ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ ನಿಯಂತ್ರಣ ಜಾಥಾ

Last Updated 13 ನವೆಂಬರ್ 2020, 2:07 IST
ಅಕ್ಷರ ಗಾತ್ರ

ಚಿಂತಾಮಣಿ: ‘ಪರಿಸರವೂ ಉಳಿಯಬೇಕು, ಜೀವವೂ ಉಳಿಯಬೇಕು. ಹಾಗಾಗಿ, ಚಾಲಕರು ಹೊಗೆರಹಿತ ವಾಹನ ಚಲಾಯಿಸಲು ಮುಂದಾಗಬೇಕು’ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ ಸಲಹೆ ನೀಡಿದರು.

ನಗರದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಾಯುಮಾಲಿನ್ಯ ಮಾಸಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಸ್ಥಿತಿಯಲ್ಲಿರುವ ವಾಹನಗಳನ್ನು ಮಾತ್ರ ರಸ್ತೆಗೆ ತರಬೇಕು. ವಾಹನಗಳಿಗೆ ಕಲಬೆರಕೆ ಇಂಧನ ಬಳಸಬಾರದು. ಎಂಜಿನ್ ದುರಸ್ತಿ ಮಾಡಿಸದಿರುವುದು, ಸೈಲೆನ್ಸರ್‌ನಲ್ಲಿ ಹೊಗೆ ಬರುವಂತೆ ಇರಬಾರದು. ಮನುಷ್ಯರ ಆರೋಗ್ಯ ಕೆಟ್ಟರೆ ವೈದ್ಯರಲ್ಲಿಗೆ ಹೋಗುತ್ತೇವೆ. ಹಾಗೆಯೇ ವಾಹನ ಕೆಟ್ಟರೆ ಮೆಕಾನಿಕ್ ಬಳಿಗೆ ಹೋಗಿ ದುರಸ್ತಿಪಡಿಸಬೇಕು ಎಂದು ಹೇಳಿದರು.

ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ಎಮಿಷನ್ ಟೆಸ್ಟ್‌ ಮಾಡಿಸಬೇಕು. ಕಲಬೆರಕೆ ಇಂಧನ ಅಥವಾ ಎಂಜಿನ್ ಕೆಟ್ಟಿದ್ದರೆ ಹೊಗೆ ಅಧಿಕವಾಗಿ ಪರಿಸರ ಕೆಡುತ್ತದೆ. ಜತೆಗೆ ರಸ್ತೆಯಲ್ಲಿ ಚಲಿಸುವ ಇತರರಿಗೂ ತೊಂದರೆಯಾಗುತ್ತದೆ ಎಂದರು.

ಸಾರಿಗೆ ಅಧೀಕ್ಷಕ ವೇಣುಗೋಪಾಲ್ ಮಾತನಾಡಿ, ವಾಹನ ಮಾಲೀಕರು, ಚಾಲಕರು ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಕಾನೂನುಗಳು ಬದಲಾಗಿದ್ದು ತುಂಬಾ ಕಠಿಣಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನವೂ ಇದೆ. ಹಾಗಾಗಿ, ನಿಯಮ ಉಲ್ಲಂಘಿಸಿದರೆ ಅಧಿಕ ದಂಡ ವಿಧಿಸಲಾಗುತ್ತದೆ. ದ್ವಿಚಕ್ರವಾಹನ ಮತ್ತು ತ್ರಿಚಕ್ರವಾಹನಕ್ಕೆ ₹ 1,500 ಹಾಗೂ ಇತರೆ ಎಲ್ಲ ವಾಹನಗಳಿಗೆ ₹ 3 ಸಾವಿರ ದಂಡ ಹಾಕಲಾಗುತ್ತದೆ ಎಂದು ಹೇಳಿದರು.

ಮನೆಯಿಂದ ವಾಹನವನ್ನು ತೆಗೆದುಕೊಂಡು ರಸ್ತೆಗೆ ಬರಬೇಕಾದರೆ ಎಲ್ಲ ದಾಖಲಾತಿಗಳು ಜತೆಯಲ್ಲಿರಬೇಕು. ಚಾಲನಾ ಪರವಾನಗಿ, ವಿಮಾ ಪಾಲಿಸಿ, ಎಫ್.ಸಿ, ಎಮಿಷನ್ ಟೆಸ್ಟ್ ಸರ್ಟಿಫಿಕೆಟ್ ಇರುವುದನ್ನು ಖಾತ್ರಿ‍ಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು. ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು ಎಂದು ಸೂಚಿಸಿದರು.

ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಮಾತನಾಡಿ, ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಚಾಲಕರು ಮತ್ತು ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ವಾಯುಮಾಲಿನ್ಯದಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿದೆ ಎಂದರು.

ನಗರದ ಪ್ರಮುಖ ರಸ್ತೆಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಫಲಕಗಳು, ಘೋಷಣೆಗಳೊಂದಿಗೆ ದ್ವಿಚಕ್ರವಾಹನಗಳ ಜಾಥಾ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT