ಶನಿವಾರ, ಜನವರಿ 18, 2020
19 °C
ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಎಂ.ಜಿ.ರಸ್ತೆಯ ಜೈಭೀಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿ ಬಳಿ ಶಾಂತಿಯುತ ಸತ್ಯಾಗ್ರಹ

ಸಿಎಎ, ಎನ್‌ಆರ್‌ಸಿ ಕೈಬಿಡುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಶನಿವಾರ ನಗರದ ಎಂ.ಜಿ.ರಸ್ತೆಯ ಜೈಭೀಮ್ ವಿದ್ಯಾರ್ಥಿ ನಿಲಯದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿ ಬಳಿ ಮುಸ್ಲಿಂ ಫೋರಂ ಜಿಲ್ಲಾ ಘಟಕ, ದಲಿತ ಸಂಘರ್ಷ ಸಮಿತಿ, ಕಾಂಗ್ರೆಸ್, ಜೆಡಿಎಸ್‌, ಸಿಪಿಎಂ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ‘ಶಾಂತಿಯುತ ಸತ್ಯಾಗ್ರಹ’ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಯಲುವಹಳ್ಳಿ ರಮೇಶ್‌, ‘ಸಿಎಎ ಹಾಗೂ ಎನ್‌ಆರ್‌ಸಿ ಧರ್ಮಾಧಾರಿತವಾಗಿ ದೇಶವನ್ನು ಒಡೆಯುವ ಕಾನೂನುಗಳು. ಇವುಗಳಿಂದ ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳಿಗೂ ತೊಂದರೆ ಆಗಲಿದೆ. ಕೇಂದ್ರ ಸರ್ಕಾರ ವಿಭಜಕ ನೀತಿಯನ್ನೇ ಅನುಸರಿಸಿಕೊಂಡು ಬರುತ್ತಿದೆ. ಅದು ಈಗ ಅಂತಿಮ ಘಟ್ಟಕ್ಕೆ ತಲುಪುತ್ತಿದೆ’ ಎಂದು ಹೇಳಿದರು.

‘ಭಾರತ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ. ಇಲ್ಲಿ ಸಂವಿಧಾನದ ಆಶಯದಂತೆ ಬದುಕುವ ವಾತಾವರಣ ತರಬೇಕಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಸಂವಿಧಾನ ಮತ್ತು ಅದರ ಆಶಯಗಳನ್ನು ಉಳಿಸಲು ಎಲ್ಲರೂ ಒಗ್ಗೂಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ಇವತ್ತು ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶ ಕಟ್ಟುವ ಬದಲು ಒಡೆಯುವ ಕೆಲಸ ಮಾಡುತ್ತಿದೆ. ಇವತ್ತು ಪ್ರಜಾಪ್ರಜಾಪ್ರಭುತ್ವ ಮೌಲ್ಯಗಳಿಗೆ ಗಂಡಾಂತರ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಂವಿಧಾನ ಉಳಿಸಲು ಮುಂದಾಗಬೇಕು. ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿರಿಸಿಕೊಂಡು ಜಾರಿಗೆ ತರಲು ಹೊರಟಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಕೇಂದ್ರ ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಎ.ಟಿ.ಕೃಷ್ಣನ್ ಮಾತನಾಡಿ, ‘ದೇಶದ ಜಾತ್ಯತೀತ ಮೌಲ್ಯಗಳನ್ನು ಬುಡಮೇಲು ಮಾಡುವ ಕುತಂತ್ರದಿಂದ ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‌ಸಿಆರ್ ಜಾರಿಗೆ ತಂದಿರುವುದು ಸ್ಪಷ್ಟ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಜಾತಿ, ವರ್ಗದ ಜನ ಪ್ರಾಣ ಕೊಟ್ಟಿದ್ದಾರೆ. ಪೌರತ್ವ ನೋಂದಣಿಯ ನೆಪದಲ್ಲಿ ಸಮಾಜವನ್ನು ಒಡೆಯುವುದು ಬೇಡ. ಜಾತಿಗಳ ನಡುವೆ ಬೆಂಕಿ ಹಚ್ಚಿ, ದೇಶ ಹಾಳು ಮಾಡುವ ಈ ಕೆಲಸವನ್ನು ಕೇಂದ್ರ ನಿಲ್ಲಿಸಬೇಕು. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು’ ಎಂದು ಹೇಳಿದರು.

ವಕ್ಫ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ರಫಿವುಲ್ಲಾ ಮಾತನಾಡಿ, ‘ಭಾರತದಲ್ಲಿ ಪ್ರತಿಯೊಂದು ಧರ್ಮವೂ ತನ್ನದೇ ಆದ ಧರ್ಮಗ್ರಂಥ ಹೊಂದಿದರೂ ಇಡೀ ದೇಶಕ್ಕೆ ಒಂದೇ ಧರ್ಮ ಗ್ರಂಥದಂತಿರುವ ಸಂವಿಧಾನ ಪ್ರತಿಯೊಬ್ಬರೂ ಸಮಾನತೆಯಿಂದ ಜೀವನ ನಡೆಸಬೇಕು ಎಂಬ ಉದಾತ್ತ ಆಶಯ ಹೊಂದಿದೆ. ಆದರೆ ಇವತ್ತು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರು ದೇಶದಲ್ಲಿ ಹಿಟ್ಲರ್‌ ಆಡಳಿತ ನಡೆಸಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಮುಖಂಡರಾದ ಮಟಮಪ್ಪ, ಕಣಿತಹಳ್ಳಿ ವೆಂಕಟೇಶ್‌, ಮಂಚನಬಲೆ ಇಸ್ಮಾಯಿಲ್, ಮಿಲ್ಟನ್ ವೆಂಕಟೇಶ್‌, ಜಾವೇದ್ ಪಾಷಾ, ಸಾದಿಕ್ ಪಾಷಾ, ಸೈಯ್ಯದ್ ಇಸ್ಮಾಯಿಲ್, ಸಮ್ಮಿವುಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು