ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಗ್ರಾಮಕ್ಕೆ ಭೂಮಿಪೂಜೆ

Last Updated 12 ಆಗಸ್ಟ್ 2021, 5:36 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ನಲ್ಲಪರೆಡ್ಡಿಪಲ್ಲಿ ಗ್ರಾಮದಲ್ಲಿ ಆದರ್ಶ ಗ್ರಾಮ ಯೋಜನೆಯಡಿ ₹ 3 ಕೋಟಿ ವೆಚ್ಚದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು, ಶಾಲೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಲಭ್ಯ ಕಲ್ಪಿಸಿ ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು’ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.

ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮದಲ್ಲಿ ಬುಧವಾರ ಆದರ್ಶ ಗ್ರಾಮ ಯೋಜನೆಯಡಿ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕಿನಲ್ಲಿ ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದ ಗ್ರಾಮಗಳನ್ನು ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಯೋಜನೆಯಡಿ ₹ 1 ಕೋಟಿ ವ್ಯಯ ಮಾಡಿ ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿ ಮಾದರಿ ಗ್ರಾಮಗಳನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ಬಾಗೇಪಲ್ಲಿ, ಗೂಳೂರು, ಜಿಲಾಜರ್ಲು ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿಯವರು ಪಕ್ಷಕ್ಕೆ ಕರೆದು ಹಣ, ಅಧಿಕಾರ ನೀಡುತ್ತೇವೆ ಎಂದು ಆಮಿಷವೊಡ್ಡಿದರು. ಆದರೆ ನಾನು ಹೋಗಲಿಲ್ಲ. ನನ್ನ ಮೇಲೆ ಕ್ಷೇತ್ರದ ಜನರು ಇಟ್ಟಿರುವ ನಂಬಿಕೆ, ವಿಶ್ವಾಸ, ಪ್ರೀತಿಗೆ ಎಂದೂ ದ್ರೋಹ ಬಗೆಯಲ್ಲ. ನನ್ನನ್ನು ನಾನು ಮಾರಿಕೊಳ್ಳುವಂತಹ ಜಾಯಮಾನ ನನ್ನದಲ್ಲ. ಕ್ಷೇತ್ರದ ಜನರಿಗೆ ಎಂದಿಗೂ ಚ್ಯುತಿ ತರುವುದಿಲ್ಲ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

‘ತಾಲ್ಲೂಕಿನಲ್ಲಿ ದರಖಾಸ್ತು ಸಮಿತಿಯನ್ನು ಸರ್ಕಾರ ರಚಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿಯೇ ನಾನು, ಅಧಿಕಾರಿಗಳ ಸಮೇತ ಆಗಮಿಸಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲಾಗುವುದು’ ಎಂದರು.

ನಲ್ಲಪರೆಡ್ಡಿಪಲ್ಲಿ ಗ್ರಾಮಕ್ಕೆ ತಹಶೀಲ್ದಾರ್, ಕಂದಾಯ, ಗ್ರಾಮ ಲೆಕ್ಕಿಗರು ಆಗಮಿಸುತ್ತಾರೆ. ಅರ್ಹರು ಸಂಧ್ಯಾ ಸುರಕ್ಷಾ ಯೋಜನೆಯ ಸೌಲಭ್ಯ ಪಡೆಯಬೇಕು. ಇದಕ್ಕಾಗಿ ಪ್ರತಿಯೊಬ್ಬರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ನರೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್ ಬಾಬು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷ ಎ. ಶ್ರೀನಿವಾಸ್, ಸದಸ್ಯ ಅಶೋಕ್ ರೆಡ್ಡಿ, ಮಾಜಿ ಸದಸ್ಯ ಆನಂದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸರೆಡ್ಡಿ, ಜಯಪ್ರಕಾಶ್ ನಾರಾಯಣ್, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯ ಆನಂದರೆಡ್ಡಿ, ಉಪಾಧ್ಯಕ್ಷೆ ರಜಿತಾ ನಂಜುಂಡಪ್ಪ, ಮುಖಂಡರಾದ ಅಮರನಾಥ ರೆಡ್ಡಿ, ಮಹೇಶ್, ಸಿ.ಡಿ. ಆನಂದ, ವೆಂಕಟೇಶಪ್ಪ, ಗಂಗುಲಮ್ಮ, ರತ್ನಮ್ಮ, ನರಸಿಂಹ, ಗಂಗುಲಪ್ಪ, ವೆಂಕಟಮ್ಮ, ಉಮಾದೇವಿ ನಾಗರಾಜ್, ಲಂಬೋ ಶ್ರೀನಿವಾಸ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT