ಮಂಗಳವಾರ, ಫೆಬ್ರವರಿ 25, 2020
19 °C
ನಗರಸಭೆಯಲ್ಲೂ ಕಮಲ ಅರಳಿಸಲು ಕೇಸರಿ ಪಾಳೆಯದ ಕಸರತ್ತು, ಸಮಬಲದ ಪೈಪೋಟಿ ನೀಡಲು ಕಾಂಗ್ರೆಸ್‌ ಹೋರಾಟ

ಚಿಕ್ಕಬಳ್ಳಾಪುರ: ಬದಲಾದ ಲೆಕ್ಕಾಚಾರ, ಚುರುಕು ಪಡೆದ ಪ್ರಚಾರ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಉಪ ಚುನಾವಣೆ ಬೆನ್ನೇರಿ ಬಂದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಜಿಲ್ಲಾ ಕೇಂದ್ರದಲ್ಲಿ ಮತ್ತೆ ರಾಜಕೀಯ ಚುರುಕುಗೊಳಿಸಿದೆ. ನಗರದಲ್ಲಿ ನಗರಸಭೆ ಚುನಾವಣೆ ಪ್ರಚಾರ ಭಾನುವಾರದಿಂದ ಚುರುಕು ಪಡೆದುಕೊಂಡಿದ್ದು, ಗಲ್ಲಿಗಲ್ಲಿಗಳಲ್ಲಿ ಪ್ರಚಾರಕ್ಕೆ ಹೊರಟವರ ದಂಡುಗಳ ದರ್ಶನವಾಗುತ್ತಿದೆ.

’ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಭಾರಿ ಜಯಭೇರಿ ಬಾರಿಸುತ್ತಿದ್ದಂತೆ, ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗೆ ಇನ್ನಿಲ್ಲದ ಬೇಡಿಕೆ ಕಾಣಿಸಿಕೊಂಡಿತ್ತು. ಇನ್ನೊಂದೆಡೆ ಹಿಂದಿನಂತೆ ಕಾಂಗ್ರೆಸ್‌ ಟಿಕೆಟ್‌ಗೂ ಪೈಪೋಟಿ ಶುರುವಾಗಿತ್ತು. ಆದರೆ ಸಾಕಷ್ಟು ವಾರ್ಡ್‌ಗಳಲ್ಲಿ ಜೆಡಿಎಸ್‌ ಬಿ.ಫಾರ್ಮ್‌ ಕೇಳುವವರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು ಎನ್ನುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ಸದ್ಯ ನಗರಸಭೆಯಲ್ಲಿ ಅಧಿಕಾರದ ಗದುಗೆ ಹಿಡಿಲು ಬಿಜೆಪಿ ಮತ್ತು ಕಾಂಗ್ರೆಸ್‌ ಪೈಪೋಟಿಯಲ್ಲಿ ಸ್ಪರ್ಧೆಗೆ ಇಳಿದಿವೆ. ಅಂತಿಮ ಸ್ಪರ್ಧಾ ಕಣದಲ್ಲಿ 101 ಅಭ್ಯರ್ಥಿಗಳಿದ್ದು, ಪ್ರತಿಯೊಬ್ಬರೂ ತಮ್ಮ ಬೆಂಬಲಿಗರೊಂದಿಗೆ ಹಗಲಿರುಳು ಎನ್ನದೆ ತಮ್ಮ ವಾರ್ಡ್‌ ವ್ಯಾಪ್ತಿಯ ಮನೆಗಳ ಬಾಗಿಲು ತಟ್ಟುತ್ತಿದ್ದಾರೆ. ಸದ್ಯ ಚುನಾವಣೆ ಎಲ್ಲ ಪಕ್ಷಗಳ ಪಾಳೆಯಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದ್ದು, ಎದುರಾಳಿಗಳನ್ನು ಮಣಿಸಲು ತಂತ್ರ, ಪ್ರತಿತಂತ್ರಗಳು ತೆರೆಮರೆಯಲ್ಲಿ ರೂಪುಗೊಳ್ಳುತ್ತಿವೆ ಎನ್ನಲಾಗಿದೆ.

ನಗರಸಭೆಯಲ್ಲಿ ಈ ಹಿಂದಿನ ಆಡಳಿತ ಮಂಡಳಿಯಲ್ಲಿ 31 ಸದಸ್ಯರ ಪೈಕಿ ಒಬ್ಬೇ ಒಬ್ಬ ಬಿಜೆಪಿ ಸದಸ್ಯ ಇರಲಿಲ್ಲ. ಹೀಗಾಗಿ, ನಗರಸಭೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಶೂನ್ಯದಿಂದ ಸಾಧನೆ ಮಾಡಬೇಕಾದ ಸವಾಲಿದೆ. ಆದ್ದರಿಂದ ಈ ಬಾರಿಯ ನಗರಸಭೆಯ ಚುನಾವಣೆ ಚಿತ್ರಣ ಹಿಂದೆಂದಿಗಿಂತಲೂ ರಂಗು ಪಡೆದಿದೆ.

2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ನಗರದ 31 ವಾರ್ಡ್‌ಗಳ ಪೈಕಿ ಜೆಡಿಎಸ್‌ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಉಳಿದಂತೆ ಕಾಂಗ್ರೆಸ್‌ ಒಂಬತ್ತು, ಒಂದು ಬಿಎಸ್‌ಆರ್‌ ಕಾಂಗ್ರೆಸ್‌ ಮತ್ತು 11 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ.

ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಶಾಸಕ ಡಾ.ಕೆ.ಸುಧಾಕರ್ ಅವರ ತಂತ್ರಗಾರಿಕೆ ಎದುರು ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಫಲವಾಗಿತ್ತು. ಪಕ್ಷೇತರರ ಸಹಕಾರದೊಂದಿಗೆ ಕಾಂಗ್ರೆಸ್‌ ನಗರಸಭೆಯಲ್ಲಿ ಅಧಿಕಾರ ಹಿಡಿದಿತ್ತು.

ಜೆಡಿಎಸ್‌ ಸದಸ್ಯರ ಪೈಕಿ 26ನೇ ವಾರ್ಡ್‌ ಸದಸ್ಯೆ ಶೋಭಾ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ, ಆ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ತಾಯಿ ಮುತ್ತೈದಮ್ಮ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಾಗ ನಗರಸಭೆಯಲ್ಲಿ ಜೆಡಿಎಸ್‌ ಬಲ ಒಂಬತ್ತಕ್ಕೆ ಕುಸಿದಿತ್ತು.

ಆ ಪೈಕಿ 2017ರ ಅಕ್ಟೋಬರ್‌ನಲ್ಲಿ ರಾಜಕೀಯ ಬೆಳವಣಿಗೆಯೊಂದರಲ್ಲಿ ಆರು ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಾಗ ಜೆಡಿಎಸ್‌ ಸಂಖ್ಯಾಬಲ ಮೂರಕ್ಕೆ ಕುಸಿದು ಕನಿಷ್ಠ ಮಟ್ಟಕ್ಕೆ ಇಳಿದಿತ್ತು.

ಸದ್ಯ, ಸುಧಾಕರ್ ಅವರ ವರ್ಚಸ್ಸಿನಿಂದಾಗಿ ಬಿಜೆಪಿ ಪಾಳೆಯದಲ್ಲಿ ಹುರುಪು ಕಾಣಿಸಿಕೊಂಡಿದೆ. ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಹೋರಾಟ ನಡೆದಿದೆ. ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ಮತಯಾಚನೆ ನಡೆಸುತ್ತಿದ್ದಾರೆ.

ಬಿಜೆಪಿಯವರು ತಮ್ಮ ವಿರೋಧಿ ಮತಗಳು ಹೆಚ್ಚಿರುವ ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನೇ ಪಕ್ಷೇತರರಾಗಿ ಕಣಕ್ಕೆ ಇಳಿಸಿ ಮತ ಪಡೆಯುವ ತಂತ್ರಗಾರಿಕೆ ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಳೆಯಗಳು ಕೆಲ ವಾರ್ಡ್‌ಗಳಲ್ಲಿ ಒಳ ಒಪ್ಪಂದ ಮಾಡಿಕೊಂಡು ಹೊಂದಾಣಿಕೆ ರಾಜಕೀಯಕ್ಕೆ ಮುಂದಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸದ್ಯ, 4, 10, 17,15, 19 ಸೇರಿದಂತೆ ಕೆಲ ವಾರ್ಡ್‌ಗಳಲ್ಲಿ ತುರುಸಿನ ಸ್ಪರ್ಧೆ ಕಾಣಿಸಿಕೊಂಡಿದೆ. ಮತದಾರರ ಒಲುವು ಯಾರತ್ತ ಇದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.


ಅಂಕಿಅಂಶಗಳು...

30
ಕಾಂಗ್ರೆಸ್‌

24
ಬಿಜೆಪಿ

14
ಜೆಡಿಎಸ್‌

3
ಬಿಎಸ್ಪಿ

30
ಪಕ್ಷೇತರರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು