ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಜಿಲ್ಲೆಯಲ್ಲಿ 305 ಮಂದಿ ಗ್ರಾ.ಪಂ ಸದಸ್ಯರಿಗಿಲ್ಲ ಓದು ಬರಹ

Published 9 ಮೇ 2024, 7:12 IST
Last Updated 9 ಮೇ 2024, 7:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಡಳಿತ ವಿಕೇಂದ್ರೀಕರಣದ ಮೊದಲ ಹಂತವಾದ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಓದು, ಬರಹ ಅತಿ ಮುಖ್ಯ. ಆದರೆ ರಾಜ್ಯದ ಬಹಳಷ್ಟು ಪಂಚಾಯಿತಿ ಸದಸ್ಯರಿಗೆ ಓದು, ಬರಹ ತಿಳಿದಿಲ್ಲ.

ಈ ಕಾರಣದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಈ ಅನಕ್ಷರಸ್ಥ ಸದಸ್ಯರಿಗೆ ಓದು, ಬರಹ ಕಲಿಸಲು ಮುಂದಾಗಿದೆ. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ‘ಸಾಕ್ಷರ ಸನ್ಮಾನ’ ಎನ್ನುವ ಕಲಿಕಾ ಕಾರ್ಯಕ್ರಮ ರೂಪಿಸಲಾಗಿದೆ.  

ಕಲಿಕೆಯ ನಂತರ ಸ್ವಮೌಲ್ಯಮಾಪನ, ಆಂತರಿಕ ಮೌಲ್ಯಮಾಪನ ಸಹ ನಡೆಸಲಾಗುತ್ತದೆ. 

‘ಸಾಕ್ಷರ ಸನ್ಮಾನ’ ಹೆಸರಿನ ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅನಕ್ಷರಸ್ಥ ಸದಸ್ಯರಿಗೆ ಅಕ್ಷರ ಕಲಿಸಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿಗೂ ‘ಸಾಕ್ಷರ ಸನ್ಮಾನ’ ಕಾರ್ಯಕ್ರಮವು ಅನುಷ್ಠಾನವಾಗಿಲ್ಲ. ಓದು ಬರಹ ಬಾರದ ಪಂಚಾಯಿತಿ ಸದಸ್ಯರಿಗೆ ಅಕ್ಷರ ಜ್ಞಾನದ ಅರಿವು ಮೂಡಿಸಲು ಸಾಧ್ಯವಾಗುತ್ತಿಲ್ಲ. 

‘ಕಳೆದ ವರ್ಷವೇ ಈ ಕಾರ್ಯಕ್ರಮ ಅನುಷ್ಠಾನವಾಗಬೇಕಾಗಿತ್ತು. ಸಾಕ್ಷರ ಸನ್ಮಾನಕ್ಕೆ ಯಾವುದೇ ಹಣಕಾಸು ಬಿಡುಗಡೆಯಾಗದ ಕಾರಣ ಕಾರ್ಯಕ್ರಮ ನನೆಗುದಿಗೆ ಬಿದ್ದಿದೆ. ಚಿಕ್ಕಬಳ್ಳಾಪುರವಷ್ಟೇ ಅಲ್ಲ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿಯೂ ಇದೇ ರೀತಿ ಆಗಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದು ಮಹತ್ವದ ಕಾರ್ಯಕ್ರಮ. ಪಂಚಾಯಿತಿ ಸದಸ್ಯರು ಅಕ್ಷರ ಬಲ್ಲವರಾದರೆ ಆಡಳಿತವೂ ಸುಲಭವಾಗುತ್ತದೆ ಮತ್ತು ಪಂಚಾಯಿತಿ ಬೆಳವಣಿಗೆಗಳ ಬಗ್ಗೆ ಸ್ಪಷ್ಟವಾಗಿ ಅರಿಯಬಹುದು. ಕಾರ್ಯಕ್ರಮ ಯಾವಾಗ ಜಾರಿಯಾಗುತ್ತದೆ ಎನ್ನುವುದು ನಮಗೂ ಗೊತ್ತಿಲ್ಲ’ ಎಂದು ಹೇಳಿದರು. 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 305 ಮಂದಿ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಈ ಪೈಕಿ ಗುಡಿಬಂಡೆ ತಾಲ್ಲೂಕಿನಲ್ಲಿ ಎಂಟು, ಗೌರಿಬಿದನೂರು ತಾಲ್ಲೂಕಿನಲ್ಲಿ  57, ಚಿಂತಾಮಣಿ ತಾಲ್ಲೂಕಿನಲ್ಲಿ 91, ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 32, ಬಾಗೇಪಲ್ಲಿ 73 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 44 ಗ್ರಾಮ ಪಂಚಾಯಿತಿ ಸದಸ್ಯರು ಅನಕ್ಷರಸ್ಥರಾಗಿದ್ದಾರೆ.

ಕೆಲವು ಪಂಚಾಯಿತಿಗಳಲ್ಲಿ ಮೂರ್ನಾಲ್ಕು ಮಂದಿ ಅನಕ್ಷರಸ್ಥ ಸದಸ್ಯರು ಇದ್ದಾರೆ, ಕೆಲವು ಪಂಚಾಯಿತಿಗಳಲ್ಲಿ ಒಬ್ಬರು ಅನಕ್ಷರಸ್ಥ ಸದಸ್ಯರು ಇದ್ದಾರೆ.

ಒಬ್ಬ ಅನಕ್ಷರಸ್ಥ ಗ್ರಾಮ ಪಂಚಾಯಿತಿ ಸದಸ್ಯರಿಗೆ ಒಬ್ಬ ಬೋಧಕರನ್ನು ಗುರುತಿಸಲಾಗುತ್ತದೆ. ಹೀಗೆ ಗುರುತಿಸುವ ಬೋಧಕರು ಅನಕ್ಷರಸ್ಥ ಪಂಚಾಯಿತಿ ಸದಸ್ಯರು ವಾಸಿಸುತ್ತಿರುವ ಗ್ರಾಮದ ನಿವಾಸಿ ಆಗಿರಬೇಕು. ಕನಿಷ್ಠ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಸರಳ ಓದು, ಬರಹ, ಲೆಕ್ಕ ಕಲಿಸಲು ಸಮರ್ಥರಾಗಿ ಇರಬೇಕು ಎಂದು ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ ಕುರಿತ ಆದೇಶದಲ್ಲಿ ತಿಳಿಸಲಾಗಿದೆ.

ಸಂಜೀವಿನಿ ಒಕ್ಕೂಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಆರ್ಥಿಕ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ, ನರೇಗಾ ಗ್ರಾಮ ಸಂಪನ್ಮೂಲ ವ್ಯಕ್ತಿ, ಸಾಕ್ಷರತಾ ಪ್ರೇರಕರು, ಗ್ರಂಥಪಾಲಕರು, ವಯಸ್ಕರ ಕಲಿಕೆ ಬೋಧನೆಯಲ್ಲಿ ಅನುಭವವುಳ್ಳ ಸ್ವಯಂಸೇವಕರು, ನಿವೃತ್ತ ಶಿಕ್ಷಕರು, ಕಲಿಕೆ ಬೋಧನೆಯಲ್ಲಿ ಆಸಕ್ತ ನಿವೃತ್ತ ನೌಕರರರನ್ನು ಪಂಚಾಯಿತಿ ಸದಸ್ಯರಿಗೆ ಬೋಧಿಸಲು ನೇಮಿಸಲಾಗುತ್ತಿದೆ. ಈ ಬೋಧಕರಿಗೆ ತರಬೇತಿ ಸಹ ನೀಡಲಾಗಿದೆ.

ಜಿಲ್ಲೆಯಲ್ಲಿರುವ ಅನಕ್ಷರಸ್ಥ ಸದಸ್ಯರು

ತಾಲ್ಲೂಕು; ಸದಸ್ಯರು

ಗುಡಿಬಂಡೆ; 08

ಗೌರಿಬಿದನೂರು; 57

ಚಿಂತಾಮಣಿ; 91

ಚಿಕ್ಕಬಳ್ಳಾಪುರ; 32

ಬಾಗೇಪಲ್ಲಿ;73

ಶಿಡ್ಲಘಟ್ಟ; 44

ಒಟ್ಟು; 305

ಅನಕ್ಷರಸ್ಥ ಪಂಚಾಯಿತಿ ಸದಸ್ಯರಿಗೆ ಕಲಿಕೆಯ ಕಾರ್ಯಕ್ರಮ ಚಿಂತಾಮಣಿ ತಾಲ್ಲೂಕಿನಲ್ಲಿ ಗರಿಷ್ಠ ಸಂಖ್ಯೆಯ ಅನಕ್ಷರಸ್ಥ ಸದಸ್ಯರು ಜಿಲ್ಲೆಯಲ್ಲಿ ನಡೆಯದ ತರಬೇತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT