ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರಿಗೆ ತಾಲ್ಲೂಕಿನ ಪಟ್ಟವಷ್ಟೇ: ಅಭಿವೃದ್ಧಿ ಶೂನ್ಯ!

ತಾಲ್ಲೂಕು ಘೋಷಣೆಯಾಗಿ ಮೂರೂವರೆ ವರ್ಷ; ಬದಲಾಗಿಲ್ಲ ಚಹರೆ
Last Updated 22 ಆಗಸ್ಟ್ 2022, 3:03 IST
ಅಕ್ಷರ ಗಾತ್ರ

ಚೇಳೂರು: ರಾಜ್ಯದ ಗಡಿಭಾಗದಲ್ಲಿರುವ ಚೇಳೂರು, ತಾಲ್ಲೂಕು ಕೇಂದ್ರ ಎಂದು ಘೋಷಣೆಯಾಗಿ ಮೂರೂವರೆ ವರ್ಷ ಕಳೆದಿದೆ. ಕೆಲವು ತಿಂಗಳ ಹಿಂದೆ ಗಡಿ ಗುರುತು ಸಹ ನಡೆದಿದೆ. ಇಷ್ಟೆಲ್ಲವಾಗಿದ್ದರೂ ಚೇಳೂರಿನ ಚಹರೆ ಬದಲಾವಣೆಯೇ ಆಗಿಲ್ಲ. ಚೇಳೂರು ತಾಲ್ಲೂಕು ಕೇಂದ್ರ ಎನಿಸಿದೆಯಷ್ಟೇ ಅಭಿವೃದ್ಧಿ ಮಾತ್ರ ಶೂನ್ಯ!

ತಾಲ್ಲೂಕು ಕೇಂದ್ರ ಬಾಗೇಪಲ್ಲಿಗೂ ಇಲ್ಲಿಗೂ 40 ಕಿ.ಮೀ ದೂರವಿತ್ತು. ರಾಜ್ಯದ ಗಡಿಭಾಗದಲ್ಲಿರುವ ಚೇಳೂರು ಅಭಿವೃದ್ಧಿಯ ವಿಚಾರದಲ್ಲಿ ತೀರಾ ಹಿಂದುಳಿದಿತ್ತು. ಅಭಿವೃದ್ಧಿಯ ಕಾರಣದಿಂದ ನಮಗೆ ಪ್ರತ್ಯೇಕ ತಾಲ್ಲೂಕು ಕೇಂದ್ರದ ಸ್ಥಾನ ನೀಡಿ ಎಂದು ಇಲ್ಲಿನ ಜನರು ಹೋರಾಟಗಳನ್ನು ನಡೆಸಿದ್ದರು.

22 ವರ್ಷಗಳ ನಿರಂತರ ಹೋರಾಟದ ಫಲವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (‌2019ರ ಫೆ.8) ತಾಲ್ಲೂಕು ಕೇಂದ್ರವಾಗಿಚೇಳೂರು ಘೋಷಣೆ ಆಯಿತು. ತಾಲ್ಲೂಕು ಕೇಂದ್ರ ಎನ್ನುವ ಹಣೆಪಟ್ಟಿ ಹೊತ್ತು ಮೂರೂವರೆ ವರ್ಷಗಳು ಕಳೆಯುತ್ತಿದ್ದರೂ ಸರ್ಕಾರಿ ಕಚೇರಿಗಳು ಪ್ರಾರಂಭವಾಗಿಲ್ಲ. ತಾಲ್ಲೂಕು ಕಚೇರಿ ಸೇರಿದಂತೆ ‌ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಾಗ ಗುರುತಿಸಿಲ್ಲ.

ಚೇಳೂರಿನ ಸರ್ಕಾರಿ ಹಳೇ ಪ್ರಾಥಮಿಕ ಶಾಲೆ 1 ಎಕರೆಯಲ್ಲಿದೆ. ಇಲ್ಲಿ ಕಟ್ಟಡಗಳಿದ್ದು ಸದ್ಯಕ್ಕೆ ಆ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ರಿಪೇರಿ ಮಾಡಿಸಲಾಗಿದೆ. ಇಲ್ಲಿ ರೈತರು, ಸಾರ್ವಜನಿಕರು ಜಾತಿ ಪ್ರಮಾಣ ಪತ್ರ, ಪಹಣಿ, ಮ್ಯುಟೇಷನ್ ಮತ್ತಿತರೆ ದಾಖಲೆಗಳನ್ನು ಪಡೆಯಲು ಮತ್ತು ಕೆಲಸಗಳಿಗೆ
ಬರುತ್ತಾರೆ.‌ ಈ ಹಿಂದಿನ ಬಜೆಟ್‌ನಲ್ಲಿ ಹೊಸದಾಗಿ ರಚನೆಯಾಗಿರುವ ಚೇಳೂರು ತಾಲ್ಲೂಕಿನ ಅಭಿವೃದ್ಧಿಗೆ ಹಣ ನೀಡಲಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಇತ್ತು. ಆ ನಿರೀಕ್ಷೆ ಈಡೇರಲೇ ಇಲ್ಲ.
ತಾಲ್ಲೂಕು ಕೇಂದ್ರ ಎನಿಸಿರುವ ಚೇಳೂರಿನಲ್ಲಿ ₹ 5 ಕೋಟಿ ವೆಚ್ಚದಲ್ಲಿದ್ವಿಪಥ ರಸ್ತೆ ನಿರ್ಮಿಸಲಾಗಿದೆ. ಅದು ಬಿಟ್ಟರೆ ಏನು ಅಭಿವೃದ್ಧಿ ಆಗಿಲ್ಲ.

ಚೇಳೂರಿನಲ್ಲಿ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರ (ಸರ್ಕಲ್ ಇನ್‌ಸ್ಪೆಕ್ಟರ್) ಕಚೇರಿ ಆರಂಭವಾಗಿದೆ. ಇದರ ಹೊರತು ಯಾವುದೇ ಕಚೇರಿಯೂ ಆರಂಭವಾಗಿಲ್ಲ. ತಾಲ್ಲೂಕು ಕ್ರೀಡಾಂಗಣಕ್ಕೆ ಸ್ಥಳ ಗುರುತಿಸುವ ಬಗ್ಗೆಯೂ ಕಂದಾಯ ಇಲಾಖೆಗೆ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಪತ್ರ ಬರೆದಿದೆ.

205 ಗ್ರಾಮಗಳು:2019ರ ಫೆಬ್ರುವರಿ 8ರಂದು ತಾಲ್ಲೂಕು ಎಂದು ಘೋಷಣೆಯಾದ ಚೇಳೂರು, 2022ರ ಮಾ.23ರಂದು ಗೆಜೆಟ್ ಅನುಮೋದನೆ ಪಡೆಯಿತು.ತಾಲ್ಲೂಕಿಗೆ 12 ಗ್ರಾಮ ಪಂಚಾಯಿತಿಗಳು ಸೇರಿವೆ. ಚೇಳೂರು, ಪುಲಗಲ್ಲು, ಚಾಕವೇಲು, ರಾಶ್ಚೇರುವು, ಎಂ.ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ, ಬಾಗೇಪಲ್ಲಿ ತಾಲ್ಲೂಕಿನ ನಾರೇಮದ್ದೆಪಲ್ಲಿ, ಸೋಮನಾಥಪುರ, ಪೋಲನಾಯಕನಹಳ್ಳಿ, ಚಿಂತಾಮಣಿ ತಾಲ್ಲೂಕಿನ ಚಿಲಕಲನೇರ್ಪು, ಏನಿಗದಲೆ, ಬುರುಡಗುಂಟೆ ಗ್ರಾಮ ಪಂಚಾಯಿತಿಗಳು ಸೇರಿವೆ. ‌17 ಕಂದಾಯ ವೃತ್ತಗಳು, 205 ಗ್ರಾಮಗಳು ಒಳಪಟ್ಟಿವೆ. 72,119 ಜನಸಂಖ್ಯೆ ಇದೆ.

ಹೀಗೆ ತಾಲ್ಲೂಕುಗಳಾಗಿ ಘೋಷಣೆಯಾಗಿರುವ ಹೋಬಳಿ ಕೇಂದ್ರಗಳಲ್ಲಿ ತಾಲ್ಲೂಕು ಕೇಂದ್ರದಲ್ಲಿ ಇರಬೇಕಾದ ಸೌಲಭ್ಯಗಳು ದೊರೆಯಬೇಕು ಎನ್ನುವ ಆಗ್ರಹ ಈ ಹೊಸ ತಾಲ್ಲೂಕು ರಚನೆಗೆ ಕಾರಣರಾದ ಹೋರಾಟಗಾರರು ಮತ್ತು ಜನರದ್ದಾಗಿದೆ.

ಚೇಳೂರಿನಲ್ಲಿ ತಾಲ್ಲೂಕು ಕಚೇರಿ ಆರಂಭ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಚೇಳೂರು ತಾಲ್ಲೂಕು ಹೋರಾಟಗಾರರು ಎರಡು ಬಾರಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿದ್ದೆವು. ಮಂಚೇನಹಳ್ಳಿ ಅಭಿವೃದ್ಧಿಗೆ ನೀಡಿದ ಆದ್ಯತೆಯನ್ನೇ ಇಲ್ಲಿಗೂ ನೀಡುತ್ತೇವೆ. ಅಭಿವೃದ್ಧಿ ಕಾರ್ಯಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಕ್ರಮವಹಿಸಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುವರು.

ಚೇಳೂರು ಸುತ್ತಮುತ್ತ ಸರ್ಕಾರಿ ಜಮೀನು ಹೆಚ್ಚಿನದಾಗಿಯೇ ಇದೆ. ಕಚೇರಿ ಆರಂಭ ಸೇರಿದಂತೆ ಯಾವುದೇ ಕೆಲಸಗಳಿಗೂ ಜಮೀನಿನ ಸಮಸ್ಯೆ ಎದುರಾಗುವುದಿಲ್ಲ. ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎನ್ನುತ್ತಾರೆ.

ತಾತ್ಸಾರ ಮನೋಭಾವ: ಚೇಳೂರು ತಾಲ್ಲೂಕು ಕೇಂದ್ರವಾಗಿದ್ದರೂ ತಾಲ್ಲೂಕು ಕಚೇರಿ ಆರಂಭವಾಗಿಲ್ಲ. ಕಚೇರಿಗಳ ಆರಂಭ ಮತ್ತು ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಆಡಳಿತ ಯಾವುದೇ ಕ್ರಮವಹಿಸುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳ ತಾತ್ಸಾರ ಮನೋಭಾವದಿಂದ ಕಚೇರಿಗಳು ಬರುವುದು ವಿಳಂಬವಾಗುತ್ತಿದೆ. ಇದೇ ರೀತಿಯಲ್ಲಿ ನಿಲುವು ಮುಂದುವರಿದರೆ ಅಭಿವೃದ್ಧಿಗೆ ಆಗ್ರಹಿಸಿ ಹೋರಾಟ ನಡೆಸಬೇಕಾಗುತ್ತದೆ.

ಪಿ.ರಾಧಾಕೃಷ್ಣ ಪದ್ಮನಾಭ ರಾವ್, ಚೇಳೂರು ತಾಲ್ಲೂಕು ಹೋರಾಟಗಾರರು

ಪರಿಸ್ಥಿತಿಯಲ್ಲಿ ಬದಲಾವಣೆ ಇಲ್ಲ: ತಾಲ್ಲೂಕು ಘೋಷಣೆಯಾಗಿ ಮೂರೂವರೆ ವರ್ಷ ಕಳೆದರೂ ಸರ್ಕಾರಿ ಕಚೇರಿಗಳು ಆರಂಭವಾಗಿಲ್ಲ. 75 ವರ್ಷ ಗಳಿಂದ 40 ಕಿ.ಮೀ ದೂರದ ಬಾಗೇಪಲ್ಲಿ ತಾಲ್ಲೂಕು ಕಚೇರಿಗಳಿಗೆ ಕೆಲಸಗಳಿಗೆ ಹೋಗಿ ಬರುವ ಪರಿಸ್ಥಿತಿ ತಪ್ಪಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಒಳಗೆ ಸರ್ಕಾರಿ ಕಚೇರಿಗಳನ್ನು ಆರಂಭಿಸಬೇಕು.

ಜೆ.ವಿ.ವಿ.ಚಲಪತಿ, ಕರವೇ ಜಿಲ್ಲಾ ಸಂಚಾಲಕ, ಚೇಳೂರು

ಅಭಿವೃದ್ಧಿ ನಿರ್ಲಕ್ಷ್ಯ: ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಚೇಳೂರು ತಾಲ್ಲೂಕು ರಚನೆ ಆಯಿತು. ಚೇಳೂರು ಅಭಿವೃದ್ಧಿ ವಿಚಾರದಲ್ಲಿಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಪ್ರತಿ ನಿತ್ಯ 40 ಕಿ.ಮೀ ದೂರದ ಬಾಗೇಪಲ್ಲಿ ತಾಲ್ಲೂಕು ಕಚೇರಿಗೆ ರೈತರು ಕೆಲಸಕಾರ್ಯಗಳಲ್ಲಿ ತಿರುಗಾಡುತ್ತಿದ್ದಾರೆ.

ರವಿಕುಮಾರ್, ಚೇಳೂರು

ಬಾರದ ಅಧಿಕಾರಿಗಳು: ಚೇಳೂರು ಹೆಸರಿಗೆ ಮಾತ್ರ ತಾಲ್ಲೂಕಾಗಿದೆ. ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ. ಡಿಸಿ ಮತ್ತು ಎಸಿ ಚೇಳೂರು ತಾಲ್ಲೂಕು ಮುಖ ನೋಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಧೋರಣೆ ಇದೇ ರೀತಿಯಲ್ಲಿ ಮುಂದುವರಿದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ.

ಗುನ್ನಾ ಪಾಪಿರೆಡ್ಡಿ, ರೈತರು, ಬೈರಪ್ಪನಹಳ್ಳಿ, ಚೇಳೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT