ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಬಹುಮುಖಿ ಚಟುವಟಿಕೆಯ ಅಲೀಪುರ ಶಾಲೆ

Published 9 ಮಾರ್ಚ್ 2024, 5:29 IST
Last Updated 9 ಮಾರ್ಚ್ 2024, 5:29 IST
ಅಕ್ಷರ ಗಾತ್ರ

ಗೌರಿಬಿದನೂರು: ಐದು ಖಾಸಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಊರಿನಲ್ಲಿ ಇದ್ದರೂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಂಖ್ಯೆ 450 ದಾಟಿದೆ. ದಶಕಗಳಿಂದ ಶಾಲೆಯ ದಾಖಲಾತಿ ಕುಸಿಯುತ್ತಿಲ್ಲ. ಸುತ್ತಲಿನ ಹಳ್ಳಿಗಳ ಜನರು ಮತ್ತು ಪೋಷಕರಿಂದ ಉತ್ತಮ ಶಾಲೆ ಎಂದು ಹೆಸರು ಪಡೆದಿದೆ–ಇದು ತಾಲ್ಲೂಕಿನ ಅಲೀಪುರ ಸರ್ಕಾರಿ ಪ್ರೌಢಶಾಲೆಯ ಹಿರಿಮೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಪ್ರಮುಖ ಗ್ರಾಮ ಅಲೀಪುರ. ಪುಟ್ಟ ಪೇಟೆಯಂತಹ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯು ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಸ್ಪರ್ಧಾ ಮನೋಭಾವ, ಶಾಲೆಯ ಸಂಪನ್ಮೂಲ ಶಿಕ್ಷಕರು ಹೀಗೆ ನಾನಾ ಕಾರಣದಿಂದ ಮಾದರಿ ಎನಿಸಿದೆ. 

ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಶಿಕ್ಷಣ ದೊರೆಯುತ್ತಿದೆ. 8ರಿಂದ 10ರವರೆಗೆ ಇಂಗ್ಲಿಷ್ ಮಾಧ್ಯಮದ ಪ್ರತಿ ತರಗತಿಯಲ್ಲಿ ತಲಾ ಎರಡು ವಿಭಾಗಗಳು ಇವೆ. ಪ್ರತಿ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯು ಉತ್ತಮ ಫಲಿತಾಂಶ ಪಡೆಯುತ್ತಿದೆ. 

ಅಲೀಪುರವಷ್ಟೇ ಅಲ್ಲ ಸುತ್ತಲಿನ ಕಾಮಗಾನಹಳ್ಳಿ, ಬೇವಿನಹಳ್ಳಿ, ಮರಾಠಿಪಾಳ್ಯ, ದೊಡ್ಡಮಲ್ಲೇಕೆರೆ, ಚಿಕ್ಕಮಲ್ಲೇಕೆರೆ, ಯರಗುಂಟೆ, ಗೆದರೆ, ಕೊಂಡಾಪುರ, ಮೈಲಗಾನಹಳ್ಳಿ, ತರಿದಾಳು, ಆರೂಢಿ, ಸೋಮಶೆಟ್ಟಹಳ್ಳಿ, ಗರಿಕೇನಹಳ್ಳಿ, ವಡ್ಡನಹಳ್ಳಿ, ಹೊಸಹಳ್ಳಿ ಸೇರಿದಂತೆ ಸುತ್ತಲಿನ ವಿವಿಧ ಹಳ್ಳಿಗಳ ಮಕ್ಕಳು ಇಲ್ಲಿಗೆ ಕಲಿಕೆಗೆ ಬರುತ್ತಾರೆ. 8 ಮಂದಿ ಕಾಯಂ ಶಿಕ್ಷಕರು ಮತ್ತು ಐದು ಮಂದಿ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಆರು ಮಂದಿ ಶಿಕ್ಷಕರ ಕೊರತೆಯೂ ಇದೆ.

ಕ್ರೀಡೆ, ಪ್ರತಿಭಾ ಕಾರಂಜಿ, ಯುವ ಸಂಸತ್, ಪ್ರಬಂಧ, ವಿಜ್ಞಾನ ಭಾಷಣ, ಸಾಮಾಜಿಕ ಕಾಳಜಿಯುಳ್ಳ ಜಾಗೃತಿ ಯೋಜನೆ ತಯಾರಿಕೆ, ಇನ್‌ಸ್ಪೈರ್ ಅವಾರ್ಡ್, ಮಕ್ಕಳ ವಿಜ್ಞಾನ ಕಾಂಗ್ರೆಸ್, ರಸಪ್ರಶ್ನೆ ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ.

‘ನಮ್ಮ ನಡೆ ಹಳ್ಳಿಯ ಕಡೆ - ವಿದ್ಯಾರ್ಥಿಗಳ ನಡೆ ಶಾಲೆಯ ಕಡೆ’ ಕಾರ್ಯಕ್ರಮವು ವಿದ್ಯಾರ್ಥಿಗಳ ಗೈರು ಹಾಜರಿ ತಪ್ಪಿಸಿ ಕಲಿಕೆಯಲ್ಲಿ ತೊಡಗುವಂತೆ ಮಾಡಿದೆ. ಕಾಂಪೋಸ್ಟ್ ತಯಾರಿ, ನೈಸರ್ಗಿಕ ಗಮ್ ತಯಾರಿಕೆ, ಎರೆಹುಳು ಮತ್ತು ಜೇನು ಹುಳು ಸಾಕಾಣಿಕೆ, ಶಾಲಾ ಕೈ ತೋಟ ನಿರ್ಮಾಣ, ಸಸಿಗಳನ್ನು ನೆಡುವುದು, ಸೀಡ್ ಬಾಲ್ ತಯಾರಿಕೆ, ಪ್ಲಾಸ್ಟಿಕ್ ನಿಷೇಧದ ಜಾಗೃತಿ, ವಿಜ್ಞಾನ,‌ ಗಣಿತ ಜಾತ್ರೆ ಹೀಗೆ ಹತ್ತು ಹಲವು ಚಟುವಟಿಕೆಗಳು ಶಾಲೆಯಲ್ಲಿ ನಡೆದಿವೆ. ಇಂದಿಗೂ ಕಾಲ ಕಾಲಕ್ಕೆ ನಡೆಯುತ್ತಲೇ ಇವೆ. ಹೀಗೆ ಬಹುಮುಖಿ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ.

ಈ ಶಾಲೆಯ ವಿದ್ಯಾವಂತ ಹಳೆಯ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ಊರಿನ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಕಲಿಕೆಯ ಪ್ರಗತಿ ತಿಳಿದು ಶಿಕ್ಷಕರಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. 

ಮಾದರಿ ಪ್ರಯೋಗಾಲಯ: ಶಾಲೆಯಲ್ಲಿ ಸರ್‌.ಸಿ.ವಿ ರಾಮನ್ ಗ್ರಾಮೀಣ ವಿಜ್ಞಾನ ಕೇಂದ್ರವಿದ್ದು ಮಾದರಿಯಾಗಿದೆ. ವಿಜ್ಞಾನದ ಪ್ರಯೋಗದ ಮಾದರಿಗಳು, ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ಹೀಗೆ ವಿಜ್ಞಾನಕ್ಕೆ ಸಂಬಂಧಿಸಿದ ಕಲಿಕೋಪಕರಣಗಳೇ ಮೂರು ಕೊಠಡಿಗಳಲ್ಲಿ ಇವೆ. 

ವಿದ್ಯಾರ್ಥಿಗಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಲಿಕೋಪಕರಣಗಳು ಮತ್ತು ವಿಜ್ಞಾನದ ಮಾದರಿ ಉಪಕರಣಗಳನ್ನು ಪಠ್ಯದ ಅನುಸಾರ ಸಿದ್ಧಗೊಳಿಸಿದ್ದಾರೆ. ಅವುಗಳನ್ನು ಜತನದಿಂದ ಸಂಗ್ರಹಿಸಲಾಗಿದೆ.

ಶಾಲೆಯಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ವಿಜ್ಞಾನ ಶಿಕ್ಷಕ ಆರ್‌.ಯು.ನವೀನ್ ಕುಮಾರ್ ಇಲ್ಲಿನ ವಿಜ್ಞಾನ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ರೂವಾರಿ. ನವೀನ್ ಕುಮಾರ್ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಹ ಪಡೆದಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಬೋಧನೋಪಕರಣ ತಯಾರಿಕೆ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ವಿಜ್ಞಾನ ಮಾದರಿಗಳ ತಯಾರಿಕೆ, ಪಾಠಗಳ ಜೊತೆಗೆ ಮಕ್ಕಳಲ್ಲಿ ನಾಟಕ, ಹಾಡು ಹೀಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸುತ್ತಿದ್ದಾರೆ.

ಯಾರು ಏನಂದರು?

ಮಾದರಿ ಶಾಲೆಗೆ ನೀರಿನ ಕೊರತೆ

ಇಷ್ಟೆಲ್ಲ ಮಾದರಿ ಶಾಲೆ ಎನಿಸಿರುವ ಅಲೀಪುರ ಪ್ರೌಢಶಾಲೆಗೆ ನೀರಿನ ಕೊರತೆ ಬಾಧಿಸುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಸಹ ಇಲ್ಲ. ಶಿಕ್ಷಕರು ಹೊರಗಿನಿಂದ ನೀರು ತರಿಸುತ್ತಿದ್ದಾರೆ. ದಾನಿಗಳು ಶಾಲೆಗೆ ಶುದ್ಧಕುಡಿಯುವ ನೀರಿನ ಘಟಕದ ಕೊಡಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

‘ಕಲಿಕೆಗೆ ಉತ್ತಮ ವಾತಾವರಣ’

ಶಾಲೆಯಲ್ಲಿ ಪಠ್ಯ ಮತ್ತು ಪಠ್ಯೇತರ ಕಲಿಕೆಗೆ ಅನುಕೂಲವಿದೆ. ವಿದ್ಯಾರ್ಥಿಗಳು ಇಷ್ಟಪಟ್ಟು ದಾಖಲಾಗುತ್ತಿದ್ದಾರೆ. ವಿಜ್ಞಾನ ಗಣಿತ ದೈಹಿಕ ಶಿಕ್ಷಣ ಸೇರಿದಂತೆ ಎಲ್ಲ ವಿಷಯಗಳ ಕಲಿಕೆಗೆ ಉತ್ತಮ ವಾತಾವರಣವಿದ - ವನಜಾಕ್ಷಮ್ಮ ಮುಖ್ಯ ಶಿಕ್ಷಕಿ

‘ಎಲ್ಲರ ಸಹಕಾರ’

ರಾಜ್ಯ ವಿಜ್ಞಾನ ಪರಿಷತ್‌ನಿಂದ ನಡೆಯುವ ಸ್ಪರ್ಧೆಗಳಲ್ಲಿ ಏಳೆಂಟು ಬಾರಿ ನಮ್ಮ ವಿದ್ಯಾರ್ಥಿಗಳು ಮಾದರಿಗಳನ್ನು ತಯಾರಿಸಿ ಸ್ಪರ್ಧಿಸಿದ್ದಾರೆ. ನೀರು ಮಣ್ಣಿನ ಸಮಸ್ಯೆಗಳು ವಾಯು ಮಾಲಿನ್ಯ ಸೇರಿದಂತೆ ವಿವಿಧ ಮಾದರಿ ತಯಾರಿಸಿದ್ದಾರೆ. ಎಲ್ಲ ಶಿಕ್ಷಕರು ಸೇರಿ ಅಲೀಪುರ ಶಾಲೆಯನ್ನು ಮಾದರಿಯಾಗಿ ರೂಪಿಸುತ್ತಿದ್ದಾರೆ. ಎಸ್‌ಡಿಎಂಸಿ ಸ್ಥಳೀಯ ಸಂಸ್ಥೆಗಳು ಹಳೆಯ ವಿದ್ಯಾರ್ಥಿಗಳ ಸಹಕಾರವಿದೆ- ಆರ್‌.ಯು.ನವೀನ್ ಕುಮಾರ್ ವಿಜ್ಞಾನ ಶಿಕ್ಷಕ

‘ಸರ್ವತೋಮುಖ ಬೆಳವಣಿಗೆ’

ನನ್ನ ಇಬ್ಬರು ಹೆಣ್ಣು ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ದೊಡ್ಡ ಮಗಳು ಎಸ್ಸೆಸ್ಸೆಲ್ಸಿಯ‌ನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆ. ಇನ್ನೊಬ್ಬಳು 9 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಸುರಕ್ಷೆಗೆ ಶಾಲೆ ಉತ್ತಮವಾಗಿದೆ -ವೆಂಕಟೇಶ್ ಪೋಷಕರ ಅಲೀಪುರ

‘ಕಲಿಕೆಗೆ ಪ್ರೋತ್ಸಾಹ’

ಶಿಕ್ಷಕರ ಉತ್ತಮ ಕಾರ್ಯಗಳಿಗೆ ಎಸ್‌ಡಿಎಂಸಿ ಬೆನ್ನೆಲುಬಾಗಿದೆ. ಮಕ್ಕಳು ಕಲಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಗ್ರಾಮದ ಶಾಲೆಯು ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದೆ -ಸಯ್ಯದ್ ಜಯಾರ್ ಅಲಿ ಎಸ್‌ಡಿಎಂಸಿ ಅಧ್ಯಕ್ಷ

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT