ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು: ಅಪಾಯಕ್ಕೆ ಕಾದಿರುವ ವಿದ್ಯುತ್ ಕಂಬಗಳು!

ಗೌರಿಬಿದನೂರು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಪಾಯಕ್ಕೆ ಬಾಯಿ ತೆರೆದ ವಿದ್ಯುತ್
Published 30 ಮೇ 2024, 6:06 IST
Last Updated 30 ಮೇ 2024, 6:06 IST
ಅಕ್ಷರ ಗಾತ್ರ

ಗೌರಿಬಿದನೂರು: ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್‌)ಗಳಿಗೆ ಹಬ್ಬಿರುವ ಬಳ್ಳಿಗಳು, ಅಪಾಯಕ್ಕೆ ಆಹ್ವಾನ ಎನ್ನುವಂತೆ ಬಾಗಿಲು ತೆರೆದಿರುವ ಫೀಡರ್ ಪಿಲ್ಲರ್ ಡಬ್ಬಗಳು, ಮಳೆಗಾಲದಲ್ಲಿ ಮರದ ಕೊಂಬೆಗಳಿಗೆ ತಾಗುವ ತಂತಿಗಳು...ಗೌರಿಬಿದನೂರು ನಗರ ಹಾಗೂ ಗ್ರಾಮಾಂತರ ಭಾಗದ ಕೆಲವು ಕಡೆಗಳಲ್ಲಿ ಕಣ್ಣಿಗೆ ಕಾಣುವ ದೃಶ್ಯಗಳು ಇವೆ. 

ವಿದ್ಯುತ್ ಕಂಬಗಳು, ಪರಿವರ್ತಕಗಳು ಹಾಗೂ ಇದಕ್ಕೆ ಸಂಬಂಧಿಸಿದ ಸಾಧನ ಸಲಕರಣೆಗಳ ಬಳಕೆಯ ವಿಚಾರದಲ್ಲಿ ತಾಲ್ಲೂಕಿನಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಲಿ ಪಡೆಯಲು ಕಾದಿರುವ ಮೃತ್ಯುಗಳಾಗಿ ಈ ಸ್ಥಳಗಳು ಕಾಣುತ್ತವೆ. ಆದರೆ ಬೆಸ್ಕಾಂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಜಾಣ ಕುರುಡರಾಗಿದ್ದಾರೆ. 

ನಗರದ ನ್ಯಾಷನಲ್ ಕಾಲೇಜಿನ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್ ಫ್ಯೂಸ್‌ಗಳನ್ನು ಅಳವಡಿಸಿರುವ ಫೀಡರ್ ಫಿಲ್ಲೆರ್ ಡಬ್ಬಗಳ ಬಾಗಿಲುಗಳು ಸದಾ ತೆರೆದಿರುತ್ತವೆ. ಇನ್ನೂ ಹಲವು ಕಡೆ ಸರಿಯಾಗಿ ವೈರಿಂಗ್ ಮಾಡದೆ ಬಿಡಲಾಗಿದೆ.

ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ನಿತ್ಯ ಓಡಾಡುವ ಜನನಿಬಿಡ ಪ್ರದೇಶವಾಗಿದ್ದರೂ ಸಹ ಅಧಿಕಾರಿಗಳು ಇಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುವರು. 

ನಗರದ ಮರಿಯಪ್ಪನ ಪಾಳ್ಯ ಮತ್ತು ಕಿಂಗ್ಸ್ ಬಾರ್ ಮುಂಭಾಗದ ಮುಖ್ಯ ರಸ್ತೆಗಳಲ್ಲಿ ವಿದ್ಯುತ್‌ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿವೆ. ಮಳೆಗಾಲದಲ್ಲಿ ಇದರ ಅಪಾಯ ಹೆಚ್ಚು ಎಂದು ತಿಳಿದಿದ್ದರೂ ಬಳ್ಳಿಗಳನ್ನು ತೆರವುಗೊಳಿಸಿಲ್ಲ. 

ತಾಲ್ಲೂಕಿನ ಹುದೂತಿ, ನಾಗಸಂದ್ರ, ದ್ವಾರಗಾನಹಳ್ಳಿ ಹೀಗೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ವಾಲಿವೆ. ಕೆಲವೆಡೆ ವಿದ್ಯುತ್ ತಂತಿಗಳು ತುಂಬಾ ಕೆಳ ಮಟ್ಟಕ್ಕೆ ಜಗ್ಗಿವೆ. ಅಪಾಯ ಖಚಿತ ಎನ್ನುವಂತಿದೆ.

ಮಳೆಗಾಲ ಪ್ರಾರಂಭವಾಗಿದೆ. ವಿದ್ಯುತ್ ಅಪಾಯ ತುಸು ಹೆಚ್ಚಾಗಿಯೇ ಇರುತ್ತದೆ. ಮಳೆ ಬಂದಾಗ ಮರದ ರೆಂಬೆ ಕೊಂಬೆಗಳು ತಂತಿಗಳಿಗೆ ತಾಕಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅರಿವು ಇದ್ದರೂ ಬೆಸ್ಕಾಂ ನಿರ್ಲಕ್ಷ್ಯವಹಿಸಿದೆ. ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ದೌಡಾಯಿಸುವ ಅಧಿಕಾರಿಗಳು ಅವಘಡ ನಡೆಯುವ ಮುನ್ನವೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಅನಾಹುತಗಳನ್ನು ತಡೆಯಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

 ಗ್ರಾಮಾಂತರ ಭಾಗಗಳಲ್ಲಿನ ಅಧ್ವಾನಗಳ ಬಗ್ಗೆ ಸ್ಥಳೀಯ ಬೆಸ್ಕಾಂ ಶಾಖಾಧಿಕಾರಿಗಳ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಸಹ ವ್ಯಾಪಕವಾಗಿವೆ. 

ಹುದೂತಿ ಗ್ರಾಮದಲ್ಲಿ ಬಾಗಿರುವ ವಿದ್ಯುತ್ ಕಂಬ
ಹುದೂತಿ ಗ್ರಾಮದಲ್ಲಿ ಬಾಗಿರುವ ವಿದ್ಯುತ್ ಕಂಬ
ಹಿರೇಬಿದನೂರಿನ ಬಳಿ ವಿದ್ಯುತ್ ತಂತಿಗಳಿಗೆ ಹಬ್ಬಿರುವ ಬಳ್ಳಿ 
ಹಿರೇಬಿದನೂರಿನ ಬಳಿ ವಿದ್ಯುತ್ ತಂತಿಗಳಿಗೆ ಹಬ್ಬಿರುವ ಬಳ್ಳಿ 
ಕೋಟೆ ಕೋದಂಡ ರಾಮಸ್ವಾಮಿ ದೇವಸ್ಥಾನದ ಹತ್ತಿರದ ಸ್ಥಿತಿ
ಕೋಟೆ ಕೋದಂಡ ರಾಮಸ್ವಾಮಿ ದೇವಸ್ಥಾನದ ಹತ್ತಿರದ ಸ್ಥಿತಿ
ಸಿದ್ದೇನಹಳ್ಳಿಯಲ್ಲಿ ಬಾಗಿರುವ ಕಂಬ
ಸಿದ್ದೇನಹಳ್ಳಿಯಲ್ಲಿ ಬಾಗಿರುವ ಕಂಬ

Cut-off box - ಸಮಸ್ಯೆ ಪತ್ತೆ ಮಾಡಿ ಪರಿಹಾರ ನಮ್ಮ ಗಮನಕ್ಕೆ ಬಾರದ ಸಮಸ್ಯೆಗಳು ಇದ್ದರೆ ಅವುಗಳನ್ನು ಪತ್ತೆ ಮಾಡಿ ಆದಷ್ಟು ಬೇಗ ಪರಿಹರಿಸಲಾಗುವುದು.  ಪರಮೇಶ್ವರಪ್ಪ ಬೆಸ್ಕಾಂ ಎಇಇ ಗೌರಿಬಿದನೂರು  *** ‘ಗಮನಕ್ಕೆ ತಂದರೂ ಪ್ರಯೋಜವಿಲ್ಲ’ ಗ್ರಾಮದ ಕೆಲವು ಕಡೆ ವಿದ್ಯುತ್ ಕಂಬಗಳು ಹಳೆಯವಾಗಿವೆ. ಶಿಥಿಲವಾಗಿರುವ ಇವು ಯಾವ ಕ್ಷಣದಲ್ಲಾದರೂ ಮುರಿದು ಬೀಳಬಹುದು. ತಂತಿಗಳು ವ್ಯಕ್ತಿಗೆ ತಾಕುವಷ್ಟು ಕೆಳಕ್ಕೆ ಜಗ್ಗಿವೆ. ಹೊಲ ತೋಟಗಳಲ್ಲಿ ಉಳುಮೆ ಮಾಡಲು ಆಗದಂತಹ ಸ್ಥಿತಿ ಇದೆ. ನಾವೇ ಕಟ್ಟಿಗೆ ಮೂಲಕ ತಂತಿಗಳು ತಾಕದಂತೆ ಮೇಲೆತ್ತಿ ನಿಲ್ಲಿಸಿದ್ದೇವೆ.  ಆದರೆ ಗೆದ್ದಲು ಹುಳುಗಳು ಕಟ್ಟಿಗೆಯನ್ನು ತಿನ್ನುವುದರಿಂದ ಯಾವಾಗಲು ಕಟ್ಟಿಗೆ ಬದಲಾಯಿಸುತ್ತಿರಬೇಕು. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗಿಡ್ಡಪ್ಪ ರೈತ ದ್ವಾರಗಾನಹಳ್ಳಿ ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT