ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಅವರೆ ಘಮಲು...

ಕಾಯಿಗೆ ಉತ್ತಮ ಬೆಲೆ, ರೈತರ ಮುಖದಲ್ಲಿ ಮಂದಹಾಸ
Last Updated 27 ಡಿಸೆಂಬರ್ 2022, 5:49 IST
ಅಕ್ಷರ ಗಾತ್ರ

ಚಿಂತಾಮಣಿ: ಅವರೆಕಾಯಿ ಋತುಮಾನ ಆರಂಭವಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಗೆ ಅವರೆಕಾಯಿ ಲಗ್ಗೆ ಇಡುತ್ತಿದೆ. ನಗರದ ರಸ್ತೆಗಳಲ್ಲಿ ತಳ್ಳುವ ಗಾಡಿಗಳಲ್ಲಿ ಅವರೆಕಾಯಿ ಘಮಲು ಗಮಗಮಿಸುತ್ತಿದೆ.

ತಾಲ್ಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಉತ್ತಮ ಮಳೆ ಬೆಳೆಯಾಗಿದೆ. ರಾಗಿ, ಕಡಲೆಕಾಯಿ, ಅವರೆಕಾಯಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ಹುಲುಸಾಗಿ ಬೆಳೆದಿದ್ದು ರೈತರನ್ನು ಖುಷಿಪಡಿಸಿವೆ. ಅವರೆಕಾಯಿಗೆ ಉತ್ತಮ ಬೆಲೆ ಸಿಗುತ್ತಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ತಾಲ್ಲೂಕಿನಲ್ಲಿ ಅವರೆಕಾಯಿ ಬೆಳೆಯನ್ನು ರಾಗಿ ಮತ್ತು ನೆಲಗಡಲೆ ಬೆಳೆಗಳ ನಡುವೆ ಅಕ್ಕಡಿ ಬೆಳೆಯಾಗಿ ಬೆಳೆಯುತ್ತಾರೆ. ಬೆಳೆ ನಡುವೆ ಸಾಲುಗಳಾಗಿ ಅವರೆ ಗಿಡ ಬೆಳೆಯಲಾಗುತ್ತದೆ. ಇದರಿಂದ ಮುಖ್ಯ ಬೆಳೆಗಳಿಗೆ ಕೀಟಗಳ ಹಾವಳಿ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ನೆಲಗಡಲೆ ಮತ್ತು ರಾಗಿ ಕೊಯ್ಲು ನಂತರ ಅವರೆಗೆ ಅವಕಾಶವಾಗಿ ಹುಲುಸಾಗಿ ಬೆಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ರೈತರು ಅವರೆಯನ್ನೇ ಮುಖ್ಯ ಬೆಳೆಯಾಗಿಯೂ ಬೆಳೆಯುತ್ತಾರೆ.

ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜನರು ಅವರೆಕಾಯಿಗಾಗಿಯೇ ಬಾಯಿ ಚಪ್ಪರಿಸುತ್ತಾ ಕಾಯುತ್ತಿರುತ್ತಾರೆ. ಅವರೆಕಾಯಿ ಕಾಲದಲ್ಲಿ ಬೇರೆ ಯಾವುದೇ ತರಕಾರಿ ಇಷ್ಟವಾ
ಗುವುದಿಲ್ಲ. ಅವರೆಕಾಳು ಹುಳಿ, ಕಾಳು
ಗೊಜ್ಜು, ಅವರೆಕಾಳು ಉಪ್ಪಿಟ್ಟು, ಅವರೆ
ಕಾಳು ಪಲ್ಯ, ಈದುಕಿನ ಬೇಳೆ ಸಾರು ಎಂದರೆ ಬಾಯಲ್ಲಿ ನೀರೂರುತ್ತದೆ.

ಭೂಮಿಯಲ್ಲಿ ತೇವಾಂಶ ಇರುವ ಕಾರಣದಿಂದ ಅವರೆಕಾಯಿ ಇಳುವರಿ ಹೆಚ್ಚಾಗಿದೆ. ಮಳೆಯಂತೆ ಬೀಳುತ್ತಿರುವ ಇಬ್ಬನಿ ಅವರೆ ಗಿಡಗಳಿಗೆ ವರದಾನವಾಗಿದೆ. ಉತ್ಕೃಷ್ಟವಾಗಿ ಅವರೆ ಬೆಳೆಯುತ್ತದೆ. ಡಿಸೆಂಬರ್ ಮಾಹೆಯಲ್ಲಿರುವ ಅವರೆಕಾಯಿ ಸೊಗಡು ಇತರ ದಿನಗಳಲ್ಲಿ ಇರುವುದಿಲ್ಲ. ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಅವರೆ ಕಾಯಿಗೆ ಬಹಳ ಬೇಡಿಕೆ ಇರುತ್ತದೆ ಎನ್ನುತ್ತಾರೆ ರೈತ ಮುನಿನಾರಾಯಣಪ್ಪ. .

ನಗರದ ಎಪಿಎಂಸಿ ಮಾರುಕಟ್ಟೆಗೆ ತಾಲ್ಲೂಕಿನಿಂದ ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಅವರೆಕಾಯಿ ಮಾರಾಟಕ್ಕೆ ಬರುತ್ತದೆ. ಬೆಳಗಿನ ಜಾವ ಮತ್ತು ಮಧ್ಯಾಹ್ನ ಎರಡು ಹರಾಜು ನಡೆಯುತ್ತದೆ. ಇಲ್ಲಿಂದ ಬೆಂಗಳೂರಿಗೆ ಹೆಚ್ಚಿಗೆ ರವಾನೆಯಾಗುತ್ತದೆ. ಪೇಟೆಯಲ್ಲಿ ಕಳೆದ ವರ್ಷ ಆರಂಭದಲ್ಲಿ 40-50 ಆಸುಪಾಸಿನಲ್ಲಿದ್ದ ಕೆ.ಜಿ ಅವರೆಕಾಯಿ ನಂತರ ₹20ರಿಂದ ₹25ರವರೆಗೆ ಇಳಿಕೆಯಾಗಿತ್ತು. ಈ ವರ್ಷ ₹40-50 ಮಾರಾಟವಾಗುತ್ತಿದೆ ಎನ್ನುತ್ತಾರೆ ಗೃಹಿಣಿಯರು.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಮುಂಗಾರು ಹಂಗಾಮಿನಲ್ಲಿ 1350 ಹೆಕ್ಟೇರ್ ಪ್ರದೇಶದಲ್ಲಿ ಅವರೆ ಬೆಳೆಯಾಗಿದೆ. ತಾಲ್ಲೂಕಿನ ಕೈವಾರ, ಕಸಬಾ, ಅಂಬಾಜಿದುರ್ಗ, ಮುರುಗಮಲ್ಲ ಹೋಬಳಿಗಳಲ್ಲಿ ರಾಗಿ ಬೆಳೆ ನಡುವೆ ಹಾಗೂ ಮುಂಗಾನಹಳ್ಳಿ, ಕೆಂಚಾರ್ಲಹಳ್ಳಿ ಹೋಬಳಿಗಳಲ್ಲಿ ನೆಲಗಡಲೆ ನಡುವೆ ಅವರೆ ಬೆಳೆ ಬೆಳೆಯುತ್ತಾರೆ. ಸ್ಥಳೀಯವಾಗಿ ಬೆಳೆಯುವ ಅವರೆ ಹೆಚ್ಚು ಸೊಗಡಿನಿಂದ ಕೂಡಿರುತ್ತದೆ.

ಉತ್ತಮ ಬೆಳೆ, ಅಧಿಕ ಇಳುವರಿ, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು ಬೆಲೆ ಅಧಿಕವಾಗಿದ್ದರೂ ರೈತರಿಗೆ ಹೆಚ್ಚಿನ ಲಾಭ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಗ್ರಾಹಕರಿಗೂ ಬೆಲೆ ಎಟುಕದಂತಾಗಿದೆ. ಆನೆ ಸತ್ತರೂ ಸಾವಿರ ಬದುಕಿದರೂ ಸಾವಿರ ಎಂಬ ನಾಡ್ನುಡಿಯಂತೆ ಬೆಳೆ ಅಧಿಕವಾಲಿ, ಕೊರತೆಯಾಗಲಿ ಮದ್ಯವರ್ತಿಗಳಿಗೆ ಮಾತ್ರ ಯಾವ ತೊಂದರೆಯೂ ಇಲ್ಲದೆ ಲಾಭ ಮಾಡಿಕೊಳ್ಳುತ್ತಾರೆ ಎಂದು ರೈತರು
ಆರೋಪಿಸುತ್ತಾರೆ.

ಹೊಲಗಳಲ್ಲಿ ಕಾಯಿ ಕೀಳುವ ಕೂಲಿ, ಮಾರುಕಟ್ಟೆಗೆ ಸಾಗಿಸುವ ವೆಚ್ಚ, ಮಾರುಕಟ್ಟೆ ಕಮೀಷನ್ ಮುಂತಾದ ಖರ್ಚು ಕಳೆದರೆ ರೈತರಿಗೆ ಸಿಗುವುದು ಅತ್ಯಲ್ಪ. ವ್ಯಾಪಾರಿಗಳು ಮಾತ್ರ ಒಂದೆರಡು ದಿನಗಳಲ್ಲಿ ರೈತರಿಗಿಂತ ಹೆಚ್ಚಿನ ಹಣ ಸಂಪಾದಿಸುತ್ತಾರೆ. ಗ್ರಾಹಕರು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಾಗಿದೆ ಎಂದು ಗ್ರಾಹಕರು ದೂರುತ್ತಾರೆ.

ಅವರೆ ಕಾಯಿಯನ್ನು ಕೀಳದೆ ಗಿಡಗಳಲ್ಲೇ ಒಣಗಿಸಿ ಅವರೆಕಾಳು ಮಾಡುತ್ತಾರೆ. ಒಣಗಿದ ಕಾಳು ಬೇಳೆ ಮಾಡಿಸಿ ಮಾರಿದರೆ ಉತ್ತಮ ಲಾಭ ಸಿಗುತ್ತದೆ. ಬೇಳೆ ಮಾಡುವ ಆಧುನಿಕ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಹಸಿ ಕಾಯಿಯನ್ನೇ ಮಾರಿಬಿಡುತ್ತಾರೆ. ಒಳ್ಳೆಯ ಲಾಭದ ಆಸೆಯಿಂದ ಒಣಗಿಸಿ ಬೇಳೆ ಮಾಡಲು ಹೊರಟರೆ ಪರಿಣಾಮಕಾರಿಯಾದ ತಂತ್ರಜ್ಞಾನವಿಲ್ಲದ ಕಾರಣ ಕಾಳಿಗೆ ಹುಳುಬಿದ್ದು ಹಾಳಾಗುತ್ತದೆ ಎಂದು ಅನುಭವಿ ರೈತ ಮನೋಹರ್ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT