ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರಿಗೆ ಬೇಡವಾದ ಹೆಣ್ಣು ಹಸುಳೆ: ದಾರಿಯಲ್ಲಿ ಸಿಕ್ಕ ಅಜ್ಜಿಗೆ ದಾನ

ಬಾಗೇಪಲ್ಲಿ ಬಳಿಯ ತಾಂಡಾದಲ್ಲಿ ಅಮಾನವೀಯ ಘಟನೆ
Last Updated 11 ಜನವರಿ 2021, 19:35 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಊಟಗೊಂದಿ ತಾಂಡದ ಮಹಿಳೆಯೊಬ್ಬರು ಪತಿಯ ಬೆದರಿಕೆಗೆ ಹೆದರಿ ತನ್ನ 15 ದಿನದ ಹೆಣ್ಣುಮಗುವನ್ನು ದಾರಿಯಲ್ಲಿ ಸಿಕ್ಕ ಅಜ್ಜಿಯೊಬ್ಬರಿಗೆ ನೀಡಿದ್ದಾಳೆ.

ತಾಂಡದ ಅಶೋಕ್ ನಾಯಕ್ ದಂಪತಿ ತಮ್ಮ ಹೆಣ್ಣು ಮಗುವನ್ನು ಸಾಯಿಸಿದ್ದಾರೆ ಎಂಬ ಸುದ್ದಿ ಭಾನುವಾರ ರಾತ್ರಿಯಿಂದ ಊರಲ್ಲಿ ಹರದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ಹೆಣ್ಣುಮಗು ಈಗ ಯಾರಿಗೂ ಬೇಡವಾಗಿದ್ದು ಹೊಸ ಸಮಸ್ಯೆ ಎದುರಾಗಿದೆ.

ಘಟನೆ ಹಿನ್ನೆಲೆ: ಅಶೋಕ್ ನಾಯಕ್‌ ಮತ್ತು ಅಸ್ವಿನಿಬಾಯಿ ದಂಪತಿಗೆ 5 ವರ್ಷದ ಹೆಣ್ಣುಮಗು ಇದೆ. ‘ಎರಡನೇ ಮಗು ಕೂಡ ಹೆಣ್ಣಾದರೆ ಮನೆಗೆ ಬರಬೇಡ’ ಎಂದು ಅಶೋಕ್, ಪತ್ನಿಗೆ ಎಚ್ಚರಿಕೆ ನೀಡಿದ್ದ. ಡಿ.26ರಂದು ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಅಸ್ವಿನಿಬಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಆಂಧ್ರ ಪ್ರದೇಶದ ತವರುಮನೆಗೆ ಹೋದ ಅಸ್ವಿನಿ, ಅಲ್ಲೇ ಮಗುವಿನೊಂದಿಗೆ ಇದ್ದರು. ಪತಿ ಅಶೋಕ್‌ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದರು.

ಆದರೆ,‘ಹೆಣ್ಣು ಮಗುವನ್ನು ಮಾತ್ರ ಮನೆಗೆ ತರಬೇಡ’ ಎಂದೂ ತಾಕೀತು ಮಾಡಿದ್ದ ಎಂದು ಹೇಳಲಾಗಿದೆ. ಭಾನುವಾರ ತಾಂಡಾಕ್ಕೆ ಮರಳುವಾಗ ದಾರಿಯಲ್ಲಿ ಸಿಕ್ಕ ಅಜ್ಜಿಯೊಬ್ಬರಿಗೆ ಹೆಣ್ಣು ಮಗುವನ್ನು ಒಪ್ಪಿಸಿದ್ದಾರೆ.

ಮಗುವಿಲ್ಲದೆ ಬರಿಗೈಯಲ್ಲಿ ತವರಿನಿಂದ ಮರಳಿದ ಬಂದ ಅಸ್ವಿನಿಯನ್ನು ಕಂಡ ತಾಂಡಾದ ಜನರಿಗೆ ಆಕೆ ಮಗುವನ್ನು ಕೊಂದಿರಬಹುದು ಎಂಬ ಅನುಮಾನ ಶುರುವಾಗಿದೆ. ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ಹಾಗೂ ಪೊಲೀಸರಿಗೆ ತಾಂಡಾದವರು ಮಾಹಿತಿ ನೀಡಿದ್ದಾರೆ. ಜಂಟಿ ಕಾರ್ಯಾಚರಣೆ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಪತಿಯ ಬೆದರಿಕೆ: ಪತ್ನಿ ಕಣ್ಣೀರು

‘ಹೆಣ್ಣು ಮಗು ಆದರೆ ಸಾಯಿಸಿಬಿಡುತ್ತೇನೆ ಎಂದು ನನ್ನ ಪತಿ ಅಶೋಕ್ ಬೆದರಿಕೆ ಹಾಕಿದ್ದ. ಹೆಣ್ಣು ಮಗುವೇ ಜನಿಸಿತು. ಪಟ್ಟಣದ ಗಂಗಮ್ಮ ಗುಡಿ ಮುಂದೆ ಅಜ್ಜಿಯೊಬ್ಬರು ಕುಳಿತಿದ್ದರು. ಹೆಣ್ಣು ಮಗು ಬೇಕಾ ಎಂದು ಕೇಳಿದೆ. ನಮಗೆ ಹೆಣ್ಣು ಮಕ್ಕಳು ಇಲ್ಲ ಎಂದು ಅಜ್ಜಿ ತಿಳಿಸಿದರು. ಮಗುವನ್ನು ಆಕೆಗೆ ಒಪ್ಪಿಸಿದ್ದೆ’ ಎಂದು ಅಸ್ವಿನಿಬಾಯಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಆಂಧ್ರದಲ್ಲಿ ಪತ್ತೆ

ನೆರೆಯ ಆಂಧ್ರಪ್ರದೇಶದ ಗೋರಂಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗು ಪತ್ತೆಯಾಗಿದೆ. ಗೋರಂಟ್ಲ ಮಂಡಲದ ಬೂದಿಲಿ ಗ್ರಾಮದ ಸಾಕಲಶೆಟ್ಟಮ್ಮ ಎಂಬ ಅಜ್ಜಿಯನ್ನು ಅಧಿಕಾರಿಗಳು ಕರೆಸಿ, ವಿಚಾರಿಸಿದಾಗ ಮಗು ಪತ್ತೆಯಾಗಿದೆ.

ಮಕ್ಕಳು ಇಲ್ಲದ ಕಾರಣ ಮಗುವನ್ನು ಸಾಕಲು ತೆಗೆದುಕೊಂಡು ಹೋಗಿದ್ದಾಗಿ ಅಜ್ಜಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಸಿಡಿಪಿಒ ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.

ಗಂಡ, ಹೆಂಡತಿ ಜಗಳದಲ್ಲಿ ಕೂಸು ಅನಾಥ!

ಆಂಧ್ರಪ್ರದೇಶ ಹಾಗೂ ಬಾಗೇಪಲ್ಲಿ ಪೊಲೀಸರೊಂದಿಗೆ ಶಿಶು ಕಲ್ಯಾಣಾಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಹಸುಗೂಸನ್ನು ಪತ್ತೆ ಹಚ್ಚಿ, ಬಾಗೇಪಲ್ಲಿ ಪೊಲೀಸ್ ಠಾಣೆಗೆ ತಂದಿದ್ದಾರೆ.

‘ಪೊಲೀಸರು ವಿಚಾರಣೆಗಾಗಿ ಪೋಷಕರನ್ನು ವಶಕ್ಕೆ ಪಡೆದಿದ್ದಾರೆ.ಚಿಕ್ಕಬಳ್ಳಾಪುರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪೋಷಕರನ್ನು ಹಾಜರುಪಡಿಸುತ್ತೇವೆ. ಅಲ್ಲಿ ಪೋಷಕರ ಹೇಳಿಕೆ ಪಡೆಯಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಹೆಣ್ಣುಮಗು ತಮಗೆ ಬೇಡ ಎಂದು ಪೋಷಕರು ಹೇಳುತ್ತಿದ್ದಾರೆ. ಹಾಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ಆಸ್ಪತ್ರೆ ಹಾಗೂ ಶುಶ್ರೂಷಾ ಕೇಂದ್ರಕ್ಕೆ ಮಗುವನ್ನು ಸೇರಿಸಲಾಗಿದೆ. ಅಸ್ವಿನಿ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT