ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಧೀಮಂತ: ಬಿ.ಆರ್. ಅನಂತಕೃಷ್ಣ

Last Updated 15 ಏಪ್ರಿಲ್ 2022, 5:19 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಅಂಬೇಡ್ಕರ್ ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಮಹಾನ್ ನಾಯಕ. ಅಂದಿನ ಪ್ರಧಾನಿ ನೆಹರೂ ವಿದೇಶಿ ಗಣ್ಯರಿಗೆ ಪರಿಚಯಿಸುವಾಗ ಅಂಬೇಡ್ಕರ್ ನನ್ನ ಮಂತ್ರಿ ಮಂಡಲದ ವಜ್ರ ಎನ್ನುತ್ತಿದ್ದರು’ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ತಿಳಿಸಿದರು.

ನಗರದ ಸಿದ್ಧಾರ್ಥನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪದಿಂದ ನಡೆದ ಡಾ.ಬಿ.ಆರ್‌. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಭಾರತದ ನೀರಾವರಿ ಯೋಜನೆಯ ಜನಕರಾಗಿದ್ದಾರೆ. ಉತ್ತರ ಮತ್ತು ದಕ್ಷಿಣ ಭಾರತದ ನದಿಗಳ ಜೋಡಣೆಗೆ 1952ರಲ್ಲಿಯೇ ಸಲಹೆ ನೀಡಿದ್ದರು. ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಅವರ ಸೇವೆ ಸ್ಮರಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ (ಮರಣೋತ್ತರ) ನೀಡಿ ಗೌರವಿಸಿದೆ ಎಂದರು.

ಜಗತ್ತನ್ನು ಬದಲಿಸಲು ಬಳಸಿಕೊಳ್ಳಬಹುದಾದ ಅತ್ಯಂತ ಪ್ರಬಲ ಅಸ್ತ್ರವೆಂದರೆ ಶಿಕ್ಷಣ. ಪುಸ್ತಕಗಳು ಇಲ್ಲದ ಕೊಠಡಿ ಆತ್ಮವಿಲ್ಲದ ದೇಹವಿದ್ದಂತೆ. ಸಾಧನೆ ಎನ್ನುವುದು ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಮನನೀಯ ಎಂದರು.

ಬಾಬು ಜಗಜೀವನ ರಾಂ ಅಸ್ಪೃಶ್ಯತೆ ನಿವಾರಣೆಯ ಹೋರಾಟಗಾರರಾಗಿದ್ದರು. ಮಹಾನ್ ದಲಿತ ನಾಯಕ. ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಅವರು ನಾಲ್ಕು ದಶಕಗಳ ಕಾಲ ಸಂಸತ್ತಿನ ಸದಸ್ಯರಾಗಿದ್ದರು. ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀರಾಮಣ್ಣ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಭಾರತ ಸಂವಿಧಾನದ 50 ಪುಸ್ತಕ ವಿತರಿಸಲಾಯಿತು. ಕಸಾಪ ನಗರ ಘಟಕದ ಅಧ್ಯಕ್ಷ ಎಲ್. ಕಿರಣ್ ಕುಮಾರ್, ಮುಖಂಡರಾದ ಮುನಿಯಪ್ಪ, ಟಿ.ಟಿ. ನರಸಿಂಹಪ್ಪ, ರಾಮಾಂಜನೇಯ, ಬಿ.ಇ. ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ವಿನೋದ್ ಕುಮಾರ್, ಮುಖ್ಯಶಿಕ್ಷಕ ಚಂದ್ರಶೇಖರ, ಶಿಕ್ಷಕ ಮೊಹಮ್ಮದ್ ಉಸ್ಮಾನ್, ಶಿಕ್ಷಕಿ ನಗೀನ, ಶ್ಯಾಮಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT