ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟಕ್ಕೆ ರಾಜ್ಯದ ಎರಡನೇ ಮುಖ್ಯಮಂತ್ರಿ ಭೇಟಿಯ ನೆನಪುಗಳು

Last Updated 1 ಫೆಬ್ರುವರಿ 2023, 4:36 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಇತಿಹಾಸದ ತುಣುಕುಗಳಾಗಿರುವ, ದಾಖಲೆಗಳೂ ಆಗಿರುವ ಹಳೆಯ ಕಪ್ಪುಬಿಳುಪಿನ ಛಾಯಾಚಿತ್ರಗಳು ಹಲವಾರು ಕಥೆಗಳನ್ನು ಹೇಳುತ್ತವೆ. ಕೆಲವು ಆಸಕ್ತರ ಸಂಗ್ರಹಗಳಲ್ಲಿ ಭದ್ರವಾಗಿರುವ ಈ ಛಾಯಾಚಿತ್ರಗಳು ಅಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕುವಲ್ಲಿ ನೆರವಾಗುತ್ತಿವೆ.

ಶಿಡ್ಲಘಟ್ಟಕ್ಕೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ಡಿ.ದೇವರಾಜ ಅರಸ್ ಮುಂತಾದ ಗಣ್ಯರು ಭೇಟಿ ನೀಡಿದ್ದರು. ಹಲವಾರು ಗಣ್ಯರು ಶಿಡ್ಲಘಟ್ಟಕ್ಕೆ ಆಗಮಿಸಿದ್ದರ ಕುರುಹುಗಳ ದಾಖಲೆಯ ಛಾಯಾಚಿತ್ರಗಳಿವೆ. ಆಗಿನ ಸಾಮಾಜಿಕ ಜೀವನವನ್ನು ತೋರಿಸಿಕೊಡುವ ಅಂದಿನವರ ಉಡುಪುಗಳು, ಸಾಂಘಿಕ ಜೀವನ, ಸರಳತೆ, ಸಾಮಾಜಿಕ ಸೇವೆಗಳನ್ನು ತಿಳಿಸಿಕೊಡುವ ಈ ಚಿತ್ರಗಳು ಇಂದಿನವರಿಗೆ ಅಪರೂಪದ ದಾಖಲೆಗಳಾಗಿದ್ದರೆ, ಹಳಬರಿಗೆ ಹಲವಾರು ಕಥೆಗಳನ್ನು ನೆನಪಿಸುವ ಕಣಜವಾಗಿವೆ.

ಕೆಪಿಸಿಸಿ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಶಿಡ್ಲಘಟ್ಟದ ಕೆ.ಕೊಂಡಪ್ಪನವರ ಮನೆಗೆ 1970ರಲ್ಲಿ ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್‌ಹನುಮಂತಯ್ಯ ಮತ್ತು ಕಾಂಗ್ರೆಸ್ ಪಕ್ಷ ಇಬ್ಬಾಗವಾದ ಮೇಲೆ 1972ರಲ್ಲಿ ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸ್ ಬಂದಿದ್ದರು. ನೆಲದ ಮೇಲೆ ಚಾಪೆ ಹಾಸಿಕೊಂಡು ಕುಳಿತಿರುವ ಅವರ ಸರಳತೆಯನ್ನು ಛಾಯಾಚಿತ್ರದಲ್ಲಿ ಕಾಣಬಹುದು. ಆ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಅವರು ಮಾಜಿ ಮುಖ್ಯಮಂತ್ರಿ ಯಾಗಿದ್ದರೆ, ಡಿ.ದೇವರಾಜ ಅರಸ್ ಅವರು ಇನ್ನೂ ಮುಖ್ಯಮಂತ್ರಿ ಆಗಿರಲಿಲ್ಲ.

‘ಆಗಿನ ಮುಖಂಡರ ನಡೆ ನುಡಿ ಒಂದೇ ಆಗಿತ್ತು. ಜನಸಾಮಾನ್ಯರಂತೆಯೇ ಸರಳತೆಯಿಂದ ಇರುತ್ತಿದ್ದರು. ಜನರೊಡನೆ ಬೆರೆತು ಕಷ್ಟಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುತ್ತಿದ್ದರು. ಜನಸಾಮಾನ್ಯರೂ ಕೂಡ ಭ್ರಷ್ಟರಾಗಿರಲಿಲ್ಲ. ಕೇವಲ ಎಲೆ ಅಡಿಕೆಯನ್ನಿಟ್ಟು ಮತಯಾಚನೆ ಮಾಡುತ್ತಿದ್ದರು. ಚುನಾವಣೆಗೆ ನಿಂತವರ ನಡುವೆಯೂ ಕೆಟ್ಟ ಭಾಷೆ, ಕಿತ್ತಾಟ ಇರುತ್ತಿರಲಿಲ್ಲ. ಈಗಿನ ಪರಿಸ್ಥಿತಿ ಹದಗೆಟ್ಟಿದೆ. ಉಚಿತವಾಗಿ ಏನೇ ಕೊಟ್ಟರೂ ಕಿತ್ತುಕೊಂಡು ಹೋಗುವ ಮನಸ್ಥಿತಿಗೆ ಮತದಾರರನ್ನು ತಂದು ನಿಲ್ಲಿಸಿದ್ದಾರೆ’ ಎಂದು ಹಿರಿಯರೊಬ್ಬರು ಹೇಳಿದರು.

ವೀರೇಂದ್ರ ಪಾಟೀಲರ ಭೇಟಿ: ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಯನ್ನು ಆಗ ಕಂಬೈನ್ಡ್ ಡಿಸ್ಪೆನ್ಸರಿ ಎನ್ನುತ್ತಿದ್ದರು. ಅಲ್ಲಿ ಡಾ.ಎಸ್.ಆರ್.ಎನ್.ಮೂರ್ತಿ ರಾವ್ ಮತ್ತು ಮಹಾಲಕ್ಷ್ಮಮ್ಮ ದಂಪತಿ ದಾನವಾಗಿ ನೀಡಿದ ನಿಧಿಯಿಂದ ನಿರ್ಮಿಸಲು ಉದ್ದೇಶಿಸಿದ ಹೆರಿಗೆ ಆಸ್ಪತ್ರೆಯ ಶಂಕುಸ್ಥಾಪನೆಗೆ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಆಗಮಿಸಿದ್ದರು. 2020ರ ಅಕ್ಟೋಬರ್ 6ರ ಪ್ರಜಾವಾಣಿ ಪತ್ರಿಕೆಯಲ್ಲಿ ‘50 ವರ್ಷಗಳ ಹಿಂದೆ’ ಅಂಕಣದಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗಿದೆ.

ಮೈಸೂರು ಸಂಸ್ಥಾನದ ಪುರಸಭೆಗಳ ಕೈಪಿಡಿ 1953 ರಲ್ಲಿ, ‘ಹೆರಿಗೆ ಆಸ್ಪತ್ರೆ ಕಟ್ಟಡದ ಬಗ್ಗೆ ಈಗಾಗಲೇ ಹತ್ತು ಸಾವಿರ ರೂಪಾಯಿಗಳವರೆಗೆ ಸಾರ್ವಜನಿಕರಿಂದ ಚಂದಾ ವಸೂಲಾಗಿದೆ. ಹೆರಿಗೆ ಆಸ್ಪತ್ರೆ ಮಂಜೂರು ಮಾಡಲು
ಸರ್ಕಾರವನ್ನು ಪ್ರಾರ್ಥಿಸಿಕೊಂಡಿರುತ್ತೆ. ಈ ಆಸ್ಪತ್ರೆಗೆ ಬಿ.ವಿರೂಪಾಕ್ಷಪ್ಪನವರು ಹತ್ತು ಸಾವಿರ
ರೂಪಾಯಿ ವಾಗ್ದಾನ ಮಾಡಿ ಈಗಾಗಲೇ ಐದು ಸಾವಿರ ರೂಪಾಯಿ ಕೊಟ್ಟಿದ್ದಾರೆ’ ಎಂದು ಕೈಪಿಡಿಯಲ್ಲಿ ಮುದ್ರಿತವಾಗಿದೆ.

ಗುಂಡೂರಾವ್ ಭೇಟಿ: ವರ್ಣರಂಜಿತ ಮುಖ್ಯಮಂತ್ರಿಯೆಂದೇ ಆ ಕಾಲದಲ್ಲಿ ಹೆಸರಾಗಿದ್ದ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದದ್ದು ಕೇವಲ ಎರಡು ವರ್ಷಗಳು (1980-83). 1983ರ ವಿಧಾನಸಭಾ ಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸಿದ್ದ ವಿ.ಮುನಿಯಪ್ಪ ಅವರ ಪರವಾಗಿ ಪ್ರಚಾರಕ್ಕೆ ಗುಂಡೂರಾವ್ ಆಗಮಿಸಿದ್ದರು.

1983ರ ಚುನಾವಣೆಯಲ್ಲಿ ಶಾಸಕರಾಗಿ ವಿ.ಮುನಿಯಪ್ಪ(ಪಡೆದ ಮತಗಳು 34,757) ಆಯ್ಕೆಯಾದರು. ಆದರೆ ಈ ಅಧಿಕಾರಾವಧಿ ಇದ್ದದ್ದು ಕೇವಲ ಎರಡು ವರ್ಷ ಮಾತ್ರ. ಮುಖ್ಯಮಂತ್ರಿಯಾಗಿದ್ದ ಜನತಾ ಪಾರ್ಟಿಯ ರಾಮಕೃಷ್ಣ ಹೆಗಡೆಯವರು ಬೆಂಬಲಿಗರ ಕೋರಂ ಕಡಿಮೆಯಿದ್ದುದರಿಂದ ಮಧ್ಯಂತರ ಚುನಾವಣೆ ಘೋಷಿಸಿದ್ದು ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT