ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಶಾಸಕರಿಗೆ ಅಭಿವೃದ್ಧಿಯೇ ಸವಾಲು

ಶಾಶ್ವತ ನೀರಾವರಿ, ಕೈಗಾರಿಕೆ, ರೈಲ್ವೆ ಯೋಜನೆ ಜಾರಿಯಾಗಲಿ
Published 17 ಮೇ 2023, 6:19 IST
Last Updated 17 ಮೇ 2023, 6:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕ್ಷೇತ್ರದಲ್ಲಿ ಸತತವಾಗಿ ಶಾಸಕರಾಗಿ ಇತಿಹಾಸ ಸೃಷ್ಟಿ ಮಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಶಾಶ್ವತವಾದ ಕುಡಿಯುವ ನೀರು, ರೈಲ್ವೆ ಯೋಜನೆ, ಕೈಗಾರಿಕೆಗಳ ಸ್ಥಾಪನೆ, ಶುದ್ಧ ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಪ್ರಗತಿಗೆ ಸವಾಲು ಆಗಿದೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳು ಸೇರಿವೆ. 7 ಹೋಬಳಿ ಕೇಂದ್ರಗಳು ಇವೆ. ಜಿಲ್ಲೆಯ ಪೈಕಿ ಬಾಗೇಪಲ್ಲಿ ತಾಲ್ಲೂಕು ಭೌಗೋಳಿಕ ವಿಸ್ತೀರ್ಣದಲ್ಲಿ ಹೆಚ್ಚಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕು ಆಗಿದೆ. ಬೆಂಗಳೂರು ರಾಜಧಾನಿ ಕೇಂದ್ರಕ್ಕೆ ಹಾಗೂ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 80 ಕಿ.ಮೀ ನಷ್ಟು ದೂರದಲ್ಲಿ ತಾಲ್ಲೂಕು ಇದೆ.

ಮುಖ್ಯವಾಗಿ ನದಿ-ನಾಲೆಗಳು ಇಲ್ಲ. ಕೈಗಾರಿಕಾ ಪ್ರದೇಶ ಸ್ಥಾಪನೆ ಇಲ್ಲ. ಕೇವಲ ಕೃಷಿಯಾಧಾರಿತ, ಹೈನುಗಾರಿಕೆ ಹಾಗೂ ಬಹುತೇಕರು ಕೃಷಿ, ಕೂಲಿಕಾರ್ಮಿಕರು ಸಹ ಕೂಲಿ ಮಾಡಿ ಜೀವನ ಸಾಗಿಸುವಂತೆ ಆಗಿದೆ. ಪದವಿ ಪಡೆದ ಯುವಕರು-ಯುವತಿಯರು ಉದ್ಯೋಗಗಳಿಗೆ ಬೆಂಗಳೂರು, ದೆಹಲಿ, ಬಾಂಬೆ, ಚೆನೈಯಂತಹ ನಗರ ಪ್ರದೇಶಗಳಿಗೆ ವಲಸೆ ಹೋಗಿ ದುಡಿಯುತ್ತಿದ್ದಾರೆ. ಕೃಷಿ ಮಾಡಲು ಸಾಕಷ್ಟು ನೀರಿನ ಕೊರತೆಯಿಂದ ಕೃಷಿಕರು ಸಹ ಅನ್ಯ ರಾಜ್ಯಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುವಂತೆ ಆಗಿದೆ.

ಅಮರಾವತಿ, ರಾಜ್ಯದ ತಾಲ್ಲೂಕಿನ ಗಡಿಗೆ ಅಂಟಿಕೊಂಡಿರುವ ಚಿಲಮತ್ತೂರಿಗೆ ಕೃಷ್ಣಾ ನದಿಯಿಂದ ಕಾಲುವೆಗಳ ಮೂಲಕ ಸರ್ಕಾರ ಸರಬರಾಜು ಮಾಡಿದೆ. ಕೊಡಿಕೊಂಡ ಚೆಕ್‌ಪೋಸ್ಟ್, ಕೊಡೋರು ತೋಪು, ಪೆನುಕೊಂಡದ ಬಳಿ ಕಿಯಾ ಕಂಪನಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಮಾಡಿದೆ. ಆದರೆ ನಮ್ಮ ರಾಜ್ಯದ ಬೆಂಗಳೂರಿನ ರಾಜಧಾನಿ ಕೇಂದ್ರಕ್ಕೆ 100 ಕಿ.ಮೀ ನಷ್ಟು ದೂರ ಇದ್ದರೂ, ನಿರೀಕ್ಷಿತ ಮಟ್ಟಕ್ಕೆ ಅಭಿವೃದ್ಧಿ ಆಗಿಲ್ಲ.

ಕ್ಷೇತ್ರಕ್ಕೆ ಡಾ.ಪರಮಶಿವಯ್ಯ ವರದಿಯ ಪಶ್ಚಿಮ ಘಟ್ಟದಿಂದ ಸಮುದ್ರಕ್ಕೆ ಹರಿಯುವ ನೀರನ್ನು ಬಯಲುಸೀಮೆಗೆ ಹರಿಸುವ ಎತ್ತಿನಹೊಳೆ ಯೋಜನೆಯು 20 ವರ್ಷಗಳಿಂದ ನನೆಗುದಿಗೆ ಬಿದ್ದಿಗೆ. ತಾಲ್ಲೂಕಿನ 32 ಕೆರೆಗಳಿಗೆ ಬೆಂಗಳೂರಿನ ಎಚ್.ಎನ್.ವ್ಯಾಲಿಯ ಕೊಳಚೆ ನೀರನ್ನು ಶುದ್ಧೀಕರಿಸಿ, ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದೆ. ಗಡಿಗೆ ಹರಿದಿರುವ ನೀರನ್ನು ತಾಲ್ಲೂಕಿನ ಜನರಿಗೆ ಕುಡಿಯುವ ನೀರನ್ನು ಕಲ್ಪಿಸುವ ಯೋಜನೆಯು ಆಗಬೇಕಾಗಿದೆ. ಎತ್ತಿನಹೊಳೆ ಯೋಜನೆ ಜಾರಿ ಮಾಡಬೇಕು. ಪರಗೋಡುಚಿತ್ರಾವತಿ, ಬಿಳ್ಳೂರಿನ ವಂಡಮಾನ್ ಅಣೆಕಟ್ಟುಗಳಲ್ಲಿ ಹಾಗೂ ಕೆರೆಯಲ್ಲಿನ ಹೂಳನ್ನು ತೆಗೆಯುವ ಕೆಲಸ ಆಗಬೇಕು. ಕೆರೆ, ಕುಂಟೆಗಳಲ್ಲಿ, ಕಲ್ಯಾಣಿಗಳು, ತೆರೆದ ಹಾಗೂ ಮುಚ್ಚಿದ ಬಾವಿಗಳಲ್ಲಿ ಶಾಶ್ವತವಾಗಿ ನೀರು ಉಳಿಯಬೇಕಾದರೆ ಶಾಶ್ವತ ನೀರಾವರಿ ಯೋಜನೆ ಜಾರಿ ಆಗಲೇ ಬೇಕಾಗಿದೆ.

ಪುಟ್ಟಪರ್ತಿ– ಯಶವಂತಪುರ ರೈಲ್ವೆ ಕಾಮಗಾರಿ ಅಭಿವೃದ್ಧಿ ನಡೆದಿಲ್ಲ. ಕಾಮಗಾರಿಯ ಸರ್ವೆ ಕಾರ್ಯ ಮುಗಿದಿದ್ದು, ರೈಲ್ವೆ ಟ್ರಾಕ್ ಮಾಡಲು ರೈತರ ಜಮೀನು ಅಗತ್ಯವಿದೆ. ರೈತರಿಗೆ ಪರಿಹಾರ ಧನ ಕಲ್ಪಿಸಬೇಕಾಗಿದೆ. ಪಟ್ಟಣದ ಹೊರವಲಯದಲ್ಲಿ ಕನ್ಯಾಕುಮಾರಿ-ಕಾಶ್ಮೀರದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ರಸ್ತೆ 44 ಇದೆ. ರಾಜ್ಯದ ಗಡಿಯ 100 ಕಿ.ಮೀ ರಸ್ತೆಯಲ್ಲಿ ಸಣ್ಣ ಹಾಗೂ ಬೃಹತ್ ಮಟ್ಟದ ಕೈಗಾರಿಕೆ, ಗಾರ್ಮೆಂಟ್ಸ್‌ಗಳು ಆಗಬೇಕಿದೆ. ತಾಲ್ಲೂಕಿನ ಮಹಿಳೆಯರು ಆಂಧ್ರಪ್ರದೇಶದ ಕೊಡೊರು ತೋಪಿನಲ್ಲಿನ ಗಾರ್ಮೆಂಟ್ಸ್‌ಗೆ ತೆರಳುತ್ತಾರೆ. ಅವರಿಗೂ ತಾಲ್ಲೂಕಿನಲ್ಲೇ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. 

ಪೊಲೀಸ್ ವೃತ್ತದ ವ್ಯಾಪ್ತಿಗೆ ಒಬ್ಬರು ಸರ್ಕಲ್ ಇನ್‌ಸ್ಪೆಕ್ಟರ್ ಜತೆಗೆ 3 ಕಾನೂನು ಸುವ್ಯವಸ್ಥೆ, ಕ್ರೈಂ ವಿಭಾಗ ಹಾಗೂ ಸಂಚಾರಿ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ಪೈಕಿ 2 ಹುದ್ದೆಗಳನ್ನು ತುಂಬಿಸಿಲ್ಲ. ಪಟ್ಟಣದ ಮುಖ್ಯರಸ್ತೆಯಲ್ಲಿ ಪಾದಚಾರಿ ರಸ್ತೆ ಅತಿಕ್ರಮಣ, 20 ವರ್ಷಗಳಿಂದ ಒಳಚರಂಡಿ ಕಾಮಗಾರಿಯು ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಕೃಷಿ, ತೋಟಗಾರಿಕೆ, ಹಿಂದುಳಿದ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕೊರತೆ ಇದೆ.

ತಾಲ್ಲೂಕಿನ ಸರ್ಕಾರಿ ಪಾಲಿಟೆಕ್ನಿಕ್, ಐಟಿಐ, ಬಾಲಕರ, ಬಾಲಕಿಯರ ಕಾಲೇಜುಗಳ ಹಾಗೂ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಉಪನ್ಯಾಸಕರ, ಶಿಕ್ಷಕ ಶಿಕ್ಷಕಿಯರ ಹುದ್ದೆಗಳು ಭರ್ತಿಯಾಗಬೇಕು. ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರಕ್ಕೆ ತಡೆ ಹಾಕಬೇಕು. ತಾಲ್ಲೂಕಿನಲ್ಲಿ ಮಟ್ಕಾದ ಜತೆಗೆ ಗಾಂಜಾ ಸರಬರಾಜು ಸಂಪೂರ್ಣವಾಗಿ ನಿಲ್ಲಿಸಬೇಕು.

ಜನಪರ ಆಡಳಿತ ನೀಡುವ ತಾಲ್ಲೂಕು ಕಚೇರಿ, ಪಂಚಾಯಿತಿ, ಕಂದಾಯ, ಪೊಲೀಸ್, ಕೃಷಿ, ತೋಟಗಾರಿಕೆಯ, ಪುರಸಭೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಉತ್ತಮ ಅಧಿಕಾರಿಗಳು ನೇಮಕ ಆಗಬೇಕು. ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿಯನ್ನು ಹಾಗೂ ಅಗತ್ಯ ಆರೋಗ್ಯ ಚಿಕಿತ್ಸಾ ಸಲಕರಣೆಗಳನ್ನು ಒದಗಿಸಬೇಕು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸುವ ತರಕಾರಿಗಳ ಬೆಳೆಗಳನ್ನು ದಲ್ಲಾಳಿಗಳ, ಮಂಡಿ ಮಾಲೀಕರು ಇಲ್ಲದೇ ರೈತರೇ ಮಾರಾಟ ಮಾಡುವ ಕೆಲಸ ಆಗಬೇಕು. ಕಮಿಷನ್ ದಂದೆಗೆ ಕಡಿವಾಣ ಹಾಕಬೇಕು. ನನೆಗುದಿಗೆ ಬಿದ್ದಿರುವ ಇಂದಿರಾ ಕ್ಯಾಂಟೀನ್, ಡಾ.ಅಂಬೇಡ್ಕರ್, ವಾಲ್ಮೀಕಿ, ಸಂತ ಸೇವಾಲಾಲ್ ಭವನಗಳನ್ನು ಆರಂಭಿಸಬೇಕು.

ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಸಂಚರಿಸುವ ಬಸ್‌ಗಳು ಪಟ್ಟಣದ ಒಳಗೆ ಸಂಚರಿಸಬೇಕು. ಹೈಟೆಕ್ ಸರ್ಕಾರಿ ಬಸ್ ನಿಲ್ದಾಣ ಆಗಬೇಕು. ಚಿತ್ರಾವತಿ ನದಿಯ ಪಕ್ಕದಲ್ಲಿ ಖಾಸಗಿ ಬಸ್ ನಿಲ್ದಾಣ ಆಗಬೇಕು. ಟ್ರಾಫಿಕ್ ಸಮಸ್ಯೆ, ಸಿಗ್ನಲ್‌ಗಳನ್ನು ಅಳವಡಿಸಬೇಕು. ತಾಲ್ಲೂಕು ಕೇಂದ್ರಸ್ಥಾನದಲ್ಲಿ ವಾಯುವಿಹಾರ ಕೇಂದ್ರಗಳು ಹಾಗೂ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಮಾಡಬೇಕು.

ಒಳಚರಂಡಿ ಕಾಮಗಾರಿಯನ್ನು ಸಂಪೂರ್ಣವಾಗಿ ಮಾಡಬೇಕು. ತಾಲ್ಲೂಕಿನ ಅತಿ ಹಿಂದುಳಿದ ಗ್ರಾಮಗಳಿಗೆ, ತಾಂಡಗಳಿಗೆ ಸಂಪರ್ಕಿಸುವ ರಸ್ತೆಗಳು ಅಭಿವೃದ್ಧಿ ಆಗಬೇಕು. ಗ್ರಾಮಗಳಲ್ಲಿ ಸಿ.ಸಿ ರಸ್ತೆಗಳು, ಚರಂಡಿಗಳು ನಿರ್ಮಾಣ ಆಗಿ, ಕೊಳಚೆ ನೀರು ಚರಂಡಿಗಳಲ್ಲಿ ಹರಿಯುವಂತೆ ಮಾಡಬೇಕು. ಬಯಲುಮುಕ್ತ ಶೌಚಾಲಯ  ಹಾಗೂ ಗುಡಿಸಲು ಮುಕ್ತ ತಾಲ್ಲೂಕನ್ನು ಮಾಡಬೇಕು.

ಐತಿಹಾಸಿಕ ತಾಣವಾದ ಗುಮ್ಮನಾಯಕಪಾಳ್ಯದ ಕೋಟೆಯನ್ನು ಅಭಿವೃದ್ಧಿಪಡಿಸಿ, ಕೋಟೆ ಉತ್ಸವ ಮಾಡಬೇಕು. ಐತಿಹಾಸಿಕ ಗಡಿದಂ ಲಕ್ಷ್ಮಿವೆಂಕಟರಮಣಸ್ವಾಮಿ, ಪರಗೋಡುಪಂಚಲಿಂಗೇಶ್ವರ, ಚಿತ್ರಾವತಿ ಜಡಲಭೈರವೇಶ್ವರ, ಹಿರಣೇಶ್ವರ ಸ್ವಾಮಿಯ ಮುಜರಾಯಿ ಇಲಾಖೆಯ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬೇಕು. ಪಟ್ಟಣದ ಸೂಫಿ ಸಂತ ಅವಧೂತರಾದ ಹುಸೇನ್ ಷಾ ವಲಿ ದರ್ಗಾ, ಅವಧೂತ ಕಲ್ಲಿಪಲ್ಲಿಯ ಆದಿನಾರಾಯಣಸ್ವಾಮಿ ಗದ್ದುಗೆಯನ್ನು ಅಭಿವೃದ್ಧಿ ಪಡಿಸಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಬಳಕೆ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಬೇಕಾಗಿದೆ.

ಸತತವಾಗಿ 3 ಬಾರಿ ಶಾಸಕರಾಗಿರುವ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರದಿಂದ ಬಂದ ಅನುದಾನದಲ್ಲಿ ರಸ್ತೆ, ನೀರು, ಚರಂಡಿ, ಶಾಲಾ-ಕಾಲೇಜು, ವಿದ್ಯಾರ್ಥಿನಿಲಯ ಅಭಿವೃದ್ಧಿಪಡಿಸಿದ್ದಾರೆ. ತುಂಡು ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಳಕೆ ಮಾಡದೇ, ಶಾಶ್ವತ ಯೋಜನೆ ಜಾರಿ ಮಾಡಬೇಕು ಎನ್ನುವುದೇ ಸಾರ್ವಜನಿಕರ ಅಭಿಪ್ರಾಯ.

ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಗುಮ್ಮನಾಯಕನಪಾಳ್ಯದ ಕೋಟೆ ಅಭಿವೃದ್ಧಿ ಕಾಣದಾಗಿರುವುದು.
ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಗುಮ್ಮನಾಯಕನಪಾಳ್ಯದ ಕೋಟೆ ಅಭಿವೃದ್ಧಿ ಕಾಣದಾಗಿರುವುದು.
ಬಾಗೇಪಲ್ಲಿ ಪಟ್ಟಣದ 7 ನೇ ವಾರ್ಡ್‍ನ ಹಳೇ ಭಾರಿ ಶಾಲೆಯ ರಸ್ತೆ ಡಾಂಬರಿಕರಣ ಆಗದಿರುವುದು.
ಬಾಗೇಪಲ್ಲಿ ಪಟ್ಟಣದ 7 ನೇ ವಾರ್ಡ್‍ನ ಹಳೇ ಭಾರಿ ಶಾಲೆಯ ರಸ್ತೆ ಡಾಂಬರಿಕರಣ ಆಗದಿರುವುದು.

ಶಾಶ್ವತ ಯೋಜನೆ ರೂಪಿಸಿ ಕ್ಷೇತ್ರದಲ್ಲಿ ಜನರ ಬದುಕು ಬದಲಾವಣೆ ಆಗಲು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಶಾಶ್ವತ ನೀರಾವರಿಯಿಂದ ಹಾಗೂ ಗಾರ್ಮೆಂಟ್ಸ್‌ಗಳಿಂದ ಸಾಧ್ಯ. ತುಂಡು ಕಾಮಗಾರಿಗಳಿಂದ ಅಭಿವೃದ್ಧಿ ಆಗುವುದಿಲ್ಲ. ಶಾಶ್ವತ ಯೋಜನೆಗಳಿಗೆ ಹಣ ವ್ಯಯ ಮಾಡಿದರೆ ಜನರಿಗೆ ಅನುಕೂಲ ಆಗಲಿದೆ. ರಸ್ತೆ ಚರಂಡಿ ಸಿಸಿರಸ್ತೆ ತಕ್ಷಣ ಆಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಬೇಕು. ವೈ.ಎನ್.ಹರೀಶ್ ಡಿವೈಎಫ್‌ಐ ಮುಖಂಡ ದಲ್ಲಾಳಿಗಳ ಕಾಟ ತಪ್ಪಿಸಿ ಕಂದಾಯ ಪೊಲೀಸ್ ಪುರಸಭೆ ಕೃಷಿ ಎಪಿಎಂಸಿಗಳಲ್ಲಿ ದಲ್ಲಾಳಿಗಳ ಕಾಟ ತಪ್ಪಿಸಿ. ಉತ್ತಮ ಅಧಿಕಾರಿಗಳನ್ನು ಸಿಬ್ಬಂದಿಯನ್ನು ನೇಮಕ ಮಾಡಿ. ಜನರ ಕೆಲಸಗಳಿಗೆ ವಿನಾಃಕಾರಣ ತಿರುಗಿಸುವವರಿಗೆ ಹಾಗೂ ಹಲವಾರು ವರ್ಷಗಳಿಂದ ಇಲಾಖೆಗಳಲ್ಲಿ ಕೆಲಸ ಮಾಡದ ಅಧಿಕಾರಿಗಳನ್ನು ಸಿಬ್ಬಂದಿಯನ್ನು ಬದಲಿಸಿ. ಜನಪರ ಆಡಳಿತ ನೀಡಲು ಶಾಸಕರು ಗಮನ ಹರಿಸಬೇಕು. ಎಂ.ಎಸ್.ನರಸಿಂಹಾರೆಡ್ಡಿ ಪ್ರಗತಿಪರ ರೈತ ಗ್ರಾಮೀಣ ಪ್ರದೇಶಕ್ಕೆ ರಸ್ತೆಯಾಗಲಿ ಶಾಶ್ವತ ಯೋಜನೆಗಳಾದ ನೀರು ಗಾರ್ಮೆಂಟ್ಸ್ ಕೈಗಾರಿಕೆ ರೈಲ್ವೆ ಯೋಜನೆ ಮಾಡಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಪಟ್ಟಣದಲ್ಲಿ ಒಳಚರಂಡಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿಸಬೇಕು. ಡಾಂಬರಿಕರಣ ಆಗದ ಹಾಗೂ ಕಟ್ಟಕಡೆಯ ಗ್ರಾಮೀಣ ಪ್ರದೇಶಗಳಿಗೆ ರಸ್ತೆಗಳು ಆಗಬೇಕು. ಸರ್ಕಾರಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿ ಪಡಿಸಬೇಕು. ಮಹಮದ್ ಎಸ್.ನೂರುಲ್ಲಾ ಪುರಸಭಾ ಮಾಜಿ ಸದಸ್ಯ ಟೊಮೆಟೊ ಮಾರುಕಟ್ಟೆ ನಿರ್ಮಿಸಿ ಎಪಿಎಂಸಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ದಲ್ಲಾಳಿಗಳ ಕಾಟ ತಪ್ಪಿಸಬೇಕು. ರೈತರೇ ಬೆಳೆಗಳನ್ನು ಮಾರಾಟ ಮಾಡುವಂತೆ ಮಾಡಬೇಕು. ಪರಗೋಡು ಬಳಿ ನೂತನ ಟೊಮೆಟೊ ಮಾರುಕಟ್ಟೆ ನಿರ್ಮಿಸಬೇಕು. ಕೃಷಿ ತೋಟಗಾರಿಕೆಯ ಅಧಿಕಾರಿಗಳು ಸಿಬ್ಬಂದಿಯನ್ನು ನೇಮಕ ಮಾಡಿಸಬೇಕು. ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಮದ್ದಿಲೇಟಿರೆಡ್ಡಿ ರೈತರು ದೇವರೆಡ್ಡಿಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ರಸ್ತೆ ಅತಿಕ್ರಮಣ ಟ್ರಾಫಿಕ್ ಕಿರಿಕಿರಿ ತಪ್ಪಿಸಿ ಸಾರ್ವಜನಿಕ ಶೌಚಾಲಯಗಳನ್ನು ವಾಯುವಿಹಾರ ಕೇಂದ್ರಗಳು ಮಕ್ಕಳ ಉದ್ಯಾನಗಳನ್ನು ಮಾಡಬೇಕು. ಪ್ರತ್ಯೇಕ ವಾಹನಗಳ ನಿಲ್ದಾಣಗಳು ಮಾಡಬೇಕು. ಸುವ್ಯವಸ್ಥಿತವಾಗಿ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳು ಸಭೆ-ಸಮಾರಂಭ ಮಾಡಲು ಬಯಲು ರಂಗಮಂದಿರ ಮಾಡಬೇಕು. ಕ್ರೀಡಾಂಗಣ ಅಭಿವೃದ್ಧಿ ಮಾಡಬೇಕು. ಒಳಾಂಗಣ ಕ್ರೀಡಾಂಗಣ ಮಾಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT