ಮಂಗಳವಾರ, ಮೇ 18, 2021
22 °C
ಕೋವಿಡ್ ನಿಯಂತ್ರಣ: ಪೊಲೀಸರು, ಸ್ಥಳೀಯ ಆಡಳಿತದ ಸಿಬ್ಬಂದಿಯೊಂದಿಗೆ ಕೈಜೋಡಿಸಲಿರುವ ಸ್ವಯಂ ಸೇವಕರು

ನಿಯಮ ಉಲ್ಲಂಘನೆ ನಿಗಾಕ್ಕೆ ಸುರಕ್ಷಾ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡುವುದಕ್ಕಾಗಿ ಜಿಲ್ಲಾಡಳಿತ ಯುವ ಕೋವಿಡ್‌ ಸುರಕ್ಷಾ ಪಡೆಗಳನ್ನು ರಚಿಸಿದೆ. ರಾಜ್ಯದಲ್ಲೇ ಇದು ಮೊದಲ ಪ್ರಯತ್ನ ಎಂದು ಹೇಳಲಾಗಿದೆ. 

ನೆಹರು ಯುವ ಕೇಂದ್ರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೈಸರ್ಗಿಕ ವಿಪತ್ತು ಕ್ಷಿಪ್ರ ಕಾರ್ಯ ತಂಡದ (ಡಿ–ರ‍್ಯಾಟ್‌) ಸದಸ್ಯರನ್ನು ಬಳಸಿಕೊಂಡು ಸುರಕ್ಷಾ ಪಡೆಯನ್ನು ರಚಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ಈ ತಂಡದ ಸದಸ್ಯರು ಪೊಲೀಸರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ನಿಗಾ ಇಡಲಿದ್ದಾರೆ. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಹಾಗೂ ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ಅವರು ಸುರಕ್ಷಾ ಪಡೆಯ ಕಾರ್ಯಾಚರಣೆಗೆ ಚಾಲನೆ ನೀಡಿದರು. 

ಜಿಲ್ಲೆಯಾದ್ಯಂತ 65 ಸ್ವಯಂ ಸೇವಕರು ಈ ಸುರಕ್ಷಾ ಪಡೆಯಲ್ಲಿರಲಿದ್ದಾರೆ.  13 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ಐವರು ಸದಸ್ಯರು ಇರಲಿದ್ದಾರೆ. ಈ ಪೈಕಿ ಮೂವರು ಡಿ–ರ‍್ಯಾಟ್‌ ಸ್ವಯಂ ಸೇವಕರು. ಇನ್ನೊಬ್ಬರು ಪೊಲೀಸ್‌ ಸಿಬ್ಬಂದಿ ಹಾಗೂ ಮತ್ತೊಬ್ಬರು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿ.

ತಂಡಗಳ ಚಟುವಟಿಕೆಗಳಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 15 ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕು ವೇಗವಾಗಿ ಹರಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನ ಭಾವ ಕಾಣುತ್ತಿದ್ದೇವೆ. ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಜೊತೆಯಲ್ಲಿಯೇ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ವಿಪತ್ತು ನಿರ್ವಹಣೆಗೆ ತರಬೇತಿ ಪಡೆದಿರುವ ಐವತ್ತು ಯುವ ಜನರನ್ನು ಸುರಕ್ಷಾ ಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರೊಂದಿಗೆ ಪೊಲೀಸರು, ನಗರಸಭೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಇರಲಿದ್ದಾರೆ’ ಎಂದರು.

‘ಕೋವಿಡ್ ಶಿಷ್ಟಾಚಾರ ಉಲ್ಲಂಘನೆ, ಸಭೆ ಸಮಾರಂಭ, ಮದುವೆಗಳಲ್ಲಿ ಮಾರ್ಗಸೂಚಿ ಅನ್ವಯ ನಿಗದಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚು ಜನರು ಇರುವುದು ಕಂಡುಬಂದಲ್ಲಿ ಸುರಕ್ಷಾ ಪಡೆ ದಂಡ ವಿಧಿಸಲಿದೆ. ಜನಸಂದಣಿ ಸ್ಥಳಗಳು, ಹೋಟೆಲ್, ಅಂಗಡಿ-ಮುಂಗಟ್ಟು, ವ್ಯಾಪಾರ, ಉದ್ದಿಮೆ ಸ್ಥಳಗಳು, ದ್ವಿಚಕ್ರ ವಾಹನ, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಸಂಚರಿಸುವ ವೇಳೆ ಮಾಸ್ಕ್ ಧರಿಸದಿರುವವರ ಮೇಲೆ ತಂಡದ ಸದಸ್ಯರು ದಂಡ ಹಾಕಲಿದ್ದಾರೆ. ಅಲ್ಲದೇ ಕೋವಿಡ್ ಕುರಿತು ಅರಿವನ್ನೂ ಉಂಟು ಮಾಡಲಿದ್ದಾರೆ’ ಎಂದರು. 

‘ಅಂಗಡಿ ಮುಂಗಟ್ಟು, ಹೋಟೆಲ್ ಸೇರಿದಂತೆ ಯಾವುದೇ ವ್ಯಾಪಾರಿಗಳು ವ್ಯಾಪಾರದ ಸ್ಥಳದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಖರೀದಿ ಹಾಗೂ ಸೇವೆಗೆ ಅವಕಾಶ ಮಾಡಿಕೊಡಬಾರದು. ಕೋವಿಡ್ ಆದೇಶ ಉಲ್ಲಂಘನೆ ಮಾಡಿದಲ್ಲಿ ಅಂಗಡಿ ಮುಚ್ಚಿಸಿ ಉದ್ದಿಮೆ ಪರವಾನಗಿ ರದ್ದು ಮಾಡಲಾಗುತ್ತದೆ. ಅಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪೊಲೀಸರ ಮೂಲಕ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು. 

ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಗರಸಭೆ ಆಯುಕ್ತ ಕರಿಬಸವಯ್ಯ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್ ಕಾರಂತ್, ಪರಿಸರ ಎಂಜಿನಿಯರ್ ಗಿರಿಜಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಶರವಣ, ಮಹದೇವಸ್ವಾಮಿ, ಪೊಲೀಸ್ ಅಧಿಕಾರಿಗಳು ಇದ್ದರು. 

ಜಿಲ್ಲಾಧಿಕಾರಿ ಖುದ್ದು ಪರಿಶೀಲನೆ

ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿ ಖುದ್ದಾಗಿ ನಗರದ ಚಾಮರಾಜೇಶ್ವರ ದೇವಾಲಯದ ರಸ್ತೆ, ದೊಡ್ಡಂಗಡಿ ಬೀದಿ, ಎಸ್ಬಿಐ ರಸ್ತೆ, ರಥದ ಬೀದಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆಗಳಲ್ಲಿ ಸಂಚರಿಸಿ ಸೀಟಿ ಊದುವ ಮೂಲಕ ಮಾಸ್ಕ್ ಧರಿಸದೆ ಇರುವವರ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ಕೋವಿಡ್ ಶಿಷ್ಟಾಚಾರ ಪಾಲನೆಗೆ ಅರಿವು ಮೂಡಿಸಿದರು.

ಅಂಗಡಿ ಮುಂಗಟ್ಟುಗಳಿಗೆ ದಿಢೀರನೆ ಭೇಟಿ ನೀಡಿದ ಅವರು, ಕೆಲ ಅಂಗಡಿಗಳಲ್ಲಿ ಮಾಸ್ಕ್ ಧರಿಸದೆ ವ್ಯಾಪಾರ, ಖರೀದಿಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಅಂಗಡಿ ಮುಚ್ಚಿಸಲು ಆದೇಶಿಸಿದರು. ಕೋವಿಡ್ ಶಿಷ್ಟಾಚಾರ ಉಲ್ಲಂಘಿಸಿದ ಅಂಗಡಿಗಳನ್ನು ಮುಚ್ಚಿಸಲಾಯಿತು. ಮಾಸ್ಕ್ ಧರಿಸದೇ ಇರುವವರಿಗೆ ಅಧಿಕಾರಿಗಳು ₹100 ದಂಡವನ್ನೂ ವಿಧಿಸಿದರು.

ದಿನಸಿ ಅಂಗಡಿ, ಬೇಕರಿ, ಜವಳಿ, ಆಭರಣ ಮಳಿಗೆ ಸೇರಿದಂತೆ ಹಲವಾರು ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಮಾಲೀಕರಿಗೆ ಮಾಸ್ಕ್ ಧರಿಸುವ ಕುರಿತು ತಿಳಿವಳಿಕೆ ನೀಡುವ ಫಲಕಗಳನ್ನು ಪ್ರದರ್ಶಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು. ಮಾಸ್ಕ್ ಧರಿಸದೇ ಬರುವ ಗ್ರಾಹಕರಿಗೆ ಖರೀದಿ ಸೇವೆಗೆ ಅವಕಾಶ ನೀಡಬಾರದೆಂದು ಸೂಚಿಸಿದರು.

ಸಾರ್ವಜನಿಕರು, ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳೊಂದಿಗೆ ಮಾತನಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಮಹತ್ವ ಕುರಿತು ತಿಳಿವಳಿಕೆ ನೀಡಿದರು. ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡದಿದ್ದಲ್ಲಿ ಗಂಭೀರ ಕ್ರಮಗಳಿಗೆ ಮುಂದಾಗುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು