ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಶ ಯೋಗ ಕೇಂದ್ರದ ವಾಹನ ನಿಲುಗಡೆ ಸ್ಥಳದಲ್ಲಿ ಚಿಕನ್ ಬಿರಿಯಾನಿ; ದೂರು

Published : 10 ಸೆಪ್ಟೆಂಬರ್ 2024, 13:20 IST
Last Updated : 10 ಸೆಪ್ಟೆಂಬರ್ 2024, 13:20 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಬಳಿ ಈಶ ಯೋಗ ಕೇಂದ್ರಕ್ಕೆ ಸೇರಿದ ವಾಹನ ನಿಲುಗಡೆ ಸ್ಥಳದಲ್ಲಿ ಚಿಕನ್ ಬಿರಿಯಾನಿ ತಯಾರಿಸಿದವರ ವಿರುದ್ಧ ಈಶ ಫೌಂಡೇಶನ್ ಪ್ರತಿನಿಧಿ ಪ್ರಣವ ರಾಜನಾಳ ಎಂಬುವವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ: ಸೆ.8ರ ಬೆಳಿಗ್ಗೆ 11.14ರ ಸಮಯದಲ್ಲಿ ನಮ್ಮ ಭದ್ರತಾ ವ್ಯವಸ್ಥಾಪಕ ಸುರೇಂದ್ರ ನಾಯ್ಡು ನನಗೆ ಕರೆ ಮಾಡಿ, ಐದಾರು ಮಂದಿ ಈಶ ಫೌಂಡೇಶನ್ ವಾಹನ ನಿಲುಗಡೆ ಸ್ಥಳಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು. 

ಹೀಗೆ ಪ್ರವೇಶಿಸಿದವರನ್ನು ಅವರು ವಿಚಾರಿಸಿದ್ದಾರೆ. ‘ನಮ್ಮನ್ನು ಸೂಸೇಪಾಳ್ಯ ಗ್ರಾಮದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಕಳುಹಿಸಿದ್ದಾರೆ’ ಎಂದು ಅತಿಕ್ರಮವಾಗಿ ಪ್ರವೇಶಿಸಿದವರು ತಿಳಿಸಿದ್ದಾರೆ.

ಈ ವಿಚಾರವನ್ನು ತಕ್ಷಣ ‌ಪೊಲೀಸರಿಗೆ ತಿಳಿಸಿದ್ದು  ಅವರು ಸ್ಥಳಕ್ಕೆ ಬಂದರು. ‘ನಾವು ಪಕ್ಕದ ಗ್ರಾಮದವರು. ಸ್ವಲ್ಪ ಸಮಯದ ನಂತರ  ಹೋಗುತ್ತೇವೆ’ ಎಂದು ಆ ಐದಾರು ಮಂದಿ ತಿಳಿಸಿದ್ದಾರೆ. ಆ ನಂತರವೂ ಸ್ಥಳದಿಂದ ಹೋಗದ ಕಾರಣ ನಮ್ಮ ಭದ್ರತಾ ಸಿಬ್ಬಂದಿ ಮೊಬೈಲ್‌ನಲ್ಲಿ ಅವರ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಹೋದಾಗ ಅವಾಚ್ಯವಾಗಿ ಬೈದು, ಬೆದರಿಕೆ ಹಾಕಿದ್ದಾರೆ.

ಮಧ್ಯಾಹ್ನ 2.30ರಲ್ಲಿ ಸೂಸೇಪಾಳ್ಯದ ಜೋಸೆಫ್ ಮತ್ತು ಸೂಲಿಕುಂಟೆ ಗ್ರಾಮದ ಆರ್.ಎಸ್. ವೆಂಕಟರೆಡ್ಡಿ ಈಶ ಯೋಗ ಕೇಂದ್ರದ ವಾಹನ ನಿಲುಗಡೆ ಸ್ಥಳದಿಂದ ಸುಮಾರು 20 ಮೀಟರ್ ದೂರದಲ್ಲಿನ ಸರ್ವೆ ನಂಬರ್ 284, 285ರ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.  

ಈ ಹಿಂದೆ ಬಂದವರ ಜೊತೆ ಸೇರಿ ದೇವಸ್ಥಾನದ ಆವರಣದಲ್ಲಿದ್ದ ಕಸ, ಕಡ್ಡಿಗಳಿಂದ ಬೆಂಕಿ ಹಾಕಿದ್ದಾರೆ. ಚಿಕನ್ ಬಿರಿಯಾನಿ ತಯಾರಿಸಿದ್ದಾರೆ. ಈ ಸಮಯದಲ್ಲಿ ಬಹಳಷ್ಟು ಕಾರುಗಳು ನಿಂತಿದ್ದವು. ಈ ಸ್ಥಳ ಪ್ರತಿಷ್ಠಾಪಿತ ಯೋಗೇಶ್ವರಲಿಂಗ, ಆದಿಯೋಗಿ, ನಂದಿ, ಮಹಾಶೂಲ ಮತ್ತು ನಾಗಮಂಟಪವನ್ನು ಹೊಂದಿದೆ. 

ಭಕ್ತರಿಗೆ ಪವಿತ್ರ ಸ್ಥಳವಾಗಿದೆ. ನಮ್ಮ ಸಂಸ್ಕೃತಿ ಮತ್ತು ನಂಬಿಕೆ ಪ್ರಕಾರ, ಇಂತಹ ಪವಿತ್ರ ಸ್ಥಳದಲ್ಲಿ ಮಾಂಸದ ಆಹಾರ ತಯಾರಿಸುವುದು ಮತ್ತು ತಿನ್ನುವುದು ಅಪವಿತ್ರ. ಕೆಲವು ಭಕ್ತರು ಇದನ್ನು ನೋಡಿ ನೋವು ಮತ್ತು ಅವಮಾನ ಅನುಭವಿಸಿದರು. 

ಸ್ಥಳದಲ್ಲಿ ಜನರು ಜಮಾಯಿಸಿದರು. ಹಿಂಸಾಚಾರಕ್ಕೆ ತಿರುಗುವ ಸಂಭವವಿತ್ತು. ಮತ್ತೆ ನಾವು  ಪೊಲೀಸರಿಗೆ ವಿಚಾರ ತಿಳಿಸಿದೆವು. ಪೊಲೀಸರ ಜೊತೆ ನಾವು ಹೋಗಿ ಈ ವ್ಯಕ್ತಿಗಳನ್ನು ಓಡಿಸಬೇಕಾಯಿತು.

ಸದರಿ ವ್ಯಕ್ತಿಗಳು ಈ ಹಿಂದೆಯೂ ಹಲವು ಬಾರಿ ಅತಿಕ್ರಮವಾಗಿ ಪ್ರವೇಶಿಸಿ ತೊಂದರೆ ನೀಡಿದ್ದಾರೆ. ಈ ವ್ಯಕ್ತಿಗಳು ನಿರಂತರವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದು, ಸಮುದಾಯಗಳ ನಡುವೆ ದ್ವೇಷ ಉಂಟು ಮಾಡುತ್ತಿದ್ದಾರೆ. ಇವರ ಚಟುವಟಿಕೆಯಿಂದ ಕೋಮುಗಲಭೆ ಸಾಧ್ಯತೆಯಿದೆ. ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಆದ್ದರಿಂದ ಇವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು.

ನಮ್ಮ ಆಸ್ತಿಗಳಿಗೆ ಸಮಾಜಘಾತುಕ ಶಕ್ತಿಗಳಿಂದ ರಕ್ಷಣೆ ನೀಡಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದನ್ನು ತಡೆಯಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT