ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಹೈಬ್ರಿಡ್ ಭತ್ತ ಬೆಳೆಯಲು ರೈತರ ಚಿತ್ತ

ಸಣ್ಣ ಅಕ್ಕಿ ಭತ್ತ, ಘಮಲಕ್ಕಿ ಹಾಗೂ ರಾಜಭೋಗ ತಳಿಗಳತ್ತ ಕುಸಿತ ಆಸಕ್ತಿ
Published 30 ಆಗಸ್ಟ್ 2024, 5:11 IST
Last Updated 30 ಆಗಸ್ಟ್ 2024, 5:11 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಭತ್ತ ನಾಟಿ ಪ್ರಕ್ರಿಯೆ ಚುರುಕು ಪಡೆದಿದೆ. ಕೆರೆ, ಕಾಲುವೆ ಅಚ್ಚುಕಟ್ಟು ಪ್ರದೇಶದ ಹಿಡುವಳಿಗಳಲ್ಲಿ ಬಿತ್ತನೆ ಕಾರ್ಯ ಭರದಿಂದ  ನಡೆದಿದೆ.

ಈ ವರ್ಷ ರೈತರು ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಭತ್ತದ ತಳಿಯ ಬದಲಾಗಿ ಹೈಬ್ರಿಡ್ ಭತ್ತ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ಹೆಚ್ಚು ಇಳುವರಿ ಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ಆರ್‌ಎನ್‌ಆರ್ ತಳಿಯ ಭತ್ತವನ್ನು ನಾಟಿ ಮಾಡುತ್ತಿದ್ದಾರೆ.

ಲಗಾಯ್ತಿನಿಂದ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಣ್ಣ ಭತ್ತ, ಘಮಲಕ್ಕಿ, ರಾಜಭೋಗ ಮತ್ತಿತರ ತಳಿಗಳನ್ನು ಬೆಳೆಯುತ್ತಾ ಬಂದಿದ್ದರು. ವಾಣಿಜ್ಯ ಉದ್ದೇಶದ ಹೊರತಾಗಿ ಮನೆಯ ಬಳಕೆಯ ದೃಷ್ಟಿಯಿಂದ ಸಾಂಪ್ರದಾಯಿಕ ಭತ್ತದ ತಳಿ ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದರು. ಭರಪೂರ ಕೊಟ್ಟಿಗೆ ಗೊಬ್ಬರ, ಗೋಮೂತ್ರ, ಹಸಿ ಸೊಪ್ಪನ್ನು ಸಾವಯವ ಗೊಬ್ಬರವಾಗಿ ಬಳಸಿ ಬೆಳೆಯುತ್ತಿದ್ದರು.

ಆದರೆ, ಈಚೆಗೆ ವಾಣಿಜ್ಯ ಉದ್ದೇಶದಿಂದ ಹೆಚ್ಚು ಇಳುವರಿ ನೀಡುವ ಐಆರ್ 64, ಕೆಆರ್‌ಎಚ್ 4, ವಿಎನ್ಆರ್ 2233, ಪಿಎಸಿ 01 ಹಾಗೂ ತನು ತಳಿಯ ಭತ್ತ ಬೆಳೆಯುವತ್ತ ಕೃಷಿಕರು ಚಿತ್ತ ಹರಿಸಿದ್ದಾರೆ ಎಂದ ಮಲಾರಪಾಳ್ಯದ ರೈತ ಪ್ರದೀಪ್ ನಾಯಕ್ ಹೇಳಿದರು.

ಆರ್‌ಎನ್‌ಆರ್ 15045 ತಳಿಯ ಭತ್ತ ಗಾತ್ರದಲ್ಲಿ ಸಣ್ಣದಾಗಿದ್ದು ಊಟಕ್ಕೆ ಹೆಚ್ಚು ಬೇಡಿಕೆ ಇದೆ. ಎಕರೆಗೆ 16 ರಿಂದ 18 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು. ನಾಲೆಯಲ್ಲಿ ನೀರು ಹರಿಯುವುದರಿಂದ ಬೆಳೆಗೆ ತೊಂದರೆ ಇಲ್ಲ. ಹೀಗಾಗಿ ಅಚ್ಚುಕಟ್ಟಿನ ಎಲ್ಲ ವ್ಯವಸಾಯಗಾರಿಗೂ ದೊರಕುವಂತೆ ಅಧಿಕಾರಿಗಳು ಕೆರೆ ಕಟ್ಟೆಗಳಿಗೂ ನೀರು ಹರಿಸಬೇಕಿದೆ ಎಂದು ಮೆಲ್ಲಹಳ್ಳಿ ರಂಗಸ್ವಾಮಿ ನಾಯಕ ಹೇಳಿದರು.

500 ಕ್ವಿಂಟಲ್ ಬೀಜ ಮಾರಾಟ:

ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಆರ್‌ಎನ್‌ಆರ್ 15048 ಭತ್ತದ ತಳಿಯ ಬಿತ್ತನೆ ಭತ್ತ ಮಾರಾಟವಾಗಿದೆ. ಪ್ರತಿ ಎಕರೆಗೆ 15 ಕೆಜಿ ಬೀಜ ಬೇಕಿದೆ. 130 ದಿನದಲ್ಲಿ ಕಟಾವಿಗೆ ಬರುತ್ತದೆ. ಸಕ್ಕರೆ ಅಂಶ ಕಡಿಮೆ ಇರುವ ಈ ತಳಿಯ ಜೊತೆಗೆ ಶೇ 70ರಷ್ಟು ಸಣ್ಣಮಧು, ಬೆಣ್ಣೆ ಸೂಪರ್ ಆಂಧ್ರ ಪ್ರದೇಶದ ತಳಿಗಳ ಬಿತ್ತನೆಗೆ ರೈತರು ಒಲವು ತೋರಿದ್ದಾರೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗಶೆಟ್ಟಿ ಹೇಳಿದರು.

ಕೇರಳದ ವಯನಾಡ್‌ನಲ್ಲಿ ಹೆಚ್ಚು ಮಳೆ ಸುರಿದಿದ್ದು ಕಬಿನಿ ಆಣೆಕಟ್ಟೆ ತುಂಬಿದೆ. ನಾಲೆಗಳ ಮೂಲಕ ನೀರು ಆಗಸ್ಟ್ ಮೊದಲ ವಾರದಲ್ಲಿ ಹರಿದಿದೆ. ಈ ಸಮಯ ಬಿತ್ತನೆ ಮಾಡಿದ ರೈತರು ಈಗ ಸಸಿ ಮಡಿಯಿಂದ ಪೈರು ಕಿತ್ತು ಸಾಗುವಳಿ ಮಾಡುತ್ತಿದ್ದಾರೆ. ಈ ಬಾರಿ ತಿಂಗಳ ಮೊದಲೇ ನಾಟಿ ಕಾರ್ಯ ಮುಗಿಯಲಿದೆ. ಇಳುವರಿಯೂ ಹೆಚ್ಚಾಗಲಿದೆ ಎನ್ನುತ್ತಾರೆ ಬೂದಿತಿಟ್ಟು ಗ್ರಾಮದ ಕೃಷಿಕ ರಾಜೇಶ್.

ಪ್ರತಿ ವರ್ಷ ಸೆಪ್ಟೆಂಬರ್ ಹಾಗೂ ಡಿಸೆಂಬರ್ ತನಕ ಬಿತ್ತನೆ ಸಾಗುತ್ತಿತ್ತು. ಇದರಿಂದ ಹಾಲುಗಟ್ಟದ ಭತ್ತದ ಕಾಳು, ಕೊರೆ ನೀರಿಗೆ ಕರಗಿ ಜೊಳ್ಳಾಗಿ ತೂಕ ಕಳೆದುಕೊಳ್ಳುತ್ತಿತ್ತು. ಆದರೆ, ಈ ಸಲ ಭತ್ತಕ್ಕೆ ಬೇಕಾದ ಉಷ್ಣಾಂಶ ಹಾಗೂ ಕಾಲುವೆ ನೀರು ಸಕಾಲದಲ್ಲಿ ಗದ್ದೆ ತಲುಪಿದೆ. ಮಳೆ ಕೊರತೆ ನಡುವೆಯೂ ಸಸಿ ಮಡಿ ಕೈಸೇರಿದ್ದು, ನಾಟಿಗೆ ಸಿದ್ಧವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಅಮೃತೇಶ್ವರ.

ಉತ್ತಮ ವಾತಾವರಣ

ಈ ಬಾರಿ ಕಾಲುವೆಗಳಲ್ಲಿ ನಿರೀಕ್ಷೆಗಿಂತ ಮುಂಚಿತವಾಗಿ ನೀರು ಹರಿದಿದೆ. ಇದರಿಂದ ರೈತರ ಜೀವನಾಡಿ ಕೆರೆ ಕಟ್ಟೆಗಳು ತುಂಬುವ ನಿರೀಕ್ಷೆ ಮೂಡಿಸಿದೆ. ಇದರಿಂದ ಭತ್ತ ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ನಡೆಯಲಿದ್ದು ಕಬಿನಿ ಕಾಲುವೆ ಕೊಳವೆ ಬಾವಿ ನೀರಿನ ಲಭ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT