ಶುಕ್ರವಾರ, ಮೇ 27, 2022
21 °C
ಪೊಲೀಸರಿಂದ ದಾಖಲಾತಿ ಪರಿಶೀಲನೆ

ಬಾಗೇಪಲ್ಲಿ: ನಿಯಮ ಉಲ್ಲಂಘನೆ, 60 ಆಟೊ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಚಾಲನಾ ಪರವಾನಗಿ ಇಲ್ಲದಿರುವುದು, ಸಮವಸ್ತ್ರ ಹಾಕದಿರುವ, ರಸ್ತೆ ಸುರಕ್ಷತಾ ನಿಯಮ ಪಾಲಿಸದೆ ಇರುವುದು ಹಾಗೂ ಚಾಲಕರ ಸಂಪೂರ್ಣ ಮಾಹಿತಿ ಇರುವ ಕಾರ್ಡ್ ಇಲ್ಲದಿರುವುದು ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ 60 ಆಟೊಗಳನ್ನು ಶನಿವಾರ ಪಟ್ಟಣದ ವಿವಿಧೆಡೆ ಪೊಲೀಸರು ಮಿಂಚಿನ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಟಿ.ಬಿ. ಕ್ರಾಸ್, ಬಸ್‌ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಡಾ.ಎಚ್.ಎನ್. ವೃತ್ತ, ಗೂಳೂರು ರಸ್ತೆಗಿಳಿದ ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ್ ಮತ್ತು ಸಬ್ ಇನ್‌ಸ್ಪೆಕ್ಟರ್ ಜಿ.ಕೆ. ಸುನೀಲ್ ಕುಮಾರ್ ನೇತೃತ್ವದ ತಂಡ ಆಟೊಗಳ ತಪಾಸಣೆ ನಡೆಸಿತು.

ಚಾಲನಾ ಪರವಾನಗಿ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಚಾಲಕರ ದಾಖಲೆಗಳು, ಸಮವಸ್ತ್ರ ಹಾಕದೇ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಆಟೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ಡಾ.ಎಚ್.ಎನ್. ವೃತ್ತದಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ಆಟೊಗಳನ್ನು ನಿಲ್ಲಿಸಲಾಗಿದೆ.

ಪಟ್ಟಣಕ್ಕೆ ಕೂಗಳತೆ ದೂರದಲ್ಲಿ ಆಂಧ್ರಪ್ರದೇಶದ ಗಡಿ ಇದೆ. ಆಂಧ್ರದ ಕೊಡಿಕೊಂಡ, ಗೋರಂಟ್ಲ, ಚಿಲಮತ್ತೂರು, ಚೆಕ್‌ಪೋಸ್ಟ್ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಆಟೊಗಳು ಸಂಚರಿಸುತ್ತವೆ. ಕೆಲವು ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಖಾಸಗಿ ಸರಕು ಸಾಗಾಣೆ ಆಟೊಗಳಲ್ಲಿಯೇ ಜನರು ಸಂಚರಿಸುತ್ತಾರೆ.

ಜನರನ್ನು ನಿಗದಿತ ಸಂಖ್ಯೆಗಿಂತ ಹೆಚ್ಚಾಗಿ ತುಂಬಿಕೊಂಡು ಚಾಲಕರು ಆಟೊಗಳನ್ನು ಚಾಲನೆ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಕೆಲವು ಆಟೊಗಳು ಮತ್ತು ಚಾಲಕರಿಗೆ ಪರವಾನಗಿ ಇಲ್ಲದಿದ್ದರೂ ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ. ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದ್ದರು.

ಪೊಲೀಸರು ಕೆಲವು ಆಟೊಗಳನ್ನು ವಶಪಡಿಸಿಕೊಂಡಿದ್ದರಿಂದ ಆಟೊ  ಸಂಚಾರ ಇಲ್ಲದೇ ಮುಖ್ಯರಸ್ತೆಯು ಬಿಕೋ ಎನ್ನುತ್ತಿತ್ತು. ಆಟೊಗಳು ಇಲ್ಲದಿರುವುದರಿಂದ ಜನರು ಸ್ವಂತ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ವಾಹನಗಳಲ್ಲಿ ತೆರಳಿದರು. ಹತ್ತಿರದ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದಿರುವುದರಿಂದ ಜನರು ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರು.

‘ಚಾಲಕರ ಪರವಾನಗಿ, ಆಧಾರ್, ವಿಮಾ ದಾಖಲೆ ಪರಿಶೀಲನೆ ಮಾಡಿ ಆಟೊಗಳನ್ನು ವಶಪಡಿಸಿಕೊಳ್ಳಲಾಗಿದೆ. 10 ಚಾಲಕರ ಬಳಿ ದಾಖಲೆಗಳಿವೆ. ಉಳಿದ ಚಾಲಕರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಪರವಾನಗಿ, ವಿಮೆ ದಾಖಲೆಗಳನ್ನು ಸರಿಮಾಡಿಕೊಂಡು ಬರಬೇಕು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ್ ತಿಳಿಸಿದರು.

‘ಪಟ್ಟಣದಲ್ಲಿ ಸಂಚರಿಸುವ ಎಲ್ಲಾ ಆಟೊಗಳಿಗೆ ಚಾಲಕರ ಮಾಹಿತಿ ಇರುವ ಪತ್ರ ನೀಡಲಾಗುವುದು. ಆಟೊದಲ್ಲಿ ಈ ಪತ್ರ ಅಂಟಿಸಬೇಕು. ಪ್ರಯಾಣಿಕರು, ಚಾಲಕರ ಪ್ರಾಣರಕ್ಷಣೆ ಹಾಗೂ ಹಿತದೃಷ್ಟಿಯಿಂದ ಆಟೊಗಳನ್ನು ವಶಪಡಿಸಿಕೊಂಡು ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದೇವೆ’ ಎಂದರು.

‘ದ್ವಿಚಕ್ರ, ತ್ರಿಚಕ್ರವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಸಮವಸ್ತ್ರ ಹಾಕಬೇಕು. ಪ್ರಯಾಣಿಕರ ಜೊತೆ ಉತ್ತಮವಾಗಿ ಇರಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಬಾರದು. ಪಾರ್ಕಿಂಗ್‌ ಸ್ಥಳದಲ್ಲಿಯೇ ವಾಹನ ನಿಲ್ಲಿಸಬೇಕು. ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟವಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ನಿಲ್ಲಿಸಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು