ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಾವು ದಿನ: ಜೀವ ರಾಶಿಯ ಅಪರೂಪದ ರತ್ನ ‘ಹಾವು’

Last Updated 16 ಜುಲೈ 2022, 8:08 IST
ಅಕ್ಷರ ಗಾತ್ರ

ಯಳಂದೂರು: ಭೂಮಿಯಲ್ಲಿರುವ ಜೀವರಾಶಿಗಳಲ್ಲಿ ಕಂಡು ಬರುವ ಸರೀಸೃಪಗಳಲ್ಲಿ ಉರಗಗಳಿಗೆ ಮೊದಲ ಸ್ಥಾನ. ಆದರೆ, ಇಂದು ಇವುಗಳ ಆವಾಸ ಕಿರಿದಾಗುತ್ತ, ಹಾದಿ ಬದಲಾಗುತ್ತ ಕೆಲವು ಅಳಿವಿನಂಚು ಮುಟ್ಟಿವೆ. ಉರಗ ಪ್ರೇಮಿಗಳು ಇವುಗಳ ಸಂರಕ್ಷಣೆಗೆ ಜೀವವನ್ನೇ ಪಣಕ್ಕೆ ಇಟ್ಟಿದ್ದಾರೆ.

ಗಡಿಜಿಲ್ಲೆಯ ಪ್ರಕೃತಿಯು ವಿಶಿಷ್ಟ ಹಾಗೂ ವೈವಿಧ್ಯಮಯ ಉರಗಗಳ ಉಗಮಕ್ಕೆ ನೆರವಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟ ಕೂಡುವ ಪ್ರದೇಶ ವಿಶೇಷ ಜೀವಿಗಳಿಗೆ ಆಶ್ರಯ ನೀಡಿದೆ. ಇಲ್ಲಿನ ಅರಣ್ಯ, ಜಲ, ಹೊಲ, ಗದ್ದೆ, ಮತ್ತು ವೃಕ್ಷಗಳಲ್ಲಿ ಜೀವಜಾಲದ ಭಾಗವಾಗಿ ಹಾವು ಉಳಿದುಕೊಂಡಿವೆ. ನಿರಪದ್ರವಿ ಹಾಗೂ ಉಪಕಾರಿ ಹಾವುಗಳನ್ನು ಸಂರಕ್ಷಿಸುವ ಜರೂರು ಇದೆ

‘ವನ್ಯಜೀವಿ ತಾಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಬಗೆಯ ಉರಗಗಳು ಕಾಣ ಸಿಗುತ್ತವೆ. ಕಾಡಂಚಿನ ಪ್ರದೇಶದಲ್ಲಿ ಹೆಬ್ಬಾವು, ಕಬ್ಬಿನ ತಾಕುಗಳಲ್ಲಿ ಕೊಳಕು ಮಂಡಲ, ಸರ್ಪಗಳು ಕಾಣಿಸಿಕೊಳ್ಳುತ್ತಿರುತ್ತವೆ. ಇವು ಕೃಷಿಕರಿಗೆ ಉಪದ್ರವ ನೀಡುವ ಸಣ್ಣ ಪ್ರಾಣಿಗಳನ್ನು ಭಕ್ಷಿಸಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡುತ್ತವೆ. ಬೆಳೆಗಳಿಗೆ ಬಳಸುವ ಅತಿಯಾದ ಕೀಟನಾಶಕ ಹಾಗೂ ಮಾನವನ ಹಸ್ತಕ್ಷೇಪದಿಂದ ಉರಗ ಸಂತತಿಗೆ ತೊಂದರೆಯಾಗುತ್ತಿದ್ದು, ಅಪಾಯದ ಅಂಚಿಗೆ ತಲುಪಿವೆ' ಎಂದು ಉರುಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್ ಹೇಳಿದರು.

ಅಭಯಾರಣ್ಯದ ಹಾವು:ತಾಲ್ಲೂಕಿನ ಬಿಆರ್‌ಟಿ ಕಾನನಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ 25 ಬಗೆಯ ಉರಗಗಳನ್ನು ಗುರುತಿಸಲಾಗಿದೆ. ಹಾರುವ ಹಾವು, ಹುಸಿ ನಾಗರ, ನೀರುಕಾಟಿ, ಮಣ್ಣುಮುಕ್ಕ ಹಾವುಗಳಿಗೆ ಕಂಟಕ ಎದುರಾಗಿದೆ. ಕುರುಡಾವು, ಉಬ್ಬುಮೂಗಿನ ಹಾವು, ಬಿದಿರ ಹಾವು ಹಾಗೂ ಹಾಸುಂಬೆ ಹಾವುಗಳು ತಮ್ಮ ಆಕರ್ಷಣೆಯ ಕಾರಣಕ್ಕೆ ಅಪಾಯ ಎದುರಿಸುತ್ತಿವೆ. ಪಟ್ಟೆಕುಕ್ರಿ, ಬಿಸಿಲಹಾವು ವಿಶೇಷ ಮನ್ನಣೆಗೆ ಪಾತ್ರವಾಗಿವೆ. ವನ್ಯಜೀವಿ ಕಾಯ್ದೆ (1972) ಪ್ರಕಾರ ಇವುಗಳನ್ನು ಸೆರೆಹಿಡಿಯುವುದು, ಸಾಗಿಸುವುದು ನಿಷಿದ್ಧ.

15,500 ಹಾವು ಸಂರಕ್ಷಣೆ: ಮಹೇಶ್

ಅಮೆರಿಕದಲ್ಲಿ 1967ರಲ್ಲಿ ಸ್ನೇಕ್ ಫಾರ್ಮ್ ಸಂಸ್ಥೆ ಉರುಗ ದಿನ ಆಚರಿಸಿತು. ಹಾವುಗಳ ರಕ್ಷಣೆ, ಅಗತ್ಯದ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿತು. ಈಗ ವಿಶ್ವದಾದ್ಯಂತ ಹಾವುಗಳ ದಿನಕ್ಕೆ ಮನ್ನಣೆ ದಕ್ಕಿದೆ.

‘ವಿಶ್ವದಲ್ಲಿ 3500ಕ್ಕೂ ಹೆಚ್ಚಿನ ಜಾತಿಯ ಹಾವುಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 600 ವಿಷಕಾರಿ. 200 ಮಾತ್ರ ಅಪಾಯಕಾರಿ. ದಾರ ಹಾವುಗಳ ಉದ್ದ ಬರೀ 4 ಇಂಚು. ಹೆಬ್ಬಾವು ಮತ್ತು ಆನಕೊಂಡ ಬಹಳ ಉದ್ದವಾಗಿವೆ. ಭಾರತದಲ್ಲಿ ಹಾವುಗಳ 50 ಪ್ರಭೇದ ಗುರುತಿಸಲಾಗಿದ್ದು, ತಾಲ್ಲೂಕಿನಾದ್ಯಂತ 30ಕ್ಕೂ ಹೆಚ್ಚಿನ ಜಾತಿ ಉರಗಗಳು ಕಂಡುಬಂದಿವೆ’ ಎಂದರು.

‘ ಇವುಗಳಲ್ಲಿ 4 ವಿಷಕಾರಿ. ನಾನು ಇದುವರೆಗೆ 15,500 ಹಾವುಗಳನ್ನು ರಕ್ಷಿಸಿದ್ದೇನೆ. ಈ ಪೈಕಿ, ಅಂಗೈ ಅಗಲದ ವಿಷಕಾರಿ ಹವಳದ ಹಾವು ಹಾಗೂ ಅಪರೂಪದ ಬಿಳಿ ನಾಗರವನ್ನು ರಕ್ಷಣೆ ಮಾಡಿದ್ದು ಸ್ಮರಣೀಯ’ ಎಂದು ಸ್ನೇಕ್ ಮಹೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT