ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಬಾಯಿಯ ಸ್ವಾಸ್ಥ್ಯದಿಂದ ಆರೋಗ್ಯ: ಪ್ರಿಯದರ್ಶಿನಿ

ಪಿಡಬ್ಲ್ಯಡಿ ಕಾಲೊನಿ ಶಾಲೆಯಲ್ಲಿ ಬಾಯಿ ಆರೋಗ್ಯ ದಿನಾಚರಣೆ
Published 2 ಮಾರ್ಚ್ 2024, 14:21 IST
Last Updated 2 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ಚಾಮರಾಜನಗರ: ನಮ್ಮ ದೇಹದ ಆರೋಗ್ಯಕ್ಕೂ ಬಾಯಿಯ ಆರೋಗ್ಯಕ್ಕೂ ಸಂಬಂಧವಿದೆ. ಬಾಯಿಯನ್ನು ಶುಚಿಯಾಗಿಟ್ಟುಕೊಂಡರೆ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಅಧಿಕಾರಿ ಡಾ.ಪ್ರಿಯದರ್ಶಿನಿ ಶನಿವಾರ ಹೇಳಿದರು.

ನಗರದ ಪಿಡಬ್ಲ್ಯುಡಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಸಿಮ್ಸ್, ರೋಟರಿ ಸಂಸ್ಥೆ ಮತ್ತು ಮೈಸೂರಿನ ಇಂಡಿಯನ್‌ ಡೆಂಟಲ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಯಿಯ ಆರೋಗ್ಯದ ಬಗ್ಗೆ ಜನರು, ಮಕ್ಕಳು ಗಮನ ನೀಡುವುದು ಕಡಿಮೆ. ಬಾಯಿ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದ್ರೋಗಕ್ಕೆ ಕಾರಣವಾಗಬಹುದು. ಗರ್ಭಿಣಿಯರು ಬಾಯಿಯ ಆರೋಗ್ಯಕ್ಕೆ ಗಮನ ಹರಿಸದಿದ್ದರೆ ಹೆರಿಗೆ ಸಂದರ್ಭದಲ್ಲಿ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ವರ್ಷಕ್ಕೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ ಹಲ್ಲು ಮತ್ತು ಬಾಯಿ ತಪಾಸಣೆ ಮಾಡುವುದು ಒಳ್ಳೆಯದು’ ಎಂದು ಹೇಳಿದರು.

‘ಬಾಯಿ ಆರೋಗ್ಯದ ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಕಳೆದ ಏಪ್ರಿಲ್ 1ರಿಂದ ಇಲ್ಲಿಯವರೆಗೆ 3,800 ಮಕ್ಕಳ ದಂತ ತಪಾಸಣೆ ಮಾಡಲಾಗಿದೆ. ಹಲ್ಲು ಹೇಗೆ ಉಜ್ಜಬೇಕು ಎಂಬ ಪ್ರಾತ್ಯಕ್ಷಿಕೆಯನ್ನು 1800 ಬಾರಿ ಮಾಡಲಾಗಿದೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳಂತಹ ಚಟುವಟಿಕೆಗಳನ್ನು ಮಾಡಲಾಗುತ್ತಿದೆ’ ಎಂದು ಡಾ.ಪ್ರಿಯದರ್ಶಿನಿ ಹೇಳಿದರು.

ರೋಟರಿಯ ಸಂಸ್ಥಾಪಕ ಸದಸ್ಯ ಶ್ರೀನಿವಾಸ್ ಶೆಟ್ಟಿ, ‘ಬಾಯಿ, ಕಣ್ಣು, ಕಿವಿಗಳ ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯ. ಹಲ್ಲು ಬಾಯಿ ಸ್ವಚ್ಛವಾಗಿರುವುದು ದೇಹದ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಎರಡು ಬಾರಿ ಕಡ್ಡಾಯವಾಗಿ ಹಲ್ಲುಜ್ಜಬೇಕು’ ಎಂದು ಸಲಹೆ ನೀಡಿದರು.

ಮಕ್ಕಳ ದಂತವೈದ್ಯ ಅಮಿತ್ ಕುರ್ತಕೋಟಿ ಮಾತನಾಡಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿನೋದ್‌ ನಾಯಕ್‌, ಸಂಜನಾ, ಬಾಲಾಜಿ, ಯೋಗೇಶ್‌ ಎಂಬ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ವೈದ್ಯಾಧಿಕಾರಿಗಳಾದ ಡಾ.ಶ್ರೀಕಾಂತ್, ಡಾ.ಗೀತಾರಾಣಿ, ಡಾ.ಸುಪ್ರಿಯಾ, ಡಾ.ಚಿದಾನಂದ್ ಜಾಧವ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ದೀನಾ, ಉಪಾಧ್ಯಕ್ಷ ಕಾಗಲವಾಡಿ ಚಂದ್ರು, ರೋಟರಿ ಸದಸ್ಯ ಅಶ್ವಥ್ ನಾರಾಯಣ್, ಸಿಆರ್‌ಪಿ ಶಿವಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ಬೋಧಕರು, ಮಕ್ಕಳು ಇದ್ದರು.

ಶೇ 80ರಷ್ಟು ಮಕ್ಕಳ ಹಲ್ಲುಗಳಲ್ಲಿ ಹುಳುಕು

‘ಶೇ 80-85 ಮಕ್ಕಳ ಹಲ್ಲುಗಳಲ್ಲಿ ಹುಳುಕು ಇರುವುದು ತಪಾಸಣೆ ವೇಳೆ ಕಂಡು ಬಂದಿದೆ. ಮಣ್ಣು ಮಸಿ ಕಡ್ಡಿಗಳಿಂದ ಹಲ್ಲುಜ್ಜುತ್ತಿದ್ದಾರೆ. ಬ್ರಶ್ ಪೇಸ್ಟ್ ಬಳಸುವವರು ಕಡಿಮೆ. ಪರೀಕ್ಷೆಗೆ ಕರೆದುಕೊಂಡು ಬರಲು ಪೋಷಕರೂ ಮನಸ್ಸು ಮಾಡುತ್ತಿಲ್ಲ’ ಎಂದು ಪ್ರಿಯದರ್ಶಿನಿ ಹೇಳಿದರು. ‘ಈ ಶಾಲೆಯ ಮಕ್ಕಳಿಗೆ ರೋಟರಿ ಸಂಸ್ಥೆಯರು ಟೂತ್ ಬ್ರಶ್ ಮತ್ತು ಪೇಸ್ಟ್ ನೀಡಿದ್ದಾರೆ. ಅವರ ಸಹಕಾರದಿಂದ ಮಕ್ಕಳಿಗೆ ಹಲ್ಲುಜ್ಜುವ ವಿಧಾನ ತಿಳಿಸಿಕೊಡಲಾಗುತ್ತಿದೆ. ಬಾಯಿಯ ಆರೋಗ್ಯ ಕಾಪಾಡಾಲು ಏನೇನು ಮಾಡಬೇಕು ಎಂಬುದನ್ನು ವಿವರಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT