ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಜ್ಞ ಜಯಂತಿ ಆಚರಣೆ

Last Updated 22 ಫೆಬ್ರುವರಿ 2021, 4:13 IST
ಅಕ್ಷರ ಗಾತ್ರ

ಚಿಂತಾಮಣಿ: ‘ರಾಜ್ಯದಲ್ಲಿ ಕುಂಬಾರ ಸಮುದಾಯವು ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ’ ಎಂದು ತಾಲ್ಲೂಕು ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕವು ಶನಿವಾರ ಹಮ್ಮಿಕೊಂಡಿದ್ದ 501ನೇ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕುಂಬಾರ ಸಮುದಾಯದಿಂದ ಶಾಸಕರು, ಸಂಸದರು, ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರು ಇಲ್ಲ. ಹೀಗೆ ಅತ್ಯಂತ ಹಿಂದುಳಿದ ಸಮುದಾಯವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಯಾವುದೇ ಪಕ್ಷವು ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿಲ್ಲ. ರಾಜಕೀಯ ಅಧಿಕಾರ ದೊರೆತರೆ ಮಾತ್ರ ಸಣ್ಣ ಪುಟ್ಟ ಸಮುದಾಯಗಳು ಬೆಳವಣಿಗೆಯಾಗಲು ಸಾಧ್ಯ’ ಎಂದರು.

‘ಬಲಾಢ್ಯ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆದಿರುವ ಹಾಗೂ ಅಧಿಕ ಜನಸಂಖ್ಯೆಯುಳ್ಳ ಸಮುದಾಯಗಳು ಇನ್ನೂ ಹೆಚ್ಚಿನ ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಕುಂಬಾರರು ಸೇರಿದಂತೆ ಹಲವಾರು ಸಣ್ಣ ಪುಟ್ಟ ಸಮುದಾಯದವರಿಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಸೌಲಭ್ಯ ವಂಚಿತರನ್ನು ಗುರುತಿಸದೆ ಸೌಲಭ್ಯಗಳನ್ನು ಪಡೆದಿರುವವರು ಇನ್ನೂ ಹೆಚ್ಚಿನ ಸೌಲಭ್ಯಗಳಿಗಾಗಿ ಒತ್ತಾಯಿಸುತ್ತಿರುವುದು ವಿಪರ್ಯಾಸವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರದಿಂದ ಸರ್ವಜ್ಞ ದಿನಾಚರಣೆಯ ಆಚರಣೆ, ಸರ್ವಜ್ಞ ಪ್ರಾಧಿಕಾರ ರಚನೆ ಸೇರಿದಂತೆ ಕುಂಬಾರ ಸಂಘವು ಹಲವಾರು ಬೇಡಿಕೆಗಳನ್ನು ಈಡೇರಿಸುವತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ. ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕುಂಬಾರರು ಸೇರಿದಂತೆ ಇತರೆ ಹಲವಾರು ಸೌಲಭ್ಯ ವಂಚಿತ, ನಿರ್ಲಕ್ಷಿತ ಸಮುದಾಯಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡರಾದ ನೆರನಕಲ್ಲು ಮಂಜು, ಶಂಕರಪ್ಪ, ಶ್ರೀರಾಮನಗರ ಶಂಕರ್, ಅಶ್ವತ್ಥಪ್ಪ, ಸೀನಪ್ಪ, ನಾರಾಯಣಸ್ವಾಮಿಚಿನ್ನಪ್ಪ, ಶ್ರೀನಿವಾಸ್, ರಾಮಚಂದ್ರ, ರಾಜು, ರವಿ, ಮಂಜುನಾಥ್, ಬಾಬು, ವೀರಭದ್ರಪ್ಪ, ಬಾಲಕೃಷ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT