ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಪದವೀಧರೆಯ ಕೃಷಿ ಯಶೋಗಾಥೆ, ವಾರ್ಷಿಕ ₹20–25 ಲಕ್ಷವರೆಗೂ ವಹಿವಾಟು

ಮೂಡ್ಲಚಿಂತಲಹಳ್ಳಿ: ತರಕಾರಿ ಬೆಳೆ ತಂದ ಲಾಭ
Published 5 ಮೇ 2024, 6:18 IST
Last Updated 5 ಮೇ 2024, 6:18 IST
ಅಕ್ಷರ ಗಾತ್ರ

ಚಿಂತಾಮಣಿ: ಶಿಕ್ಷಕಿಯಾಗಬೇಕೆಂಬುದು ಅವರ ಕನಸಾಗಿತ್ತು. ಮದುವೆಯಾದ ಬಳಿಕ ಆ ಕನಸು ಕೈಗೂಡಲಿಲ್ಲ. ಆದರೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲ ಅವರನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳವಂತೆ ಮಾಡಿತು.

ತಾನು ಪದವೀಧಾರೆಯಾದರೂ ತೋಟಕ್ಕೆ ಇಳಿದು ವ್ಯವಸಾಯ ಆರಂಭಿಸಿದರು. ಆಧುನಿಕ ತಂತ್ರಜ್ಞಾನ ವೈವಿದ್ಯಮಯ ಬೆಳೆ ಬೆಳೆಯುವ ಮೂಲಕ ವಾರ್ಷಿಕವಾಗಿ ₹20–25 ಲಕ್ಷದ ವರೆಗೂ ವಹಿವಾಟು ನಡೆಸುತ್ತಿದ್ದಾರೆ.

–ಇದು ಚಿಂತಾಮಣಿ ತಾಲ್ಲೂಕಿನ ಮೂಡ್ಲಚಿಂತಲಹಳ್ಳಯ ಪ್ರಗತಿಪರ ರೈತ ಮಹಿಳೆ ಶಿಲ್ಪಾ ಲೋಕೇಶ್ ಅವರ ಕೃಷಿ ಯಶೋಗಾಥೆ.

ಇಲ್ಲಿನ ಲೋಕೇಶ್ ಅವನ್ನು ಮದುವೆಯಾದ ಬಳಿಕ ಕಳೆದ 15 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಪತಿ ಲೋಕೇಶ್‌ ಸರ್ಕಾರಿ ಕಾಲೇಜುವೊಂದರ ಪ್ರಯೋಗಾಲಯದ ಅಧೀಕ್ಷಕರಾಗಿದ್ದು, ಅವರೂ ಕೃಷಿಗೆ ಸಾಥ್‌ ನೀಡುತ್ತಿದ್ದಾರೆ.

ಈ ದಂಪತಿ ತರಕಾರಿ ಬೆಳೆ ಬೆಳೆಯುವುದರಲ್ಲಿ ನಿಸ್ಸೀಮರು. ಅವರ 10 ಎಕರೆ ಜಮೀನಿನಲ್ಲಿ ವರ್ಷಪೂರ್ತಿ ತರಕಾರಿ ಬೆಳೆಗಳದ್ದೇ ಕಾರುಬಾರು.

ಆಯಾ ಋತುಮಾನಕ್ಕೆ ತಕ್ಕಂತೆ ಆರು ತಿಂಗಳಿಗೊಂದರಂತೆ ವರ್ಷಕ್ಕೆ ಎರಡು ವೈವಿದ್ಯಮಯ ತರಕಾರಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಮಾರ್ಚ್‌ಯಿಂದ ಆಗಸ್ಟ್ ವರೆಗೂ ಟೊಮೆಟೊ, ಕ್ಯಾರೆಟ್, ಬೀಟ್ರೂಟ್ ಮತ್ತು ದೊಣ್ಣೆ ಮೆಣಸಿನಕಾಯಿ ಬೆಳೆಯುತ್ತಾರೆ. ಆಗಸ್ಟ್ –ಡಿಸೆಂಬರ್ ವರೆಗೆ ಸೌತೆಕಾಯಿ, ಆಲೂಗಡ್ಡೆ, ಬೀನ್ಸ್ ನಂತಹ ಬೆಳೆ ಬೆಳೆಯುತ್ತಾರೆ.

ಸಾಮಾನ್ಯವಾಗಿ ತರಕಾರಿ ಬೆಳೆಗಳಿಗೆ ರೋಗರುಜಿನಗಳು ಹೆಚ್ಚು, ಬೆಲೆ ಕುಸಿತದಿಂದ ಚೇತರಿಸಿಕೊಳ್ಳುವುದೇ ಕಷ್ಟ ಎಂದು ಕೆಲ ರೈತರು ಕೃಷಿಯಿಂದ ವಿಮುಖರಾಗುತ್ತಾರೆ. ಆದರೆ ಶಿಲ್ಪಾಲೋಕೇಶ್ ತರಕಾರಿ ಬೆಳೆಗಳಿಂದಲೇ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಸಮಗ್ರ ಕೃಷಿ ಯೋಜನೆ ರೂಪಿಸಿಕೊಳ್ಳಬೇಕು. ಯಾವುದೋ ಒಂದು ಬೆಳೆಗೆ ಬೆಲೆ ಬಂದಿದೆ ಎಂದು ಎಲ್ಲವನ್ನು ತ್ಯಜಿಸಿ ಒಂದೇ ಬೆಳೆಗೆ ಮಾರುಹೋಗಬಾರದು ಎನ್ನುತ್ತಾರೆ ಶಿಲ್ಪಾಲೋಕೇಶ್.

ಜಮೀನನ್ನು ಪ್ಲಾಟ್‌ಗಳಾಗಿ ವಿಂಗಡಿಸಿ,  ಒಂದೊಂದು ಪ್ಲಾಟ್ ನಲ್ಲಿ ಒಂದೊಂದು ಬೆಳೆ. ಪ್ರತಿಯೊಂದು ಬೆಳೆಗೂ ಪ್ಲಾಸ್ಟಿಕ್ ಮಲ್ಚಿಂಗ್ ಮಾಡುತ್ತಾರೆ. ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಕೀಟ ಬಾಧೆ ನಿಯಂತ್ರಣಕ್ಕೆ ಕೀಟ ಆಕರ್ಷಕ ಬಲೆ ಅಳವಡಿಸುತ್ತಾರೆ. ಹೀಗಾಗಿ ನೀರು, ಗೊಬ್ಬರ ಔಷಧದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಅವರ ತೋಟದಲ್ಲಿ 5 ಕೊಳವೆ ಬಾವಿಗಳಿದ್ದು ನೀರಿಗೆ ಸಮಸ್ಯೆ ಇಲ್ಲ. ಕೃಷಿಹೊಂಡ ಮಾಡಿಸಿದ್ದಾರೆ. ಕೊಳವೆಬಾವಿಗಳ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮೂಲಕ ನೀರನ್ನು ಮಿತವಾಗಿ ಬಳಸುತ್ತಾರೆ.

ಬೆಳೆಗಳ ಆರೈಕೆಯಲ್ಲಿ ತೊಡಗಿರುವ ಶಿಲ್ಪಾ
ಬೆಳೆಗಳ ಆರೈಕೆಯಲ್ಲಿ ತೊಡಗಿರುವ ಶಿಲ್ಪಾ

ಕಟಾವುಗೂ ಮುನ್ನ ತೋಟದಲ್ಲೇ ಮಾರಾಟ

ಪ್ರಸ್ತುತ ಅವರ ತೋಟದಲ್ಲಿ 8 ಎಕರೆ ಪ್ರದೇಶದಲ್ಲಿ ಬೀಟ್ರೂಟ್ ಬೆಳೆ ಸಮೃದ್ಧವಾಗಿ ಬೆಳೆದಿದೆ. ನೋಡುಗರ ಕಣ್ಣಿಗೆ ಹಚ್ಚ ಹಸಿರಾಗಿ ಕಾಣಿಸುತ್ತದೆ. 15 ದಿನಗಳ ಅಂತರದಲ್ಲಿ ಮೂರು ಪ್ಲಾಟ್‌ಗಳಲ್ಲಿ ಬೆಳೆ ಇದೆ. ಒಂದು ಪ್ಲಾಟ್ ಎರಡೂವರೆ ಎಕರೆಯನ್ನು ₹8.5 ಲಕ್ಷ ಮತ್ತೊಂದು ಪ್ಲಾಟ್ 2 ಎಕರೆಯನ್ನು ₹5.5 ಲಕ್ಷಕ್ಕೆ ತೋಟದಲ್ಲೇ ಮಾರಾಟ ಮಾಡಿದ್ದಾರೆ. ಬೆಳೆಗೆ ಸುಮಾರು ₹3 ರಿಂದ ₹3.5 ಲಕ್ಷ ಖರ್ಚಾಗಿದ್ದು ಈಗಾಗಲೇ ₹14 ಲಕ್ಷ ವಸೂಲಾಗಿದೆ. ಇನ್ನೂ ಮೂರುವರೆ ಎಕರೆ ಪ್ಲಾಟ್‌ನಲ್ಲಿ ಫಸಲಿಗೆ ಬಾರದ ಬೆಳೆ ಇದೆ. ಖರ್ಚು ಕಡಿಮೆ ಆರೈಕೆ ಕಡಿಮೆ ರೋಗರುಜಿನುಗಳ ಕಾಟ ಕಡಿಮೆ ಹಿನ್ನೆಲೆಯಲ್ಲಿ ಅವರು ಹೆಚ್ಚಾಗಿ ಕ್ಯಾರೆಟ್ ಬೀಟ್ರೂಟ್ ಬೆಳೆಗಳಿಗೆ ಆದ್ಯತೆ ನೀಡುತ್ತೇವೆ ಎನ್ನುತ್ತಾರೆ ಶಿಲ್ಪಾಲೋಕೇಶ್. ಮಾರುಕಟ್ಟೆ ಸಮಸ್ಯೆ ಇಲ್ಲ ಹಲವಾರು ಬೆಳೆ ತೋಟದಲ್ಲೇ ಮಾರಾಟ ಆಗುತ್ತವೆ. ಟೊಮೆಟೊವನ್ನು ಮಾತ್ರ ತಾವೇ ಚಿಂತಾಮಣಿಗೆ ಕೊಂಡೊಯ್ಯುತ್ತಾರೆ. ದೊಣ್ಣೆ ಮೆಣಸಿನಕಾಯಿಯನ್ನು ಬೆಂಗಳೂರಿನ ಮಾರುಕಟ್ಟೆಗೆ ಕಳುಹಿಸುತ್ತಾರೆ. ಕ್ಯಾರೆಟ್ ಬೀಟ್ರೂಟ್ ಸೌತೆಕಾಯಿ ಸೇರಿದಂತೆ ಇತರೆ ಬೆಳೆಗಳನ್ನು ವ್ಯಾಪಾರಿಗಳು ತೋಟಕ್ಕೆ ಬಂದು ಒಟ್ಟಾರೆಯಾಗಿ ಖರೀದಿ ಮಾಡುತ್ತಾರೆ. ಹೀಗಾಗಿ ಅವರಿಗೆ ಯಾವುದೇ ಮಾರುಕಟ್ಟೆ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಶಿಲ್ಪ ಲೋಕೇಶ್‌.

ಹಲವು ಪ್ರಶಸ್ತಿ: ಕೃಷಿ ಕ್ಷೇತ್ರದ ಸಾಧನೆಗಾಗಿ ಶಿಲ್ಪಾ ಅವರಿಗೆ 2016ರಲ್ಲಿ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ 2017 ರಲ್ಲಿ ಜಿಲ್ಲಾ ಮಟ್ಟದ ಕೃಷಿ ಪ್ರಸಸ್ತಿ 2018 ರಲ್ಲಿ ರಾಜ್ಯಮಟ್ಟದ ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT