುಬನದೊಡ್ಡಿ | ಕಾನನದ ನಡುವೆ ಹೊಗೆಮುಕ್ತ ಗ್ರಾಮ

ಮಲೆಮಹದೇಶ್ವರ ವನ್ಯಧಾಮ: ಅರಣ್ಯ ಇಲಾಖೆಯಿಂದ ಅಡುಗೆ ಅನಿಲ ಸಂಪರ್ಕ
Last Updated 5 ಜೂನ್ 2020, 4:34 IST
ಅಕ್ಷರ ಗಾತ್ರ

ಹನೂರು: ಮಲೆ ಮಹದೇಶ್ವರ ವನ್ಯಧಾಮಕ್ಕೆ ಅಂಟಿಕೊಂಡಿರುವ ಆ ಗ್ರಾಮದ ಹೆಸರು ಅಂಡೆಕುರುಬನದೊಡ್ಡಿ. ಅದೀಗ ಹೊಗೆ ಮುಕ್ತ ಗ್ರಾಮ.

ಒಂದು ಕಾಲದಲ್ಲಿ ಇಡೀ ಗ್ರಾಮವೇ ಸೌದೆಗಾಗಿ ಅರಣ್ಯಕ್ಕೆ ದಾಂಗುಡಿ ಇಡುತ್ತಿತ್ತು. ನಾಲ್ಕೈದು ವರ್ಷಗಳಿಂದ ಅರಣ್ಯ ಇಲಾಖೆ ಗ್ರಾಮದ ಪ್ರತಿ ಮನೆಗೂ ಅಡುಗೆ ಅನಿಲ ಸೌಲಭ್ಯ ನೀಡಿರುವ ಕಾರಣಕ್ಕೆ ಗ್ರಾಮದಲ್ಲಿ ಅಡುಗೆ ಮಾಡುವುದಕ್ಕೆ ಸೌದೆ ಒಲೆ ಹೊತ್ತಿಸುವುದಿಲ್ಲ. ಹಾಗಾಗಿ, ಹೊಗೆಯೂ ಉತ್ಪತ್ತಿಯಾಗುವುದಿಲ್ಲ.

ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಸೋಲಿಗರು ಹಾಗೂ ಲಂಬಾಣಿ ಸಮುದಾಯದ ಜನರು ವಾಸವಾಗಿದ್ದಾರೆ. 80 ಕುಟುಂಬಗಳು ಇಲ್ಲಿವೆ. ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಈ ಗ್ರಾಮದ ಜನರು ಈಗ ಜೀವನೋಪಾಯಕ್ಕಾಗಿ ಅರಣ್ಯ ಅವಲಂಬನೆ ಕಡಿಮೆ ಮಾಡುವುದರ ಜೊತೆಗೆ ವನ್ಯಜೀವಿ ಸಂರಕ್ಷಣೆಗೆ ಇಲಾಖೆಯೊಂದಿಗೆ ಸಹಕರಿಸುತ್ತಿದ್ದಾರೆ.

ಉರುವಲಿನ ಕಾರಣಕ್ಕಾಗಿ ಅರಣ್ಯ ನಾಶ ತಪ್ಪಿಸುವ ಮತ್ತು ಕಾಳ್ಗಿಚ್ಚು ನಿಯಂತ್ರಿಸುವ ಉದ್ದೇಶದಿಂದ ಅರಣ್ಯ ಇಲಾಖೆಯು ಅಡುಗೆ ಅನಿಲ ಸೌಕರ್ಯ ಕಲ್ಪಿಸುವ ಯೋಜನೆ ಜಾರಿಗೆ ತಂದಿತ್ತು. ಮಲೆಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಇದು ಸಂಪೂರ್ಣ ಯಶಸ್ವಿಯಾಗಿದೆ.

ಗ್ರಾಮದಲ್ಲಿರುವ 35 ಸೋಲಿಗ ಹಾಗೂ 45 ಲಂಬಾಣಿ ಕುಟುಂಬಗಳಿಗೆ 2016ರಿಂದ 2019ರವರೆಗೆ ಮೂರು ಹಂತಗಳಲ್ಲಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ.

‘ಮೀಸಲು ಅರಣ್ಯ ಪ್ರದೇಶವನ್ನು ವನ್ಯಧಾಮ ಎಂದು ಘೋಷಣೆ ಮಾಡಿದ ನಂತರ ಅರಣ್ಯದೊಳಗೆ ಮಾನವನ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಯಿತು. ದಿನನಿತ್ಯ ಅರಣ್ಯದಿಂದ ಉರುವಲು ತಂದು ಮಾರಾಟ ಮಾಡುವುದು, ಅಡುಗೆ ಮಾಡಲು ಬಳಸುತ್ತಿದ್ದ ಜನರಿಗೆ ಇದರಿಂದ ತೀವ್ರ ತೊಂದರೆಯಾಯಿತು. ಆ ನಂತರ ಅರಣ್ಯ ಇಲಾಖೆಯು ಪ್ರತಿ ಮನೆಮನೆಗೂ ಅನಿಲ ಸಂಪರ್ಕ ಕಲ್ಪಿಸಿದೆ. ಇಲ್ಲಿನ ಅಧಿಕಾರಿಗಳು ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಹೊಸದಾಗಿ ಬೇರ್ಪಡುವ ಕುಟುಂಬವನ್ನು ಗುರುತಿಸಿ ಅವರಿಗೂ ಅನಿಲ ಸಂಪರ್ಕ ಕಲ್ಪಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ’ ಎಂದು ಗ್ರಾಮದ ರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಂಡು ಬರದ ಕಾಳ್ಗಿಚ್ಚು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿಸೈಯದ್ ಸಾಬಾ ನದಾಫ್ ಅವರು, ‘ಸೌದೆಗಾಗಿ ಅರಣ್ಯವನ್ನೇ ಅವಲಂಬಿಸಿದ್ದ ಇಲ್ಲಿನ ಜನರಿಗೆ ಇಲಾಖೆ ವತಿಯಿಂದ ಅನಿಲ ಸಂಪರ್ಕ ಕಲ್ಪಿಸದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಕಾಳ್ಗಿಚ್ಚಿನ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಇಲಾಖೆ ಹಮ್ಮಿಕೊಳ್ಳುತ್ತಿರುವ ಜಾಗೃತಿ ಅಭಿಯಾನಗಳು ಜನರ ಮೇಲೆ ಪರಿಣಾಮ ಬೀರಿವೆ. ಬೇರೆ ಕಡೆ ಬೆಂಕಿ ಬಿದ್ದ ಸಂದರ್ಭದಲ್ಲಿ ಇಲ್ಲಿನ ಜನರು ಸ್ವಯಂಪ್ರೇರಿತರಾಗಿ ಬಂದು ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯೆ

ವನ್ಯಧಾಮದ ಕೆಲವು ಕಡೆ ಇನ್ನೂ ಇಂತಹ ಗ್ರಾಮಗಳಿದ್ದು ಅಂಡೆಕುರುಬನದೊಡ್ಡಿಯನ್ನು ಮಾದರಿಯಾಗಿಟ್ಟುಕೊಂಡು ಉಳಿದ ಗ್ರಾಮಗಳನ್ನು ಹೊಗೆಮುಕ್ತಗೊಳಿಸಲಾಗುವುದು
- ವಿ.ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ಉರುವಲಿಗಾಗಿ ಇಡೀ ಗ್ರಾಮದ ಜನರು ಕಾಡಿಗೆ ಹೋಗುತ್ತಿದ್ದೆವು. ಅರಣ್ಯ ಇಲಾಖೆ ಸಿಲಿಂಡರ್‌ ಕೊಟ್ಟ ಮೇಲೆ ಕಾಡಿನಿಂದ ಸೌದೆ ತರುವುದನ್ನು ಬಿಟ್ಟಿದ್ದೇವೆ
- ಜಡೆಯಪ್ಪ, ಊರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT