ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಿವಾರಪಲ್ಲಿ | ಅಂಗನವಾಡಿ ಕಟ್ಟಡಕ್ಕೆ ಇಲ್ಲ ಸ್ವಂತ ಸೂರು

Published 15 ಜನವರಿ 2024, 6:25 IST
Last Updated 15 ಜನವರಿ 2024, 6:25 IST
ಅಕ್ಷರ ಗಾತ್ರ

ಚೇಳೂರು: ತಾಲ್ಲೂಕಿನ ನಾರೇಮದ್ದೆಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ದೊಡ್ಡಿವಾರಪಲ್ಲಿ ಗ್ರಾಮದಲ್ಲಿನ ಅಂಗನವಾಡಿಯ ಗೋಡೆ ಹಾಗೂ ಚಾವಣಿ ಬೀಳುವ ಸ್ಥಿತಿಯಲ್ಲಿದ್ದು, ಮಕ್ಕಳು ಭಯದ ವಾತಾವರಣದಲ್ಲಿ ಕಲಿಯಬೇಕಾಗಿದೆ.

ದೊಡ್ಡಿವಾರಪಲ್ಲಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಲ್ಪಟ್ಟಿದ್ದು, ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಸರ್ಕಾರಿ ಶಾಲೆಯಲ್ಲೇ ಅಂಗನವಾಡಿ ಮುಂದುವರೆಯುತ್ತಿದ್ದು ಬೀಳುವ ಸ್ಥಿತಿಯಲ್ಲಿದೆ.

ಈ ಶಾಲೆಯು ಸಂಪೂರ್ಣ ಹಳೆಯದಾಗಿದ್ದು ಒಂದು ದಶಕಗಳ ಹಿಂದೆ ನಿರ್ಮಾಣಗೊಂಡಿದೆ. ಕಟ್ಟಡ ಭಾಗಶಃ ಶಿಥಿಲಗೊಂಡಿದೆ. ಕಟ್ಟಡದ ಬಾಗಿಲು ಹಾಗೂ ಕಿಟಕಿ ಕಿತ್ತು ಹೋಗಿವೆ.

ಬೇಸಿಗೆಯಲ್ಲಿ ಕಟ್ಟಡದ ಸಿಮೆಂಟ್ ನೆಲಹಾಸು ಕಿತ್ತುಬರುತ್ತಿದ್ದು, ಮರದ ಬೇರುಗಳು ಗೋಡೆ ಒಳಗೆ ನುಗ್ಗಿ ಬೆಳೆದಿವೆ. ಇದರಿಂದ ಗೋಡೆಗಳು ಬಿರುಕು ಬಿಟ್ಟಿವೆ.
ಇಲ್ಲಿ ಪಾಠ ಕಲಿಯುತ್ತಿರುವ ಮಕ್ಕಳ ಬಗ್ಗೆ ಪಾಲಕರು ಭೀತಿಗೊಳಗಾಗಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಅಂಗನವಾಡಿ ಕಾರ್ಯಕರ್ತೆ ಸುನೀತಾ ಹಾಗೂ ಸಹಾಯಕಿ ಪುಷ್ಪವತಿ ‘ಅಂಗನವಾಡಿ ಕೇಂದ್ರದಲ್ಲಿ 5 ಮಕ್ಕಳಿದ್ದಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಚಾವಣಿ ಸಂಪೂರ್ಣ ಸೋರುತ್ತಿದೆ’ ಎನ್ನುತ್ತಾರೆ.

ಸರ್ಕಾರ ನೀಡಿದ ಆಹಾರಧಾನ್ಯವನ್ನು ಕೇಂದ್ರದಲ್ಲಿ ಇಡಲು ಸಾಧ್ಯವಾಗುತ್ತಿಲ್ಲ. ಇಲಿ, ಹೆಗ್ಗಣಗಳ ಕಾಟದಿಂದ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ನೀಡಿದ ಆಹಾರ ಹಾಳಾಗುತ್ತಿದೆ.

ಶಾಲೆಯ ಇನ್ನೊಂದು ಕೊಠಡಿ ಸುರಕ್ಷಿತವಾಗಿದ್ದು ಆ ಕೊಠಡಿಯನ್ನು ಕೊಟ್ಟರೆ ಮಕ್ಕಳಿಗೆ ಹಾಗೂ ಆಹಾರವನ್ನು ಸುರಕ್ಷಿತವಾಗಿ ಇಡಬಹುದು. ಇಲ್ಲವಾದಲ್ಲಿ ಬೇರೆಡೆಗೆ ಅಂಗಡಿ ಕೇಂದ್ರವನ್ನು ಸ್ಥಳಾಂತರ ಮಾಡಬೇಕು. ಹೊಸ ಕಟ್ಟಡ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಅವ್ಯವಸ್ಥೆಯ ಕೂಪ: ಶಾಲೆಯ ಹಿಂಭಾಗ ಕಾಂಪೌಂಡ್ ಒಳಗೆ ಜಾಲಿ ಮುಳ್ಳು ಗಿಡಗಳು ಬೆಳೆದಿದ್ದು, ವಿಷಜಂತುಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪಾಳು ಬಿದ್ದಿರುವ ನೂತನ ಶೌಚಾಲಯ ಕೊಠಡಿ ಕಂಡುಬರುತ್ತದೆ. ಈ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿರುವ ಗುತ್ತಿಗೆದಾರರು ಅವುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ. ಹೀಗಾಗಿ ಅವುಗಳು ಮೂಲೆಗುಂಪಾಗಿದೆ.

ಯಾರು ಏನಂದರು?

ದೊಡ್ಡಿವಾರಪಲ್ಲಿ ಶಾಲೆಯಲ್ಲಿ ಎರಡು ಕೊಠಡಿಗಳು ಇದ್ದು ಒಂದು (ಪ್ರಸ್ತುತ ಅಂಗನವಾಡಿ ನಡೆಸುತ್ತಿರುವ ಶಾಲೆ) ಕಟ್ಟಡ ಕುಸಿಯುವ ಹಂತದಲ್ಲಿದೆ. ನೂತನ ಕಟ್ಟಡ ಕಟ್ಟುವವರೆಗೂ ಶಾಲೆಯಲ್ಲಿನ ಒಂದು ಕೊಠಡಿ ನೀಡಬೇಕು - ಡಿವಿ ನಾರಾಯಣಸ್ವಾಮಿ ಗ್ರಾಮಸ್ಥ

ಸೂಕ್ತ ಸ್ಥಳ ಆಯ್ಕೆ ಗ್ರಾಮದಲ್ಲಿ ಸರ್ಕಾರಿ ಜಾಗ ಲಭ್ಯವಿದ್ದು ಗ್ರಾಮ ಪಂಚಾಯಿತಿಯಿಂದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಸೂಕ್ತ ಸ್ಥಳ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕರೆಸಿ ಸ್ಥಳ ಪರಿಶೀಲಿಸಿ ಮುಂದಿನ ತಿಂಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು.- ಡಿವಿ ರವಿ ಗ್ರಾಮ ಪಂಚಾಯಿತಿ ಸದಸ್ಯ

ನರೇಗಾ ಯೋಜನೆಯಡಿ ಕಾಮಗಾರಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಸೂಕ್ತ ಸರ್ಕಾರಿ ಜಾಗದ ಅಭಾವದಿಂದಾಗಿ ಇದುವರೆಗೂ ಕಟ್ಟಡ ನಿರ್ಮಾಣ ಮಾಡಲು ಆಗಲಿಲ್ಲ. ನರೇಗಾ ಯೋಜನೆಯಡಿ ಈಗಾಗಲೇ ಅಂಗನವಾಡಿ ಕಟ್ಟಡ ಕಾಮಗಾರಿ ಯೋಜನೆಯಲ್ಲಿ ಇದ್ದು ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು - ಕೆ.ವೆಂಕಟಾಚಲಪತಿ ನಾರೇಮದ್ದೆಪಲ್ಲಿ ಪಿಡಿಒ

ಶೌಚಾಲಯದ ಸ್ಥಿತಿ
ಶೌಚಾಲಯದ ಸ್ಥಿತಿ
ಚೇಳೂರು ತಾಲ್ಲೂಕಿನ ದೊಡ್ಡಿವಾರಪಲ್ಲಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ
ಚೇಳೂರು ತಾಲ್ಲೂಕಿನ ದೊಡ್ಡಿವಾರಪಲ್ಲಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ
ಶಿಥಿಲಗೊಂಡ ಕಿಟಕಿ
ಶಿಥಿಲಗೊಂಡ ಕಿಟಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT