ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಂಧ್ರ ಬೈಕ್ ಕಳ್ಳರ ತಂಡ?

ಬೈಕ್ ಕಳ್ಳತನ ಪ್ರಕರಣ ಹೆಚ್ಚಳ: ಸವಾರರ ಆತಂಕ
Last Updated 20 ಆಗಸ್ಟ್ 2022, 4:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶ ಹಾಗೂ ಹೊರ ಜಿಲ್ಲೆಗಳ ಬೈಕ್ ಕಳ್ಳರ ತಂಡಗಳು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರವೇಶಿಸಿವೆಯೇ? ಹೀಗೊಂದು ಬಲವಾದ ಅನುಮಾನ ಮತ್ತು ಚರ್ಚೆಗಳು ನಾಗರಿಕರಲ್ಲಿ ಮೂಡಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ.

‌ಪೊಲೀಸರು ಆಗಾಗ್ಗೆ ಬೈಕ್ ಕಳ್ಳರನ್ನು ಎಡೆಮುರಿ ಕಟ್ಟು‌ತ್ತಿದ್ದಾರೆ. ಆದರೂ ಬೈಕ್ ಕಳ್ಳತನ ಪ್ರಕರಣಗಳು ಜರುಗುತ್ತಲೇ ಇವೆ.ಬೆಳಕಿಗೆ ಬಂದ ಪ್ರಕರಣಗಳನ್ನು ಗಮನಿಸಿದರೆ ರಸ್ತೆ ಬದಿ, ಮನೆಗಳ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಾರೆ.ಪ್ರಮುಖವಾಗಿ ನಗರ ಪ್ರದೇಶದಲ್ಲಿಯೇ ಬೈಕ್ ಕಳ್ಳತನಗಳು ಹೆಚ್ಚುತ್ತಿವೆ.

ಕಳೆದ ವಾರಬಾಗೇಪಲ್ಲಿ ಹೊರವಲಯದ ರಾಷ್ಟ್ರೀಯ ರಸ್ತೆ ಹೆದ್ದಾರಿ-7 ರ ಟೋಲ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿಇಬ್ಬರು ಬೈಕ್ ಕಳ್ಳರನ್ನು ಸೆರೆ ಹಿಡಿದಿದು 16 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಈ ಇಬ್ಬರು ಆರೋಪಿಗಳು ಸಹ ಆಂಧ್ರಪ್ರದೇಶದವರಾಗಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಗೌರಿಬಿದನೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ₹ 11.5 ಲಕ್ಷ ಮೌಲ್ಯದ 23 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣ ಸಂಬಂಧ ನಾಲ್ಕು ಆರೋಪಿಗಳನ್ನು ಸೆರೆ ಹಿಡಿದಿದ್ದರು. ಈ ನಾಲ್ಕು ಮಂದಿಯೂ ಆಂಧ್ರದ ಹಿಂದೂಪುರದವರಾಗಿದ್ದಾರೆ.

ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಆಗಾಗ್ಗೆ ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗುತ್ತಲೇ ಇವೆ. ನಿತ್ಯ ಒಂದಲ್ಲಾ ಒಂದು ಕಡೆ ಬೈಕ್ ಕಳ್ಳತನವಾಗಿದೆ ಎಂದು ನಾಗರಿಕರು ಪೊಲೀಸರಿಗೆ ದೂರುಸಲ್ಲಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದ ಕಾರ್ಯನಿರತ ಪ್ರತಕರ್ತರ ಸಂಘದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಆ.18ರಂದು ರವಿಚಂದ್ರಾರೆಡ್ಡಿ ಎಂಬುವವರು ದೂರು ನೀಡಿದ್ದರೆ, ಖಾಸಗಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಆ.17ರಂದು ನವೀನ್ಕುಮಾರ್ ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ವೆಂಕಟೇಶ್ ಎಂಬುವವರು ಕೇಶವಾರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಸಹ ಕಾಣಿಯಾಗಿದೆ.

ಬಾಗೇಪಲ್ಲಿ ಟಿ.ಬಿ. ಕ್ರಾಸ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಆ.16ರಂದು ವೆಂಕಟೇಶ್, ಆ .15ರಂದು ಚಿಂತಾಮಣಿಯಲ್ಲಿ ಬೈಕ್ ಕಳ್ಳತನವಾಗಿದೆ ಎಂದು ಲಕ್ಷ್ಮಮ್ಮ ಎಂಬುವವರು ದೂರು ಸಲ್ಲಿಸಿದ್ದಾರೆ.ಹೀಗೆ ನಿತ್ಯವೂ ಜಿಲ್ಲೆಯ ಒಂದಲ್ಲಾ ಒಂದು ಕಡೆಗಳಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ವರದಿ ಆಗುತ್ತಿವೆ.

ಕಾರ್ಯನಿಮಿತ್ತ ಹೊರಹೋಗಬೇಕಾದ ಸಂದರ್ಭದಲ್ಲಿ ಹಳ್ಳಿಗಳ ಜನರು ನಗರಕ್ಕೆ ಬೈಕ್‌ಗಳಲ್ಲಿ ಬಂದ ರಸ್ತೆ ಬದಿ ಅಥವಾ ಯಾವುದಾದರೂ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರು. ಆದರೆ ಸರಣಿಯಾಗಿ ನಡೆಯುತ್ತಿರುವ ಬೈಕ್‌ ಕಳ್ಳತನದಿಂದ ಬೈಕ್‌ಗಳನ್ನು ನಿಲ್ಲಿಸಿ ತೆರಳಲು ಆತಂಕಗೊಂಡಿದ್ದಾರೆ. ರಾತ್ರಿ ಮನೆಗಳ ಹೊರಭಾಗದಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದವರು ಸಹ ಪ್ರಕರಣಗಳಿಂದ ಮನೆಯ ಒಳಗೆ ಬೈಕ್‌ಗಳನ್ನು ನಿಲ್ಲಿಸುವಂತಾಗಿದೆ.

12 ಬೈಕ್‌ ವಶ: ಆರೋಪಿ ಬಂಧನ

ಚಿಂತಾಮಣಿ: ಚಿಂತಾಮಣಿ ಪೊಲೀಸರು ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಲೂರು ತಾಲ್ಲೂಕು ಅರಲೇರಿ ಗ್ರಾಮದ ಲೋಕೇಶ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯಿಂದ 12 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಸಂಜೆ ಚಿಂತಾಮಣಿಯ ಕೋಲಾರ ಕ್ರಾಸ್‌ನಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದರು. ಚೇಳೂರು ಕಡೆಯಿಂದ ಬೈಕ್‌ನಲ್ಲಿ ಬಂದ ವ್ಯಕ್ತಿ ಪೊಲೀಸರನ್ನು ಕಂಡ ತಕ್ಷಣ ಬೈಕ್ ತಿರುಗಿಸಿ ವಾಪಸ್ ಹೋಗಲು ಮುಂದಾಗ. ಈ ವೇಳೆ ಪೊಲೀಸರು ಬೆನ್ನಟ್ಟಿ ಹಿಡಿದರು.ಬೆಂಗಳೂರು, ಹೊಸಕೋಟೆ, ಚಿಂತಾಮಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ಈತ ಬೈಕ್ ಕಳ್ಳತನ ನಡೆಸಿದ್ದಾನೆ. ₹ 6 ಲಕ್ಷ ಮೌಲ್ಯದ 12 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ರಂಗಶಾಮಯ್ಯ, ಯರ್ರಪ್ಪ, ರಮೇಶ್, ಸಿಬ್ಬಂದಿ ವಿಶ್ವನಾಥ್, ಜಗದೀಶ್, ಮಂಜುನಾಥ್, ಚೌಡರೆಡ್ಡಿ, ರವೀಂದ್ರ, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಆರೋಪಿಗಳ ಪತ್ತೆಗೆ ಶ್ರಮಿಸಿದ ಪೊಲೀಸರನ್ನು ಎಸ್ಪಿ ಡಿ.ಎಲ್.ನಾಗೇಶ್ ಮತ್ತು ಎಎಸ್ಪಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.

‘ಬಂಧನಕ್ಕೆ ಕಾರ್ಯಾಚರಣೆ’

ಬೈಕ್ ಕಳ್ಳತನದ ಪ್ರಕರಣಗಳು ನಡೆಯುತ್ತಿದ್ದು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಚಿಕ್ಕಬಳ್ಳಾಪುರವು ಗಡಿಭಾಗ ಆಗಿರುವುದರಿಂದ ಆಂಧ್ರದವರೂ ಇಲ್ಲಿ ಕಳ್ಳತನಕ್ಕೆ ಬರುವ ಸಾಧ್ಯತೆ ಇದೆ. ಕೆಲವು ಪ್ರಕರಣಗಳಲ್ಲಿ ಈಗಾಗಲೇ ಆರೋಪಿಗಳನ್ನು ಸೆರೆ ಹಿಡಿದಿದ್ದೇವೆ. ಮುಂದೆಯೂ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT