ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪ್ರಕರಣ: ಅಧೀಕ್ಷಕ ಅಮಾನತು

ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬದಲಾವಣೆಗೆ ಆದೇಶ, ವರದಿ ಕೇಳಿದ ಸರ್ಕಾರದ ಮುಖ್ಯ ಕಾರ್ಯದರ್ಶಿ
Last Updated 29 ಮಾರ್ಚ್ 2019, 13:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿದ್ದ ಸಂತ್ರಸ್ತ ಬಾಲಕಿಯರನ್ನು ಭದ್ರತಾ ಸಿಬ್ಬಂದಿಯೊಬ್ಬರು ವೇಶ್ಯಾವಾಟಿಕೆಗೆ ಹಚ್ಚಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಮಂದಿರದ ಅಧೀಕ್ಷಕ ಮತ್ತು ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ತಲೆದಂಡವಾಗಿದೆ.

ಬಾಲ ಮಂದಿರದಲ್ಲಿ ನಡೆದ ಅಕ್ರಮದ ಬಗ್ಗೆ ‘ಪ್ರಜಾವಾಣಿ’ ಶುಕ್ರವಾರ ‘ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದರು!’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಯೋಜನಾ ನಿರ್ದೇಶಕರು ಬಾಲ ಮಂದಿರದ ಅಧೀಕ್ಷಕ ನಾಗಭೂಷಣಾಚಾರಿ ಅವರನ್ನು ಅಮಾನತುಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಶಿಫಾರಸು ಮಾಡಿದ್ದರು.

ಅದರಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಅರುಂಧತಿ ಅವರು ನಾಗಭೂಷಣಾಚಾರಿ ಅಮಾನತುಗೊಳಿಸಿ, ತೆರವಾದ ಆ ಹುದ್ದೆಯನ್ನು ಮುಂದಿನ ಆದೇಶದ ವರೆಗೆ ಚಿಕ್ಕಬಳ್ಳಾಪುರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ತೇಜಸ್ವಿನಿ ಎಸ್‌.ಸಂಕಣ್ಣನವರ ಹಂಗಾಮಿಯಾಗಿ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

‘ನಾಗಭೂಷಣಾಚಾರಿ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಮತ್ತು ಸಂಸ್ಥೆಯ ನಿವಾಸಿಗಳ ಹಿತದೃಷ್ಟಿಯನ್ನು ಕಾಪಾಡಬೇಕಿತ್ತು. ಆದರೆ ಬಹಳ ದಿನಗಳಿಂದ ಅಕ್ರಮ ಕೆಲಸ ನಡೆಯುತ್ತಿದ್ದರೂ ಸರಿಯಾಗಿ ಗಮನ ಹರಿಸದೆ ಸಂಸ್ಥೆಯ ನಿವಾಸಿಗಳು ದುರುಪಯೋಗಕ್ಕೆ ಒಳಗಾಗುವುದನ್ನು ತಡೆಗಟ್ಟುವುದರಲ್ಲಿ ವಿಫಲರಾಗಿದ್ದಾರೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೊರಗುತ್ತಿಗೆ ಸಿಬ್ಬಂದಿ ಬದಲಾವಣೆ

ಇನ್ನೊಂದೆಡೆ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಯೋಜನಾ ನಿರ್ದೇಶಕರು ಬಾಲಮಂದಿರದಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಿ ಹೊಸಬರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಅವರಿಗೆ ಆದೇಶಿಸಿದ್ದಾರೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹೆಚ್.ಎಸ್ ಕೊರಡ್ಡಿ ಅವರು ಶುಕ್ರವಾರ ಬೆಳಿಗ್ಗೆ ಬಾಲಮಂದಿರಕ್ಕೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಆದೇಶಿಸಿದರು.

ಮಧ್ಯಾಹ್ನ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆ್ಯಂಟನಿ ಸೆಬಾಸ್ಟಿಯನ್ ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲೂಸಿ) ಅಧ್ಯಕ್ಷೆ ಮೇರಿ ಚೆಲ್ಲದುರೈ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ಬಾಲಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಆ್ಯಂಟನಿ ಅವರು ಬಾಲಕಿಯರ ಹೇಳಿಕೆ ಪಡೆದು, ಸಿಬ್ಬಂದಿ ವಿಚಾರಣೆ ನಡೆಸಿ, ಕಟ್ಟಡವನ್ನು ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT