ಸೋಮವಾರ, ಜನವರಿ 25, 2021
15 °C
ಸಕಾಲದಲ್ಲಿ ಸಾಲ ಮರುಪಾವತಿಸಲು ಸಂಘಗಳಿಗೆ ಮನವಿ

₹ 3 ಕೋಟಿ ಸಾಲ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೆಚ್ಚುವರಿ ಬಡ್ಡಿದರವಿದೆ. ರೈತರಿಗಾಗಿಯೇ ಇರುವ ಡಿಸಿಸಿ ಬ್ಯಾಂಕಿನಿಂದ ರೈತರಿಗೆ, ಮಹಿಳಾ ಗುಂಪುಗಳಿಗೆ ಬಡ್ಡಿರಹಿತ ಸಾಲ ವಿತರಣೆ ಮಾಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ನಿರ್ದೇಶಕ ವಿ. ವೆಂಕಟಾಶಿವಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ಪಾತಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದಲ್ಲಿ ಡಿಸಿಸಿ ಬ್ಯಾಂಕಿನ ನೆರವಿನಿಂದ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಕುರಿ, ಕೋಳಿ, ಹಂದಿ ಸಾಕಾಣಿಕೆಗೆ ಸೇರಿದಂತೆ ವಿವಿಧ ಸಾಲ ಸೌಲಭ್ಯ ನೀಡಲಾಗುವುದು. ಮಹಿಳೆಯರು 10 ಮಂದಿ ಸೇರಿ ಸಂಘ ಮಾಡಿಕೊಂಡು ಪೂರ್ಣ ದಾಖಲೆಗಳನ್ನು ನೀಡಿದರೆ ಡಿಸಿಸಿ ಬ್ಯಾಂಕಿನಿಂದ ಸಾಲ ನೀಡಲಾಗುವುದು. ಆದರೆ ಮಹಿಳೆಯರು, ರೈತರು ಸಾಲ ಸೌಲಭ್ಯ ಪಡೆಯಲು ಬರುತ್ತಿಲ್ಲ. ಎಷ್ಟೇ ಜನರು ಬಂದರೂ ಸಾಲ ನೀಡಲು ಸಿದ್ಧರಿದ್ದೇವೆ. ಹೈನುಗಾರಿಕೆ, ರೇಷ್ಮೆ ಸೇರಿದಂತೆ ಟೈಲರಿಂಗ್, ಆಹಾರ ಪದಾರ್ಥ ತಯಾರಿಕೆ ಮಾಡಲು ಸಾಲ ಸೌಲಭ್ಯ ನೀಡಲಾಗುವುದು
ಎಂದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚೇತನ್ ಮಾತನಾಡಿ, ಪಾತಪಾಳ್ಯ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ 2020-21ನೇ ಸಾಲಿನಲ್ಲಿ 467 ಮಂದಿಗೆ ₹ 3 ಕೋಟಿ ಸಾಲ ನೀಡಲಾಗಿದೆ. 108 ಮಹಿಳಾ ಗುಂಪುಗಳ 1,296 ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗಿದೆ. ರೈತರು, ಮಹಿಳೆಯರು ಹೆಚ್ಚಾಗಿ ಸಾಲ ಸೌಲಭ್ಯ ಪಡೆದುಕೊಂಡು, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಾಸ್ ಪುಸ್ತಕ ಹಾಗೂ ಎಟಿಎಂ ಕಾರ್ಡ್‌ ಬಳಕೆ ಬಗ್ಗೆ ಚೇತನ್ ಅವರು ಪ್ರಾತ್ಯಕ್ಷಿಕೆ ತೋರಿಸಿದರು. ಎಟಿಎಂ ಪಿನ್ ನಂಬರ್ ಅನ್ನು ಅರ್ಹ ಫಲಾನುಭವಿಗಳು ಬಳಕೆ ಮಾಡಬೇಕು. ಅನ್ಯರಿಗೆ ತಿಳಿಸಬಾರದು. ಬೇರೆಯವರು ಬಳಕೆ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಆರ್. ಸುಧಾಕರರೆಡ್ಡಿ, ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ. ರಾಮಚಂದ್ರರೆಡ್ಡಿ, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ನಿರ್ದೇಶಕರಾದ ಎಸ್.ಎನ್. ರಾಮರೆಡ್ಡಿ, ಎನ್. ಅಶ್ವಥ್ಥರೆಡ್ಡಿ, ಅಬೂಬ್‌‌ಕರ್, ವಿ. ಮಂಜುನಾಥ್, ವಿ.ಎಸ್. ವೆಂಕಟಸ್ವಾಮಿ, ರಾಮಲಕ್ಷ್ಮಿ ಸುರೇಶ್, ಸರೋಜಮ್ಮ, ಮಂಜುಳಾ, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಆಂಜನೇಯರೆಡ್ಡಿ, ಸಂಘದ ಕಾರ್ಯದರ್ಶಿ ಶ್ರೀನಾಥ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.