ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬೇಡಿಕೆಗಳ ಈಡೇರಿಕೆಗೆ ಏಜೆಂಟರ ಆಗ್ರಹ

ನಗರದ ಎಲ್‌ಐಸಿ ಕಚೇರಿ ಎದುರು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳ ಪ್ರತಿಭಟನೆ
Last Updated 10 ಜನವರಿ 2020, 14:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರೀಮಿಯಂ ಮೇಲೆ ಕೇಂದ್ರ ಸರ್ಕಾರ ಹೇರಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಿಂಪಡೆಯುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಎಲ್‌ಐಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್, ‘ಕೇಂದ್ರದ ಈ ನಿರ್ಧಾರದಿಂದ ಕಮಿಷನ್‌ಗೆ ಹೊಡೆತ ಬಿದ್ದು ಜೀವ ವಿಮಾ ಪ್ರತಿನಿಧಿಗಳ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಕಳೆದ 60 ವರ್ಷಗಳಿಂದಲೂ ಎಲ್‌ಐಸಿ ಏಜೆಂಟರ್ ಕಮಿಷನ ಹೆಚ್ಚಳ ಮಾಡಿಲ್ಲ. ಸರ್ಕಾರ ಕನಿಷ್ಠ ಕೂಲಿ ₹18 ಸಾವಿರ ವೇತನ ಮಿತಿ ನಿಗದಿಪಡಿಸಲಾಗಿದೆ. ಆದರೆ, ಕಮಿಷನ್ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಏಜೆಂಟರಿಗೆ ಕನಿಷ್ಠ ಕೂಲಿ ಕೂಡ ಸಿಗದಂತಹ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಎಲ್‌ಐಸಿ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆರವುಗೊಳಿಸಬೇಕು. ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎ) ಎಲ್‌ಐಸಿ ಪ್ರತಿನಿಧಿಗಳ ಪಿಂಚಣಿಯನ್ನು ₹ 10 ಲಕ್ಷಕ್ಕೆ ಏರಿಸಬೇಕು. ಉಚಿತ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಅಲ್ಲದೇ ಐಆರ್‌ಡಿಎ ದೃಢೀಕರಿಸಿದ ಪ್ರತಿನಿಧಿಗಳ ಬೇಡಿಕೆಗಳಿಗೆ ಎಲ್‌ಐಸಿ ಸಕರಾತ್ಮಕವಾಗಿ ಸ್ಪಂದಿಸಿ, ಜಾರಿಗೊಳಿಸಬೇಕು’ ಎಂದು ತಿಳಿಸಿದರು.

‘ಶೀಘ್ರದಲ್ಲಿ ನಮ್ಮ ಬೇಡಿಕೆಗಳು ಈಡೇರಬೇಕು. ಇಲ್ಲದಿದ್ದರೆ ಜನವರಿ 18 ಮತ್ತು 20 ರಂದು ರಂದು ಮತ್ತೊಮ್ಮೆ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತದೆ. ಆಗಲೂ ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗದಿದ್ದರೆ ಜನವರಿ 21 ರಂದು ಎಲ್ಲಾ ಶಾಖೆಗಳಲ್ಲಿ ಹೊಸ ಪಾಲಿಸಿಗಳು, ರಿನಿವಲ್ಸ್ ಹಾಗೂ ಪೂರ್ಣ ವಹಿವಾಟನ್ನು ಬಹಿಷ್ಕರಿಸಿ ಧರಣಿ ನಡೆಸಲಾಗುತ್ತದೆ’ ಎಂದರು.

ಚಿಕ್ಕಬಳ್ಳಾಪುರ ಶಾಖಾ ಅಧ್ಯಕ್ಷ ಎಂ.ಸೋಮಶೇಖರ್, ಕಾರ್ಯದರ್ಶಿ ಮೋಹನ್ ಬಾಬು, ಖಜಾಂಚಿ ರಮೇಶ್‌ ಗುಪ್ತಾ, ಸದಸ್ಯರಾದ ಟಿ.ಸಿ.ಲಕ್ಷ್ಮಣ್, ಗೌರಿಬಿದನೂರು ಮಂಜುನಾಥ್, ಬಾಗೇಪಲ್ಲಿ ಬೈಯ್ಯಾರೆಡ್ಡಿ, ಸಿ.ಎಸ್.ನಾರಾಯಣ, ವೆಂಕಟೇಶ್‌ ಪ್ರಸಾದ್, ವೆಂಕಟಶಿವಾರೆಡ್ಡಿ, ಬಿ.ಎನ್.ಗುರುರಾಜ್, ಶ್ರೀಕಾಂತ್, ಚಂದ್ರಕೀರ್ತಿ, ಎನ್.ರಾಮಚಂದ್ರರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT