ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಯೋಜನೆ; ಸಂಕಲ್ಪ ಯಾತ್ರೆಯ ಗುರಿ: ರಾಜೀವ್ ಚಂದ್ರಶೇಖರ್

ದೊಡ್ಡಮರಳಿಯಲ್ಲಿ ಭಾರತ ಸಂಕಲ್ಪ ಯಾತ್ರೆ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಿಮತ
Published 30 ನವೆಂಬರ್ 2023, 13:24 IST
Last Updated 30 ನವೆಂಬರ್ 2023, 13:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದೇಶದ ಎಲ್ಲ ಬಡವರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ಯುವ ಸಮುದಾಯಕ್ಕೆ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಅನುಕೂಲಗಳನ್ನು, ಅವಕಾಶಗಳನ್ನು ತಲುಪಿಸುವುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಗುರಿ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕಿನ ದೊಡ್ಡಮರಳಿ ಗ್ರಾಮದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’  ದೃಢ ಸಂಕಲ್ಪದೊಂದಿಗೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸಿದೆ ಎಂದರು.

ಇಲ್ಲಿಯವರೆಗೆ ಈ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬಂದಿರುವವರ ಬಗ್ಗೆ ತಿಳಿಸಿಕೊಟ್ಟು ಇನ್ನು ಹೆಚ್ಚಿನ ಜನರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸಲು ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಅನುಕೂಲವಾಗುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ಯೋಜನೆ, ಕೋವಿಡ್ ಲಸಿಕೆ ಉಚಿತ ವಿತರಣೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಪ್ರಧಾನಿ ಜಾರಿಗೊಳಿಸಿದ್ದಾರೆ ಎಂದರು. 

ಮೋದಿ ಗ್ಯಾರಂಟಿ ಹೆಸರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಆರಂಭವಾಗಿದೆ. ಕೇಂದ್ರದ ಯೋಜನೆಗಳ ಕುರಿತು ಈ ಯಾತ್ರೆ ಅರಿವು ಮೂಡಿಸಲಿದೆ. ಈ ಯಾತ್ರೆಯ ಮುಖ್ಯ ಉದ್ಧೇಶ ಕೇಂದ್ರದ ಯೋಜನೆಗಳು ಎಲ್ಲರಿಗೂ ತಲುಪುವುದು ಮತ್ತು ಈವರೆಗೆ ತಲುಪದೇ ಇರುವವರಿಗೆ ತಲುಪಿಸುವುದೇ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯವನ್ನು ವಿತರಿಸಲಾಯಿತು.

ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಅನುಭವ ಹಂಚಿಕೊಂಡ ದೊಡ್ಡಮರಳಿ ಗ್ರಾಮದ ಪವಿತ್ರಾ ಮಾತನಾಡಿ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರ ಭವಿಷ್ಯಕ್ಕೆ ಒಂದೇ ಬಾರಿ ಹಣ ಹೂಡಿಕೆ ಮಾಡಲು ಸಾಧ್ಯವಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಕಂತುಗಳ ಪ್ರಕಾರ ಪಾವತಿ ಮಾಡಲು ಅವಕಾಶವಿರುವ ಕಾರಣ ಅನುಕೂಲವಾಗಿದೆ.  ಅಟಲ್ ಪಿಂಚಣಿ ಯೋಜನೆಯ ಪ್ರಯೋಜನವನ್ನೂ ಪಡೆಯಲಾಗಿದೆ ಎಂದರು.

ಫಲಾನುಭವಿ ಮಂಜುಳಾ, ಪ್ರಧಾನಿ ಅವರು ಒಳ್ಳೆಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಪಿಎಂ ಕಿಸಾನ್ ನಡಿ ಬಂದ ಹಣವನ್ನು ಬೆಳೆಗಳನ್ನು ಬೆಳೆಯಲು ಪೂರಕವಾಗಿ ಉಪಯೋಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗವಿಗಾನಹಳ್ಳಿ ಗ್ರಾಮದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಫಲಾನುಭವಿ ಜಯಲಕ್ಷ್ಮಿ, ಅನ್ನ ಯೋಜನೆಯಿಂದ ಬಡವರು, ನಿರ್ಗತಿಕರು, ವೃದ್ಧರು, ಅಂಗವಿಕಲರಿಗೆ ಸಹಕಾರಿಯಾಗಿದೆ. ಪ್ರಧಾನಿಯವರು ಈ ಯೋಜನೆಯನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಅನ್ಷುಲ್ ಗುಪ್ತಾ, ಕರ್ನಾಟಕ ಬ್ಯಾಂಕರುಗಳ ಸಮಿತಿ ಸಂಚಾಲಕ ಭಾಸ್ಕರ್ ಚಕ್ರವರ್ತಿ, ಕೆನರಾ ಬ್ಯಾಂಕ್ ಕರ್ನಾಟಕ ವೃತ್ತದ ಮಹಾಪ್ರಬಂಧಕ ಗೋಪಿಕೃಷ್ಣ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ ವ್ಯವಸ್ಥಾಪಕ ಸದಾನಂದ ಕಾಳಗಿ ಮತ್ತಿತರರು ಹಾಜರಿದ್ದರು.

ಪ್ರಧಾನಿ ಸಂವಾದ; ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದನ್ನು ದೊಡ್ಡಮರಳಿ ಗ್ರಾಮದಲ್ಲಿ ನೇರಪ್ರಸಾರ ಮಾಡಲಾಯಿತು. ಕೇಂದ್ರ ಸಚಿವರು ಅಧಿಕಾರಿಗಳು ಮತ್ತು ಗ್ರಾಮಸ್ಥರು ಈ ನೇರ ಪ್ರಸಾರ ವೀಕ್ಷಿಸಿದರು. ಸಚಿವ ರಾಜೀವ್ ಚಂದ್ರಶೇಖರ್ ಜನರ ನಡುವೆ ಕುಳಿತು ಮೋದಿ ಅವರ ಸಂವಾದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT