ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್ ವಿಭಜನೆ: ಸಚಿವ ಸುಧಾಕರ್ ಮೇಲುಗೈ

ಚಿಕ್ಕಬಳ್ಳಾಪುರ ಪ‍್ರತ್ಯೇಕ ಹಾಲು ಒಕ್ಕೂಟಕ್ಕೆ ಸಚಿವ ಸಂಪುಟ ಹಸಿರು ನಿಶಾನೆ
Last Updated 9 ನವೆಂಬರ್ 2021, 4:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಒಕ್ಕೂಟ ವಿಭಜಿಸಿಯೇ ಸಿದ್ಧ ಎಂದು ಘೋಷಿಸಿದ್ದ ಅವರು ತಮ್ಮ ಹಠ ಸಾಧಿಸಿದ್ದಾರೆ. ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೋಚಿಮುಲ್ ವಿಭಜನೆಗೆ ಒಪ್ಪಿಗೆಯ ತಾತ್ವಿಕ ಮುದ್ರೆ ಬಿದ್ದಿದೆ. ಇದು ಜಿಲ್ಲೆಯ ಬಿಜೆಪಿಯಲ್ಲಿ, ಸುಧಾಕರ್ ಬೆಂಬಲಿಗರಲ್ಲಿ ಸರ್ಕಾರದ ಈ ನಿರ್ಧಾರ ಹರ್ಷಕ್ಕೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷಗಳಾದರೂ ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿರಲಿಲ್ಲ. ಈ ಹಿಂದಿನಿಂದಲೂ ಈ ವಿಚಾರ ಜಿಲ್ಲೆಯ ಸಹಕಾರ ವಲಯದಲ್ಲಿ ಪ್ರಬಲವಾಗಿ ಪ್ರಸ್ತಾಪವಾಗುತ್ತಿತ್ತು.

ಬಿಜೆಪಿ, ಕಾಂಗ್ರೆಸ್‌ ಜಿದ್ದಾಜಿದ್ದಿ

ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿ ರಾಜಕಾರಣಕ್ಕೆ ತಿರುಗಿದ್ದ ಕೋಚಿಮುಲ್‌ ವಿಭಜನೆಯ ವಿಚಾರ ರಾಜಕೀಯ ಪ್ರತಿಷ್ಠೆಗೂ ಕಾರಣವಾಗಿತ್ತು.ಸಚಿವ ಡಾ.ಕೆ.ಸುಧಾಕರ್ ಮತ್ತು ಅವರ ಬೆಂಬಲಿಗರು, ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಆ ಪಕ್ಷದ ಬೆಂಬಲಿತ ನಿರ್ದೇಶಕರು ನಡುವೆ ರಾಜಕೀಯ ಜಟಾಪಟಿ ನಡೆಸಿದ್ದರು. ಪರಸ್ಪರ ಎರಡೂ ಬಣಗಳು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಂದ ಸಹಿ ಸಂಗ್ರಹಿಸಿದ್ದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮೊದಲ ಬಾರಿಗೆ ಸಚಿವ ಡಾ.ಕೆ.ಸುಧಾಕರ್ ನೇತೃತ್ವದ ನಿಯೋಗ ವಿಭಜನೆಯ ವಿಚಾರವಾಗಿ ಭೇಟಿ ಮಾಡಿತ್ತು.ಶಾಸಕ ಕೆ.ಆರ್.ರಮೇಶ್ ಕುಮಾರ್, ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ಕೆ.ವೈ.ನಂಜೇಗೌಡ ನೇತೃತ್ವದ ನಿಯೋಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿತ್ತು. ‘ತಕ್ಷಣವೇ ವಿಭಜನೆ ಬೇಡ. ಸಾಧಕ ಬಾಧಕಗಳ ಕುರಿತು ಚರ್ಚೆಯಾಗಲಿ’ ಎಂದು ಒತ್ತಡ ತಂದಿತ್ತು. ರಾಜ್ಯ ಮಟ್ಟದಲ್ಲಿ ನಡೆದ ಈ ಬೆಳವಣಿಗೆಗಳು ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಕಾವು ಮೂಡಿಸಿತ್ತು.ಹೀಗೆ ಜಿಲ್ಲೆಯ ಅಂಗಳದಲ್ಲಿದ್ದ ವಿಚಾರ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕರವರೆಗೂ
ಮುಟ್ಟಿತ್ತು.

ಕೋಚಿಮುಲ್ ವಿಭಜನೆಯನ್ನುಸಚಿವ ಸುಧಾಕರ್ ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ತಮ್ಮ ರಾಜಕೀಯ ವಿರೋಧಿಗಳ ಎದುರು ತಮ್ಮ ಪ್ರಾಬಲ್ಯ ಪ್ರದರ್ಶನಕ್ಕೂ ಅವರಿಗೆ ವಿಭಜನೆಯ ವಿಚಾರ ಒದಗಿ ಬಂದಿತ್ತು. ಈಗ ಸಚಿವ ಸಂಪುಟದಲ್ಲಿ ವಿಭಜನೆಗೆ ತಾತ್ವಿಕ ಒಪ್ಪಿಗೆ ದೊರೆತಿದೆ. ಈ ಮೂಲಕ ಜಿಲ್ಲೆಯಲ್ಲಿ ಸುಧಾಕರ್ ಪ್ರಾಬಲ್ಯ ಮುಂದುವರಿದಿದೆ. ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟದ ರಚನೆಯ ಪೂರ್ಣ ಶ್ರೇಯ ಡಾ.ಕೆ.ಸುಧಾಕರ್ ಅವರಿಗೆ ಸಂದಿದೆ.

ಬಿಜೆಪಿ ಪ‍್ರಾಬಲ್ಯ ವಿಸ್ತರಣೆಗೆ ಅವಕಾಶ?: ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ತಮ್ಮದೇ ಆದ ರಾಜಕಾರಣ ನಡೆಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯವೇ ಇಲ್ಲಿಯವರೆಗೂ ಹೆಚ್ಚಿತ್ತು. ಈಗ ಕೋಚಿಮುಲ್ ವಿಭಜನೆಯು ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ವಿಸ್ತರಣೆಗೆ ಮತ್ತು ಸಚಿವ ಡಾ.ಕೆ.ಸುಧಾಕರ್ ಹಿಡಿತವನ್ನು ಹೊಂದಲು ಉತ್ತಮ ಅವಕಾಶವಾಗಿ ಒದಗಿಸಿದೆ.ಜಿಲ್ಲೆಯ ಸಹಕಾರಿ ವಲಯದಲ್ಲಿ ಬಿಜೆಪಿ ಬೆಂಬಲಿತರು ಪ್ರತಿಷ್ಠಾಪನೆಯಾಗುವ ಕಾಲ ಕೂಡಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT