ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಯೋಜನೆ: ಉದ್ಯೋಗ ಚೀಟಿ ನೀಡಲು ಅಭಿಯಾನ

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ
Last Updated 17 ಸೆಪ್ಟೆಂಬರ್ 2020, 11:52 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರಿಗೆ ಜಾಬ್‍ಕಾರ್ಡ್ (ಉದ್ಯೋಗ ಚೀಟಿ) ನೀಡಲು ಅಭಿಯಾನ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರುನ್ನುಮ್ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಪಡಿತರ ಚೀಟಿ ಹೊಂದಿರುವ ಕುಟುಂಬ ಸದಸ್ಯರನ್ನು ಗುರುತಿಸಿ ಮನೆಮನೆಗೂ ತೆರಳಿ ಜಾಬ್‍ಕಾರ್ಡ್ ನೀಡಲು ವಿಶೇಷ ಅಭಿಯಾನ ನಡೆಸಬೇಕು ಎಂದರು.

ನರೇಗಾ ಯೋಜನೆಯಡಿ ಬಚ್ಚಲು ಗುಂಡಿ, ಅಣಬೆ ಬೇಸಾಯ, ದನಕರುಗಳ ಶೆಡ್, ಪೌಷ್ಟಿಕ ತೋಟ ಒಳಗೊಂಡಂತೆ ಒಂದು ಪ್ಯಾಕೇಜ್ ಯೋಜನೆ ಜಾರಿಗೊಳಿಸಿದ್ದು ರೈತರು ಮತ್ತು ಜನಸಾಮಾನ್ಯರು ಯೋಜನೆ ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಕೋವಿಡ್ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಉದ್ಯೋಗವನ್ನು ಕಲ್ಪಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 26 ಸಾವಿರ ಜಾಬ್‍ಕಾರ್ಡ್‍ಗಳನ್ನು ನೀಡಲಾಗಿದೆ. ಮುಂದಿನ ತಿಂಗಳ ಅಂತ್ಯದೊಳಗೆ 40 ಸಾವಿರ ಜಾಬ್‍ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕೆಂದು ಪಿಡಿಒಗಳಿಗೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ತಕ್ಷಣ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ವರದಿ ಸಲ್ಲಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಗಳು ವಿದ್ಯುತ್ ಕಣ್ಣು ಮುಚ್ಚಾಲೆಯ ಸಮಸ್ಯೆಯನ್ನು ನೀಗಿಸಲು ಗಮನಹರಿಸಬೇಕು. ಸರ್ಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಆದೇಶಿಸಿದರು.

ವಸತಿ-ಕುಡಿಯುವ ನೀರು ಪೂರೈಕೆ,ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಪರಿಷ್ಕರಣೆ ಮತ್ತು ವಸೂಲಾತಿ, ಕೊರೊನಾ ಸೋಂಕು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು, ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಎನ್.ಆರ್.ಎಲ್.ಎಂ ಯೋಜನೆ ಮತ್ತು ಅಡ್‍ಹಾಕ್ ಸಮಿತಿ ಪ್ರಗತಿ ವರದಿಗಳನ್ನು ಪರಿಶೀಲಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಇಒ ಶಿವಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಲೋಕೋಪಯೋಗಿ ಇಲಾಖೆಯ ಎಇಇ ವಿನಯ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ.ಮಂಜುನಾಥ, ಸಿಡಿಪಿಒ ನಾಗವೇಣಿ, ಕುಡಿಯುವ ನೀರು, ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ಲೋಕೇಶ್, ಬಿಸಿಎಂ ಅಧಿಕಾರಿ ಸಕ್ಪಾಲ್, ಪಂಚಾಯತ್ ರಾಜ್ ಇಲಾಖೆಯ ಎಇಇ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT