ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಅನುಷ್ಠಾನ: ಇಒಗೆ ಪ್ರಶಸ್ತಿ

Last Updated 11 ಏಪ್ರಿಲ್ 2021, 7:23 IST
ಅಕ್ಷರ ಗಾತ್ರ

ಚಿಂತಾಮಣಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಕಾರ್ಯ ನಿರ್ವಹಣಾಧಿಕಾರಿ ಪ್ರಶಸ್ತಿಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಮಂಜುನಾಥ್ ಭಾಜನರಾಗಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತದೆ. 2020-21ನೇ ಸಾಲಿನ ನರೇಗಾ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗ್ರಾಮೀಣಾಭಿವೃದ್ಧಿ ಆಯುಕ್ತರ ಕಚೇರಿಯು ಈಚೆಗೆ ಪ್ರಕಟಿಸಿತ್ತು. ಅತ್ಯುತ್ತಮ ಕಾರ್ಯ ನಿರ್ವಹಣಾಧಿಕಾರಿ ಪ್ರಶಸ್ತಿಗೆ ಮಂಜುನಾಥ್ ಆಯ್ಕೆಯಾಗಿದ್ದರು.

ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಸಹಕಾರದಡಿ ಮಂಜುನಾಥ್ ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ನಾಲ್ವರು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮಾತ್ರ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ್ದು, ಅವರಲ್ಲಿ ಮಂಜುನಾಥ್ ಸಹ ಒಬ್ಬರಾಗಿದ್ದಾರೆ. ದೊಡ್ಡ ನೀರಾವರಿ ಯೋಜನೆಗಳನ್ನು ರೂಪಿಸಲು ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಜತೆಗೆ ದೀರ್ಘ ಕಾಲಾವಧಿ ಬೇಕಾಗುತ್ತದೆ. ನಮ್ಮ ಸುತ್ತಮುತ್ತಲು ಇರುವ ಜಲಸಂಪನ್ಮೂಲಗಳಿಗೆ ರಕ್ಷಣೆಗೆ ಅದ್ಯತೆ ನೀಡಬೇಕು ಎಂದು ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲಾಗಿದೆ. ಪೂರ್ವಿಕರು ಸಾರ್ವಜನಿಕರಿಗೆ ಜಾನುವಾರುಗಳಿಗೆ ನೀರುಣಿಸಲು ಕೆರೆ, ಕುಂಟೆ, ಕಲ್ಯಾಣಿಗಳ ನಿರ್ಮಾಣ ಮಾಡಿದ್ದರು. ಮುಚ್ಚಿಹೋಗಿದ್ದ ಕೆರೆಗಳಿಗೆ ನೀರಿ ಹರಿದು ಬರುತ್ತಿದ್ದ 450 ಕಾಲುವೆಗಳ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿದುಬರುವಂತೆ ದುರಸ್ತಿಗೊಳಿಸಲಾಗಿದೆ. 1,400 ವೈಯಕ್ತಿಕ ಕೃಷಿ ಹೊಂಡಗಳು ಹಾಗೂ 1,063 ಕ್ಷೇತ್ರ ಬದುಗಳ ನಿರ್ಮಾಣ ಮಾಡಿಸಿದ್ದಾರೆ.

‘ತಾಲ್ಲೂಕಿನಲ್ಲಿ ಮಾಡಿರುವ ಕೆಲಸ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಹಕಾರ ಸಾಧನೆಗೆ ಕಾರಣವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿಗೆ ಆದ್ಯತೆಯಾಗಿದೆ. ನರೇಗಾ ಹಾಗೂ ದಾನಿಗಳ ನೆರವಿನಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಚಿಂತನೆ ಮಾಡಲಾಗಿದೆ’ ಎನ್ನುತ್ತಾರೆ ಜಿ.ಆರ್. ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT