ಶುಕ್ರವಾರ, ಜನವರಿ 27, 2023
19 °C
ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಪ್ರಕಟ

ಚಿಕ್ಕಬಳ್ಳಾಪುರದಲ್ಲಿ 10 ಲಕ್ಷ ಮತದಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಂತಿಮ ಮತದಾರರ ಪಟ್ಟಿಯ ಅನ್ವಯ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,25,648 ಮತದಾರರು ಇದ್ದಾರೆ. ಈ ಪೈಕಿ 5,08,550 ಪುರುಷರು ಹಾಗೂ 5,17,098 ಮಹಿಳೆಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮತದಾರರ ಪಟ್ಟಿ ಪ್ರಕಟ ಸಂಬಂಧ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅಂತಿಮ ಮತದಾರರ ಪಟ್ಟಿಯ ಬಗ್ಗೆ ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿಯನ್ನು ಮತದಾರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರ ನೋಂದಣಾಧಿಕಾರಿ ಕಚೇರಿಗಳಲ್ಲಿ ಹಾಗೂ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ ಎಂದರು. 

ಮತದಾರರ ಪಟ್ಟಿಗೆ ನಮೂನೆ 6 ರಲ್ಲಿ 26,187 ಮತದಾರರನ್ನು ಸೇರ್ಪಡೆ ಮಾಡಿ, ನಮೂನೆ 7ರಲ್ಲಿ 11,124 ಮತದಾರರನ್ನು ಕೈಬಿಡಲಾಗಿದೆ. ನಮೂನೆಯಲ್ಲಿ 8 ರಲ್ಲಿ 19,601 ತಿದ್ದುಪಡಿಗಳನ್ನು ಮಾಡಲಾಗಿದೆ. ನಮೂನೆ 6ಬಿ ಅನ್ವಯ ಜಿಲ್ಲೆಯ ಶೇ.83.02 ರಷ್ಟು ಮತದಾರರನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗಿದೆ ಎಂದು ವಿವರಿಸಿದರು.

ಆಧಾರ್ ಜೋಡಣೆ ಪ್ರಕ್ರಿಯೆಯು ಮುಂದುವರಿಯಲಿದೆ. ನೂತನವಾಗಿ ನೋಂಣಿಯಾಗಿರುವ ಹಾಗೂ ತಿದ್ದುಪಡಿಗೆ ಒಳಪಟ್ಟಿರುವ ಮತದಾರರ ಗುರುತಿನ ಚೀಟಿಯನ್ನು ಸಂಬಂಧಪಟ್ಟ ಮತದಾರರಿಗೆ ಅಂಚೆ ಮೂಲಕ ಕಳುಹಿಸಲಾಗುತ್ತಿದೆ. ಒಟ್ಟು 10,660 ಮತದಾರರ ಗುರುತಿನ ಚೀಟಿಗಳನ್ನು ಶೀಘ್ರವೇ ಅಂಚೆ ಮೂಲಕ ಕಳುಹಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು. 

1281 ಮತಗಟ್ಟೆಗಳು: ಅಂತಿಮ ಮತದಾರ ಪಟ್ಟಿಯಲ್ಲಿ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ ಸಹ ಪ್ರಕಟಿಸಲಾಗಿದೆ. ಆ ಪ್ರಕಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲು 955 ಗ್ರಾಮಾಂತರ ಪ್ರದೇಶದ ಮತಗಟ್ಟೆಗಳು, 328 ನಗರ ಮತಗಟ್ಟೆಗಳು ಸೇರಿದಂತೆ 1,281 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಜಕೀಯ ಪ್ರತಿನಿಧಿಗಳೊಂದಿಗೆ ಸಭೆ: ಅಂತಿಮ ಮತದಾರರ ಪಟ್ಟಿ ಬಿಡುಗಡೆ  ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು. ಮತದಾರರ ಪಟ್ಟಿಯ ಅಂಕಿ ಅಂಶಗಳನ್ನು ನೀಡಿದರು.

ಜೊತೆಗೆ ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಅಂತಿಮ ಮತದಾರರ ಪಟ್ಟಿಯ ಅಂಕಿ ಅಂಶ ಮತ್ತು ಮಾಹಿತಿಗಳನ್ನು ಮಿಂಚಂಚೆ ಮೂಲಕ ಹಾಗೂ ಭೌತಿಕವಾಗಿ ದಾಖಲೆಗಳನ್ನು ರಾಜಕೀಯ ಪಕ್ಷಗಳ ಕಚೇರಿಗೆ ತಲುಪಿಸಿರುವುದಾಗಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಮುನೇಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ವಿ.ಆನಂದ್, ಸಿಪಿಎಂ ಪಕ್ಷದ ಸದಸ್ಯ ಮುನಿಕೃಷ್ಣಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.