ಬುಧವಾರ, ಜೂನ್ 3, 2020
27 °C
ಲಾಕ್‌ಡೌನ್‌ ಪರಿಣಾಮ ನಗರದ ಮಾರುಕಟ್ಟೆಯಲ್ಲಿ ಏರಿಕೆಯಾದ ತರಕಾರಿ, ಹಣ್ಣುಗಳ ಬೆಲೆಗಳು

ಬಿನ್ಸ್‌ ದುಪ್ಪಟ್ಟು, ಕಹಿಯಾದ ಸೇಬು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಹರಡುವುದು ತಡೆಯಲು ಜಾರಿಗೆ ತಂದ ಲಾಕ್‌ಡೌನ್ ಪರಿಣಾಮ ಒಂದೆಡೆ ತರಕಾರಿ, ಹಣ್ಣು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿ ನಲಗುತ್ತಿರುವ ಹೊತ್ತಿನಲ್ಲಿಯೇ, ಇನ್ನೊಂದೆಡೆ ಸದ್ದಿಲ್ಲದೇ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳ ಬೆಲೆಗಳು ಗಗನಮುಖಿಯಾಗುತ್ತಿವೆ.

ಎಕರೆಗಟ್ಟಲೇ ಹಣ್ಣು, ತರಕಾರಿ ಬೆಳೆದ ರೈತರು ಖರೀದಿದಾರರಿಲ್ಲದೆ ಕಣ್ಣೆದುರೆ ಕೊಳೆಯುತ್ತಿರುವ ಫಸಲು ನೋಡಿ ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದೆಡೆ ಲಾಕ್‌ಡೌನ್ ಪರಿಣಾಮ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಬೆಲೆಯನ್ನು ದಿನೇ ದಿನೇ ಏರುಮುಖವಾಗಿಸಿದೆ.

ತರಕಾರಿಗಳ ಪೈಕಿ ಸದ್ಯ ಈರುಳ್ಳಿ, ಬೀನ್ಸ್‌ ಬೆಲೆ ದುಪ್ಪಟ್ಟಾದರೆ, ಹಣ್ಣುಗಳ ಪೈಕಿ ಸೇಬು ಮತ್ತು ದಾಳಿಂಬೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿವೆ. ಲಾಕ್‌ಡೌನ್‌ ಕೊನೆಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳುವವರೆಗೂ ಪರಿಸ್ಥಿತಿ ಹೀಗೆ ಇರಲಿದೆ ಎನ್ನುತ್ತಾರೆ ನಗರದ ವರ್ತಕರು.

ಕಳೆದ ವಾರ ಒಂದು ಕೆ.ಜಿಗೆ ₹40 ರಂತೆ ಮಾರಾಟವಾಗಿದ್ದ ಬೀನ್ಸ್‌ ಪ್ರಸ್ತುತ ₹80ಕ್ಕೆ ಏರಿದೆ. ₹30ಗೆ ಮಾರುತ್ತಿದ್ದ ಮೆಣಸಿನಕಾಯಿ ಬೆಲೆಯಲ್ಲಿ ₹50 ತಲುಪಿದೆ. ₹10ಕ್ಕೆ ಬಿಕರಿಯಾಗುತ್ತಿದ್ದ ಟೊಮೆಟೊ ಬೆಲೆ ಇದೀಗ ₹15ಕ್ಕೆ ತಲುಪಿದೆ.

ಈರುಳ್ಳಿ ಬೆಲೆ ಗಗನಮುಖಿಯಾಗಿದ್ದು, ಕಳೆದ ವಾರ ₹20ಕ್ಕೆ ಮಾರುತ್ತಿದ್ದ ಈರುಳ್ಳಿ ಇದೀಗ ₹40ರ ಗಡಿ ತಲುಪಿದೆ. ಜತೆಗೆ ₹110ಕ್ಕೆ ಮಾರುತ್ತಿದ್ದ ಬೆಳ್ಳುಳ್ಳಿ ₹150ಕ್ಕೆ ಏರಿದೆ. ₹20 ಮಾರುತ್ತಿದ್ದ ಆಲೂಗಡ್ಡೆ ಬೆಲೆ ಸ್ಥಿರವಾಗಿದೆ. ಕ್ಯಾರೆಟ್‌ ಬೆಲೆ ಕೂಡ ಬದಲಾಗಿಲ್ಲ. ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಸೊಪ್ಪುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.

ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು, ಕಿತ್ತಳೆ, ಏಲಕ್ಕಿ ಬಾಳೆ, ಮೊಸಂಬಿ ಬೆಲೆ ಕೊಂಚ ಏರಿಕೆಯಾಗಿದೆ. ಉಳಿದಂತೆ ಕೆಲ ಹಣ್ಣುಗಳ ಧಾರಣೆಯಲ್ಲಿ ಸ್ಥಿರತೆ ಮುಂದುವರಿದಿದೆ. ಜಿಲ್ಲೆಯಲ್ಲಿ ನೂರಾರು ಎಕರೆಯಲ್ಲಿರುವ ದ್ರಾಕ್ಷಿ ಕಟಾವು ಮಾಡಲಾಗದೆ ರೈತರು ಕಂಗಾಲಾಗಿದ್ದರೆ ನಗರದ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಕೆ.ಜಿ.ಗೆ ₹100 ದ್ರಾಕ್ಷಿ ಮಾರಾಟವಾಗುತ್ತಿದೆ.

ಕಳೆದ ವಾರ ಒಂದು ಕೆ.ಜಿ ಗೆ ₹ 50ರ ಆಸುಪಾಸಿನಲ್ಲಿದ್ದ ಏಲಕ್ಕಿ ಬಾಳೆ ಬೆಳೆ ಸದ್ಯ ₹60ಕ್ಕೆ ಏರಿದೆ. ಆದರೆ ಪಚ್ಚ ಬಾಳೆ ಬೆಲೆಯಲ್ಲಿ (₹ 30) ಯಾವುದೇ ಬದಲಾವಣೆ ಆಗಿಲ್ಲ. ಗರಿಷ್ಠ ₹150ಕ್ಕೆ ಮಾರಾಟವಾಗುತ್ತಿದ್ದ ಸೇಬು ಇದೀಗ ₹180ಕ್ಕೆ ತಲುಪಿದೆ.

₹150ರ ಆಸುಪಾಸಿನಲ್ಲಿದ್ದ ದಾಳಿಂಬೆ ₹180 ತಲುಪಿದೆ. ಕೆಲ ದಿನಗಳ ಹಿಂದೆ ಒಂದು ಕೆ.ಜಿ ಗೆ ₹40ಕ್ಕೆ ಮಾರಾಟವಾಗುತ್ತಿದ್ದ ಕಿತ್ತಳೆ ಇದೀಗ ₹60ಕ್ಕೆ ಬಿಕರಿಯಾಗುತ್ತಿದೆ. ಕಲ್ಲಂಗಡಿ ಬೆಲೆಯಲ್ಲಿ ₹20ಕ್ಕೆ ಸ್ಥಿರವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು