ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ಬಳಿ ಪ್ಯಾಕಿಂಗ್ ಘಟಕವಿಲ್ಲ. ಕೋಲಾರ, ಹೊಸಕೋಟೆ ಮತ್ತು ಯಲಹಂಕದಲ್ಲಿರುವ ಮದರ್ ಡೇರಿ ಘಟಕಗಳಲ್ಲಿ ಚಿಮುಲ್ ಹಾಲು ಮತ್ತು ಮೊಸರನ್ನು ಪ್ಯಾಕಿಂಗ್ ಮಾಡಿಸುತ್ತಿದೆ.

ಈ ಕಾರಣದಿಂದ ಚಿಮುಲ್ಗೆ ಮಾಸಿಕ ಸರಾಸರಿ ₹ 2 ಕೋಟಿ ಹೊರೆ ಹೆಚ್ಚಿದೆ. ಈ ಹೊರೆ ತಗ್ಗಿಸಲು ಚಿಮುಲ್ ಈಗ ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದೆ.

ಈ ಘಟಕವು ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಜಾರಿ ಆಗುತ್ತಿರುವ ಮೊದಲ ಯೋಜನೆಯಾಗಿದೆ. ನಿತ್ಯ ಮಾರುಕಟ್ಟೆಗೆ ಪೂರೈಸುತ್ತಿರುವ ಹಾಲು, ಮೊಸರನ್ನು ಪ್ಯಾಕಿಂಗ್ ಮಾಡಲು ಚಿಕ್ಕಬಳ್ಳಾಪುರದ ಮೆಗಾ ಡೇರಿಯಲ್ಲಿ ಸಾಧ್ಯವಿಲ್ಲ. ಈ ಹಿಂದೆ ಕೋಲಾರ ಒಕ್ಕೂಟದ ಜೊತೆಯಲ್ಲಿದ್ದ ವೇಳೆ ಅಲ್ಲಿ ಪ್ಯಾಕಿಂಗ್ ಆಗಿ ಚಿಕ್ಕಬಳ್ಳಾಪುರಕ್ಕೆ ಪೂರೈಕೆ ಆಗುತ್ತಿತ್ತು. ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ಈ ಘಟಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಹೊರಗಿನ ಒಕ್ಕೂಟಗಳಿಂದ ಪ್ಯಾಕಿಂಗ್ ಮಾಡಿಸುತ್ತಿರುವ ಕಾರಣ ಮಾಸಿಕ ಒಕ್ಕೂಟಕ್ಕೆ ₹ 2.50 ಕೋಟಿ ಹೊರೆ ಆಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿಯೇ ಘಟಕ ನಿರ್ಮಾಣವಾದರೆ ಮಾಸಿಕ ₹ 2 ಕೋಟಿ ಹೊರೆ ಕಡಿಮೆ ಆಗಲಿದೆ ಎನ್ನುತ್ತವೆ ಚಿಮುಲ್ ಮೂಲಗಳು.

ಬೆಂಗಳೂರಿನಲ್ಲಿಯೂ ಚಿಮುಲ್ ಮಾರುಕಟ್ಟೆ ಹೊಂದಿದೆ. ಹೊಸಕೋಟೆ ಮತ್ತು ಯಲಹಂಕದಲ್ಲಿ ಪ್ಯಾಕಿಂಗ್ ಆಗುವ ಹಾಲು ಮತ್ತು ಮೊಸರು ಬೆಂಗಳೂರಿಗೆ ಪೂರೈಕೆ ಆಗುತ್ತಿದೆ.

ಚಿಮುಲ್ ಹೆಸರಿಗೆ ಪಹಣಿ: ಚಿಮುಲ್ಗೆ ಹೊಂದಿಕೊಂಡಿರುವ ತೋಟಗಾರಿಕಾ ಇಲಾಖೆಗೆ ಸೇರಿದ 9.14 ಎಕರೆ ಜಾಗವನ್ನು ಸರ್ಕಾರ ಚಿಮುಲ್ಗೆ ನೀಡಿದೆ. ಇದಕ್ಕೆ ಬದಲಾಗಿ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿ ತೋಟಗಾರಿಕೆ ಇಲಾಖೆಗೆ 9.38 ಎಕರೆ ಜಾಗವನ್ನು ಹಸ್ತಾಂತರಿಸಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ಜಮೀನಿನ ಹಕ್ಕು ಚಿಮುಲ್ಗೆ ವರ್ಗಾವಣೆಯಾಗಿದೆ. ಚಿಮುಲ್ ಹೆಸರಿನಲ್ಲಿ 9.14 ಎಕರೆಯ ಪಹಣಿಯೂ ಬರುತ್ತಿದೆ. ಮೆಗಾಡೇರಿಗೆ ಹೊಂದಿಕೊಂಡಿರುವ ದೊಡ್ಡಮರಳಿ ಭಾಗದಲ್ಲಿನ ಜಮೀನನ್ನು ಚಿಮುಲ್ ಪಡೆದಿದೆ.

2023ರ ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ಜಾಗ ಸಮಸ್ಯೆ ಕಾರಣ ಘಟಕ ನಿರ್ಮಾಣ ಸಾಧ್ಯವಾಗಿರಲಿಲ್ಲ.

ಘಟಕ ನಿರ್ಮಾಣಕ್ಕೆ ಸಂಬಂಧಿಸಿದ ₹ 130 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿಗೆ ಕೋಚಿಮುಲ್ ಸಭೆಯಲ್ಲಿ ಅನುಮೋದನೆ ದೊರೆತಿತ್ತು. ಮೊಸರು, ಮಸಾಲ ಮಜ್ಜಿಗೆ, ನಿತ್ಯ ಜನರು ಬಳಸುವ ಹಾಲಿನ ಪ್ಯಾಕೆಟ್ಗಳನ್ನು ಸಹ ಇಲ್ಲಿ ಸಿದ್ಧಗೊಳಿಸಬಹುದು. ಅಲ್ಲದೆ ಭವಿಷ್ಯದ ಮತ್ತು ದೂರದೃಷ್ಟಿಯ ಕಾರಣದಿಂದ ಘಟಕಗಳ ಸಾಮರ್ಥ್ಯವನ್ನು ವಿಸ್ತರಿಸಲು ಡಿಪಿಆರ್ನಲ್ಲಿ ಅವಕಾಶಗಳಿವೆ.

ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ಚಿಮುಲ್ ಪಕ್ಕದಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಜಮೀನು ಕೊಡುವಂತೆ ಜಿಲ್ಲೆಯ ಸಹಕಾರ ವಲಯ ಹಾಗೂ ಒಕ್ಕೂಟದ ನಿರ್ದೇಶಕರು ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಸಹ ಮಾಡಿದ್ದರು. 14 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯಲ್ಲಿ ಟೆಟ್ರಾ ಪ್ಯಾಕ್, ಫ್ಲೆಕ್ಸಿ ಪ್ಯಾಕ್ ಘಟಕ, ತುಪ್ಪ ಮತ್ತು ಬೆಣ್ಣೆ ತಯಾರಿಕೆಯ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈಗ ಪಡೆದಿರುವ 9.14 ಎಕರೆಯಲ್ಲಿಯೇ ಪ್ಯಾಕಿಂಗ್ ಘಟಕ ನಿರ್ಮಾಣವಾಗಲಿದೆ.

‘ಪ್ಯಾಕಿಂಗ್ ಘಟಕ ತುರ್ತಾಗಿ ಆಗಬೇಕಾಗಿರುವ ಕೆಲಸ. ಡಿಪಿಆರ್ ವಿಸ್ತರಣೆ ಅಗತ್ಯವಿದ್ದರೆ ಅದನ್ನೂ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಯಾವ ಯೋಜನೆಗಳನ್ನು ಜಾರಿಗೊಳಿಸಬೇಕಾಗು ಎನ್ನುವ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಹಾಲಿನ ಪ್ಯಾಕಿಂಗ್ಗೆ ಬೇರೆ ಒಕ್ಕೂಟಗಳಿಗೆ ನೀಡುತ್ತಿರುವ ಹಣವು ಚಿಕ್ಕಬಳ್ಳಾಪುರ ಒಕ್ಕೂಟದ ಬಳಿಯೇ ಉಳಿದರೆ ಹಾಲು ಉತ್ಪಾದಕರಿಗೆ ಮತ್ತಷ್ಟು ಒಳ್ಳೆಯ ದರ ನೀಡಬಹುದು’ ಎಂದು ಚಿಮುಲ್ ಮೂಲಗಳು ತಿಳಿಸುತ್ತವೆ.

ನಿತ್ಯ 3 ಲಕ್ಷ ಪ್ಯಾಕಿಂಗ್

ಕೋಲಾರ, ಯಲಹಂಕ ಮತ್ತು ಹೊಸಕೋಟೆಯ ಘಟಕಗಳಲ್ಲಿ ನಿತ್ಯ 3 ಲಕ್ಷ ಪ್ಯಾಕಿಂಗ್ಗಳನ್ನು ಚಿಮುಲ್ ಮಾಡಿಸುತ್ತಿದೆ. ಒಕ್ಕೂಟಕ್ಕೆ ನಿತ್ಯ 5 ಲಕ್ಷ ಲೀಟರ್ಗೂ ಹೆಚ್ಚು ಹಾಲು ಪೂರೈಕೆ ಆಗುತ್ತಿದೆ.

ಇದರಲ್ಲಿ 3 ಲಕ್ಷ ಲೀಟರ್ ಹಾಲು, ಮೊಸರಿಗೆ, 1 ಲಕ್ಷ ಲೀಟರ್ ಹಾಲು ಯುಎಚ್ಟಿ, 40 ಸಾವಿರ ಲೀಟರ್ ಫ್ಲೆಕ್ಸಿ ಹಾಲು, 20 ಸಾವಿರ ಲೀಟರ್ ಪನ್ನೀರ್ಗೆ, 50ರಿಂದ 60 ಸಾವಿರ ಲೀಟರ್ ಬೆಣ್ಣೆ, ತುಪ್ಪ ಮತ್ತು ಪೌಡರ್ಗೆ ಬಳಕೆ ಆಗುತ್ತಿದೆ.

ಚೆನ್ನೈ ತಂಡದಿಂದ ಡಿಪಿಆರ್

2023ರ ನ.28ರಂದು ನಡೆದ ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿಯೂ ಚಿಕ್ಕಬಳ್ಳಾಪುರ ಮೆಗಾಡೇರಿ ಆವರಣದಲ್ಲಿ ಪ್ಯಾಕಿಂಗ್ ಘಟಕ ನಿರ್ಮಾಣದ ಬಗ್ಗೆ ಚರ್ಚಿಸಲಾಗಿತ್ತು. ಡಿಪಿಆರ್ ತಯಾರಿಸಿ ಮಂಡಿಸಲು ಸಹ ಸೂಚಿಸಲಾಗಿತ್ತು. ಆಡಳಿತ ಮಂಡಳಿಯ ನಿರ್ದೇಶನದಂತೆ ಚೆನ್ನೈನ ಖಾಸಗಿ ಸಂಸ್ಥೆಯೊಂದಕ್ಕೆ ಡಿಪಿಆರ್ ಸಿದ್ಧಗೊಳಿಸುವ ಜವಾಬ್ದಾರಿ ನೀಡಲಾಗಿತ್ತು.

ಮೆಗಾಡೇರಿಗೆ ಭೇಟಿ ನೀಡಿದ ತಾಂತ್ರಿಕ ಸಮಾಲೋಚಕರ ತಂಡ, ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನಾ ವರದಿ ಸಿದ್ಧಗೊಳಿಸಿ ಕೋಚಿಮುಲ್ಗೆ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.