ಚಿಕ್ಕಬಳ್ಳಾಪುರ: ‘ಎಚ್.ಡಿ. ದೇವೇಗೌಡ ಜೀವಂತ ಇರುವವರೆಗೂ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದುಕೊಂಡಿದ್ದೆ. ಜಾತ್ಯತೀತ ತತ್ವದ ಜೆಡಿಎಸ್, ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸಿರುವುದು ನಿಜಕ್ಕೂ ಅಚ್ಚರಿ ತರಿಸಿದೆ’ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ ಎನ್ನುವುದು ಇಲ್ಲಿಯವರೆಗೆ ಗೋಪ್ಯವಾಗಿತ್ತು. ಆದರೆ ಈಗ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಖಂಡಿತಾ ಒಳ್ಳೆಯದಾಗುವುದಿಲ್ಲ. ಪಕ್ಷದ ಶಕ್ತಿ ಕ್ಷೀಣಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಮತ್ತು ಮತೀಯವಾದಿ ಪಕ್ಷ ಎಂದು ತಮ್ಮ ಪಕ್ಷದ ವಿರುದ್ಧವೇ ಬಹಿರಂಗವಾಗಿ ವಾಗ್ದಾಳಿ ನಡೆಸಿದರು.
‘ಜೆಡಿಎಸ್ ಜತೆ ಕೈಜೋಡಿಸುವ ಉದ್ದೇಶದಿಂದಲೇ ಬಿಜೆಪಿ ಹೈಕಮಾಂಡ್ ವಿಧಾನಸಭೆ ಪ್ರತಿಪಕ್ಷದ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗಳಿಗೆ ನೇಮಕ ತಡ ಮಾಡಿದೆ. ಮೈತ್ರಿ ತೀರ್ಮಾನದ ನಂತರ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ನನಗೆ ಅನ್ನಿಸುತ್ತಿದೆ’ ಎಂದರು.
‘ಬಿಜೆಪಿಯವರು ಮಾಡುವುದೆಲ್ಲ ಸರಿ ಎಂದು ಹೇಳಲು ಆಗುವುದಿಲ್ಲ. ನಾನೂ ಪಕ್ಷದಲ್ಲಿ ಹಿರಿಯನಿದ್ದೇನೆ. ಸುಮ್ಮನೆ ಇರಬೇಕಾಗುತ್ತದೆ. ಹಾಗಾಗಿ ಸುಮ್ಮನೆ ಇದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.