ಶನಿವಾರ, ಏಪ್ರಿಲ್ 1, 2023
23 °C
ಚಿಕ್ಕಬಳ್ಳಾಪುರ ನಗರಸಭೆ ಆವರಣ; ಮಹಾತ್ಮ ಮೃತಪಟ್ಟ ಸಂದರ್ಭದಲ್ಲಿ ಸ್ಮರಣೆಗಾಗಿ ನೆಟ್ಟ ಕಲ್ಲು

ಚಿಕ್ಕಬಳ್ಳಾಪುರ: ಕಸದಿಂದ ತುಂಬಿದೆ ‘ಗಾಂಧಿ ಸ್ಮರಣೆ’ಯ ಫಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಾಡಿನ ಎಲ್ಲೆಡೆ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಜ.30ರಂದು ಮಹಾತ್ಮ ಗಾಂಧಿ ಅವರ ಪುಣ್ಯ ಸ್ಮರಣೆ ನಡೆಯುತ್ತದೆ. ರಾಷ್ಟ್ರಪಿತನ ಗುಣಗಾನ ಜರುಗುತ್ತದೆ. ಅವರ ನೆನಪುಗಳನ್ನು ಸ್ಮರಿಸಲಾಗುತ್ತದೆ. 

ಇಂತಹ ಬೆಳವಣಿಗೆಗಳ ನಡುವೆಯೇ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನ ನಗರದಲ್ಲಿ ಅಳವಡಿಸಿರುವ ಅವರ ಸ್ಮರಣೆಯ ಫಲಕ ಕಸ, ದೂಳಿನಿಂದ ಮುಚ್ಚಿದೆ. ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ಗಾಂಧೀಜಿ ಹುತಾತ್ಮರಾದ ಸಂದರ್ಭದಲ್ಲಿ ಅಳವಡಿಸಿದ್ದ ಫಲಕವಿದೆ. 

‘ವಂದೇ ಮಾತರಂ ದೀನ ದಲಿತರ ಉದ್ದಾರಕರು, ಶಾಂತಿಪ್ರಿಯರು, ಸತ್ಯವ್ರತಧಾರಿಗಳು ಆದ ಪೂಜ್ಯ ಮಹಾತ್ಮರಾದ ಗಾಂಧೀಜಿ ಶುಕ್ರವಾರ ತಾ.30.1.1948ರ ಸಂಜೆ 5.17ರಲ್ಲಿ ತಿಳಿಗೇಡಿ ಕೊಲೆಪಾತಕನಿಂದ ಕೊಲೆಯಾದರು’ ಎಂದು ಕಲ್ಲಿನ ಫಲಕದಲ್ಲಿ ಬರೆಸಲಾಗಿದೆ. ‘ಸ್ಥಾಪಕರ ಚಿಕ್ಕಬಳ್ಳಾಪುರ ಹರಿಜನ ಕಾಂಗ್ರೆಸ್ ಸದಸ್ಯರು ವೆಂಕಟನರಸಯ್ಯ’ ಎಂದಿದೆ. 

ಹೀಗೆ ಗಾಂಧೀಜಿ ಅವರು ಮೃತಪಟ್ಟ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಾಗರಿಕರು ಅವರನ್ನು ಸ್ಮರಿಸಿ ಈ ಫಲಕ ಅಳವಡಿಸಿದ್ದಾರೆ ಎನ್ನಲಾಗುತ್ತದೆ. 

ಈಗ ಕಲ್ಲಿನ ಫಲಕದ ಸುತ್ತ ದೊಡ್ಡ ಮಟ್ಟದಲ್ಲಿ ಕಸದ ರಾಶಿ ಇದೆ. ಫಲಕದ ಮುಂಭಾಗ ಶ್ರದ್ಧಾಂಜಲಿ ಫ್ಲೆಕ್ಸ್‌ಗಳನ್ನು ಅಳವಡಿಸುವ ಜಾಗವಾಗಿದೆ. ಗಾಂಧಿಯನ್ನು ನಾಡಿನ ಎಲ್ಲೆಡೆ ಸ್ಮರಿಸುತ್ತಿದ್ದ ಇತ್ತ ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿದ್ದ ಫಲಕ ಕಾಣದ ಸ್ಥಿತಿಯಲ್ಲಿತ್ತು. ಫಲಕದ ಮುಂಭಾಗ ಶ್ರದ್ಧಾಂಜಲಿಯ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರಿಂದ ಇದು ಪೂರ್ಣವಾಗಿ ಮುಚ್ಚಿತ್ತು. ಫಲಕದ ಬುಡದಲ್ಲಿ ಮುರಿದು ಬಿದ್ದ ಶ್ರದ್ಧಾಂಜಲಿಯ ಫ್ಲೆಕ್ಸ್‌ಗಳ ರಾಶಿಯೇ ಇದೆ. ಫಲಕದ ಬಳಿಗೆ ಹೋಗಲು ದೂಳು ಮೆತ್ತಿಕೊಳ್ಳಬೇಕು. 

ಸೋಮವಾರ ‘ಪ್ರಜಾವಾಣಿ’ ಪ್ರತಿನಿಧಿ ಇಲ್ಲಿಗೆ ಭೇಟಿ ನೀಡಿದಾಗ, ಫಲಕ ಕಾಣದ ಸ್ಥಿತಿಯಲ್ಲಿ ಇತ್ತು. ನಗರಸಭೆ ಆವರಣದಲ್ಲಿದ್ದ ಎಚ್‌.ಎಸ್.ಗಾರ್ಡನ್‌ನ ಮುಖಂಡ ಮಂಜುನಾಥ್ ಅವರ ಗಮನಕ್ಕೆ ತಂದಾಗ ತಕ್ಷಣವೇ ಅವರು, ಪೌರ ಕಾರ್ಮಿಕರ ನೆರವಿನಲ್ಲಿ ಫಲಕಕ್ಕೆ ಅಡ್ಡಲಾಗಿದ್ದ ಶ್ರದ್ಧಾಂಜಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಒಂದೆಡೆ ಜ.30ರಂದು ‌ಗಾಂಧೀಜಿ ಅವರ ಪುಣ್ಯ ಸ್ಮರಣೆ ನಡೆಯುತ್ತಿದ್ದರೆ ನಗರಸಭೆ ಆವರಣದಲ್ಲಿನ ಫಲಕ ದೂಳು ಹಿಡಿದಿದೆ. ಕಸದಿಂದ ಆವೃತವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು