ಭಾನುವಾರ, ನವೆಂಬರ್ 29, 2020
25 °C
ಹೆಚ್ಚು ಬಲವಿದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡ ಕಾಂಗ್ರೆಸ್; ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ

ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಿದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರಸಭೆಯ ಅಧ್ಯಕ್ಷಗಾದಿ ಆಶ್ಚರ್ಯಕರ ರೀತಿಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪಾಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರ ಫಲಿಸಿದೆ. ಜೆಡಿಎಸ್‌ ಹಾಗೂ ಪಕ್ಷೇತರರು ಬಿಜೆಪಿ ಜೊತೆ ಕೈಜೋಡಿಸಿದ್ದಲ್ಲದೆ, ಕಾಂಗ್ರೆಸ್‌ನ ನಾಲ್ಕು ಸದಸ್ಯರ ಮತವೂ ಬಿಜೆಪಿ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿಗೆ ಲಭಿಸಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಆನಂದರೆಡ್ಡಿ ಆಯ್ಕೆಯಾಗಿದ್ದು, ಜೆಡಿಎಸ್‌ ಸದಸ್ಯೆ ವೀಣಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಕಾಂಗ್ರೆಸ್ ಆಡಳಿತವೇ ಮುಂದುವರಿಯಲಿದೆ ಎಂದು ಮೊದಲಿಗೆ ಅಂದಾಜಿಸಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರದಿಂದಾಗಿ ನಿರೀಕ್ಷೆ ಹುಸಿಯಾಗಿದೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಆನಂದರೆಡ್ಡಿ 22 ಮತಗಳನ್ನು ಪಡೆದರು. ಕಾಂಗ್ರೆಸ್‌ ಅಭ್ಯರ್ಥಿ ಅಂಬಿಕಾ 9 ಮತಗಳನ್ನು ಪ‍ಡೆದರು.

ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಕಾಂಗ್ರೆಸ್ 16, ಬಿಜೆಪಿ 9, ಜೆಡಿಎಸ್ 2 ಹಾಗೂ 4 ಪಕ್ಷೇತರ ಸದಸ್ಯರಿದ್ದಾರೆ. ಸಂಖ್ಯಾಬಲವನ್ನು ನೋಡಿದರೆ ಕಾಂಗ್ರೆಸ್ ಸುಲಭವಾಗಿ ಅಧಿಕಾರದ ಚುಕ್ಕಾಣಿ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಂಗ್ರೆಸ್‌ನ ನಾಲ್ವರು ಸದಸ್ಯರು ಆನಂದರೆಡ್ಡಿ ಅವರಿಗೆ ಮತಹಾಕಿದ್ದಾರೆ. ಮೂವರು ಗೈರಾಗಿದ್ದು. ಉಳಿದ 9 ಮತಗಳು ಅಂಬಿಕಾ ಅವರಿಗೆ ಲಭಿಸಿದೆ. ಬಿಜೆಪಿ, ಜೆಡಿಎಸ್‌, ನಾಲ್ವರು ಪಕ್ಷೇತರರು ಹಾಗೂ ಸಂಸದ, ಶಾಸಕರಿಬ್ಬರೂ ಸೇರಿದಂತೆ ಕಾಂಗ್ರೆಸ್‌ನ ನಾಲ್ವರು ಸದಸ್ಯರ ಮತಗಳಿಂದ ಆನಂದರೆಡ್ಡಿ ಒಟ್ಟು 22 ಮತಗಳನ್ನು ಪಡೆದರು.

ಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿತ್ತು. ಈ ಸಂದರ್ಭದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಕ್ಷೇತರ ಸದಸ್ಯ ಆನಂದರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಬಿಜೆಪಿಯಿಂದ ಬೆಂಬಲ ಕೊಡಿಸುವ ಕಾರ್ಯತಂತ್ರವನ್ನು ಹೆಣೆದರು. ಇದರ ಪರಿಣಾಮ, ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಬಿಜೆಪಿ ಮೇಲುಗೈ ಸಾಧಿಸಿದೆ.

ಹೊಸ ಇತಿಹಾಸ: ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ‘ಇತಿಹಾಸದಲ್ಲಿ ಮೊದಲ ಬಾರಿ ಬಿಜೆಪಿ ನಗರಸಭೆಯ ಚುಕ್ಕಾಣಿ ಹಿಡಿದಿದೆ. ಸಂಸದರಾದ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಗರಸಭೆಯ ಸದಸ್ಯರು ಬೇಷರತ್ ಬೆಂಬಲ ನೀಡಿರುವುದರಿಂದ ಆಯ್ಕೆ ಸಾಧ್ಯವಾಗಿದೆ. ನನಗೆ ಅಭಿವೃದ್ಧಿ ಮಾತ್ರ ಮುಖ್ಯ. ಈ ಚುನಾವಣೆ ಕೂಡ ಅಭಿವೃದ್ಧಿಗಾಗಿ ಮಾತ್ರ ಆಗಿದೆ’ ಎಂದು ತಿಳಿಸಿದರು.

'ಚಿಕ್ಕಬಳ್ಳಾಪುರವನ್ನು ಸುಂದರ, ಸುರಕ್ಷಿತ ನಗರವಾಗಿ ರೂಪುಗೊಳಿಸುವುದೇ ನಮ್ಮ ಉದ್ದೇಶ. ಅಧ್ಯಕ್ಷರಾಗಿ ಆಯ್ಕೆಯಾದ ಆನಂದರೆಡ್ಡಿ ಬಹಳ ಅನುಭವಿಗಳಾಗಿದ್ದಾರೆ. ಅವರಿಗೆ ಬದ್ಧತೆ, ದಕ್ಷತೆ ಇದೆ. ಹೊಸ ತಂಡ ಹುರುಪಿನಿಂದ, ಜನಪರವಾಗಿ ಕೆಲಸ ಮಾಡಲಿದೆ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ಯಾವುದೇ ದ್ವೇಷ ಇಲ್ಲ: ‘ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 22 ಮಂದಿ ಬೆಂಬಲ ನೀಡಿದ್ದಾರೆ. ಆದರೂ ನಗರಸಭೆಯ ಎಲ್ಲ 31 ಸದಸ್ಯರು ನನ್ನವರೇ ಎಂದು ನಾನು ಕೆಲಸ ಮಾಡುತ್ತೇನೆ. ಯಾವುದೇ ಪಕ್ಷವಾದರೂ ನಾನು ದ್ವೇಷ ಇಟ್ಟುಕೊಳ್ಳದೆ ನಗರಸಭೆ ಮಾದರಿಯಾಗಲು ಕೆಲಸ ಮಾಡುತ್ತೇನೆ’ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು