ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಹೊಸ ಸರ್ಕಾರ; ಹೆಚ್ಚಿದ ಕೈಗಾರಿಕೀಕರಣದ ನಿರೀಕ್ಷೆ

Published 11 ಜೂನ್ 2023, 23:33 IST
Last Updated 11 ಜೂನ್ 2023, 23:33 IST
ಅಕ್ಷರ ಗಾತ್ರ

ಡಿ.ಎಂ.ಕುರ್ಕೆ ಪ್ರಶಾಂತ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ಆಯ್ಕೆ ಆಗಿದ್ದಾರೆ. ಈಗ ಮತ್ತೆ ಕೈಗಾರಿಕೀಕರಣದ ನಿರೀಕ್ಷೆಗಳು ಜನರಲ್ಲಿ ಮೊಳಕೆಯೊಡೆದಿದೆ. 

ಜನರಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಆಗಿರುವ ಶಾಸಕರು, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಕೈಗಾರಿರಕೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಕೈಗಾರಿಕೀಕರಣದ ಬಗೆಗಿನ ಮಾತುಗಳು ಬರಿ ಮಾತುಗಳಾಗುತ್ತವೆಯೇ ಅಥವಾ ಕಾರ್ಯರೂಪಕ್ಕೆ ಇಳಿಯುತ್ತವೆಯೇ ಎನ್ನುವ ಕುತೂಹಲ ಸಹ ನಾಗರಿಕರದ್ದಾಗಿದೆ. 

ಅಧಿಕಾರವಹಿಸಿಕೊಂಡ ಆರಂಭದಲ್ಲಿಯೇ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ ಕೈಗಾರಿಕೀಕರಣದಿಂದ ದೂರವಿದೆ. ಈ ವಿಚಾರವಾಗಿ ಅಭಿವೃದ್ಧಿ ಆಗಬೇಕು ಎಂದು ಒತ್ತಿ ಹೇಳುತ್ತಿದ್ದಾರೆ. 

ಕೈಗಾರಿಕೆ ಪ್ರಾರಂಭಕ್ಕೆ ಅವಕಾಶ ಕೈಗಾರಿಕೆಗಳು ಬರುವುದರಿಂದ ಸ್ಥಳೀಯರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ದೊರೆಯಬೇಕು. ಆದರೆ ಕೋಲಾರದ ನರಸಾಪುರ ಕೈಗಾರಿಕಾ ಕ್ಷೇತ್ರ ನೋಡಿದರೆ ಸ್ಥಳೀಯರಿಗೆ ಆದ್ಯತೆ ದೊರೆತಿಲ್ಲ. ಶೇ 90ರಷ್ಟು ಉದ್ಯೋಗ  ಸ್ಥಳೀಯರಿಗೆ ಕೊಡುತ್ತೇವೆ ಎನ್ನುವ ಭರವಸೆ ನೀಡುವವರಿಗೆ ಮಾತ್ರ ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ಅವಕಾಶ ನೀಡಲಾಗುವುದು. ನಮ್ಮ ರೈತರ ಭೂಮಿ ಸಂಪನ್ಮೂಲ ಉಪಯೋಗಿಸಿಕೊಂಡು ಬೇರೆಯವರು ಕೆಲಸ ಮಾಡಿದರೆ ನಮ್ಮ ಜನರಿಗೆ ಉಪಯೋಗವೇನು.
ಪ್ರದೀಪ್ ಈಶ್ವರ್, ಶಾಸಕ ಚಿಕ್ಕಬಳ್ಳಾಪುರ

ಬೆಂಗಳೂರಿನ ಆಸುಪಾಸು ಜಿಲ್ಲೆಗಳಲ್ಲಿ ಈಗಾಗಲೇ ಕೈಗಾರಿಕಾ ಹಬ್‌ಗಳು ಮತ್ತು ಬೃಹತ್ ಕೈಗಾರಿಕಾ ಯೋಜನೆಗಳು ನಿರ್ಮಾಣವಾಗಿವೆ. ತುಮಕೂರಿನಲ್ಲಿ ವಸಂತ ನರಸಾಪುರ, ಕೋಲಾರದಲ್ಲಿ ನರಸಾಪುರ ಮತ್ತು ರಾಮನಗರದ ಬಿಡದಿಯ ಬಳಿ ಕೈಗಾರಿಕಾ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಇಲ್ಲಿ ವಿದೇಶಿ ಸಂಸ್ಥೆಗಳು ತಮ್ಮ ಘಟಕಗಳನ್ನು ಆರಂಭಿಸಿವೆ. ಆಯಾ ಜಿಲ್ಲೆಯಷ್ಟೇ ಅಲ್ಲ ಆಸುಪಾಸಿನ ಜಿಲ್ಲೆಯ ಜನರಿಗೂ ಉದ್ಯೋಗ ನೀಡುತ್ತಿವೆ. ಆದರೆ, ಚಿಕ್ಕಬಳ್ಳಾಪುರ ಮಾತ್ರ ಇಂದಿಗೂ ಕೈಗಾರಿಕೀಕರಣದ ವಿಚಾರದಲ್ಲಿ ಬಳಲುತ್ತಲೇ ಇದೆ. 

ಕೈಗಾರಿಕೆ ಸ್ಥಾಪನೆ; ಬಹುದಿನದ ಆಸೆ ಬಾಗೇಪಲ್ಲಿಗೆ ಕೈಗಾರಿಕೆಗಳನ್ನು ತರಬೇಕು ಕೈಗಾರಿಕಾ ಪ್ರದೇಶ ಸ್ಥಾಪಿಸಬೇಕು ಎನ್ನುವುದು ನನ್ನ ಬಹುದಿನಗಳ ಆಸೆ. ಕೈಗಾರಿಕೆಗಳ ಸ್ಥಾಪನೆಯಿಂದ ಹಿಂದುಳಿದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಸಾಧ್ಯ. ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು.
ಎಸ್‌.ಎನ್.ಸುಬ್ಬಾರೆಡ್ಡಿ, ಶಾಸಕ ಬಾಗೇಪಲ್ಲಿ

ಜಿಲ್ಲೆ ರಚನೆಯಾಗಿ 15 ವರ್ಷಗಳಾದರೂ ಯಾವುದೇ ಸರ್ಕಾರಗಳು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಹಬ್ ನಿರ್ಮಾಣಕ್ಕೆ ಮುಂದಾಗಿಲ್ಲ. ಪ್ರತಿವರ್ಷದ ಬಜೆಟ್‌ನಲ್ಲಿ ಕೈಗಾರಿಕೀಕರಣದ ಬಗ್ಗೆ ಜನರಲ್ಲಿ ಆಶಾವಾದಗಳು ಮೊಳೆಯುತ್ತವೆ. ಬಜೆಟ್ ಪ್ರಕಟಣೆ ತರುವಾಯ ಆಶಾವಾದಗಳು ಕಮರುತ್ತವೆ. ಈ ಕಾರಣದಿಂದ ಜಿಲ್ಲೆಯ ಯುವ ಸಮುದಾಯ ಉದ್ಯೋಗಗಳಿಗಾಗಿ ಬೆಂಗಳೂರು ಆಶ್ರಯಿಸಬೇಕಾಗಿದೆ. 

ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ ಶಿಡ್ಲಘಟ್ಟದಲ್ಲಿ ಸೀರೆ ಕ್ಲಸ್ಟರ್ ಮತ್ತು ಚಿಕ್ಕಬಳ್ಳಾಪುರದಲ್ಲಿ ಚರ್ಮದ ಗೊಂಬೆ ತಯಾರಿಕೆ ಘಟಕಗಳ ಆರಂಭದ ಪ್ರಸ್ತಾಪ ಮಾಡಿದ್ದರು. ಆದರೆ ಈ ಘಟಕಗಳು ಇಂದಿಗೂ ಕಾರ್ಯರೂಪಕ್ಕೆ ಇಳಿದಿಲ್ಲ.

ಸರ್ಕಾರದ ಗಮನಕ್ಕೆ ಪಕ್ಕದ ದೇವನಹಳ್ಳಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಲ್ಲಿ ಕೈಗಾರಿಕೀಕರಣ ಮಾಹಿತಿ ಮತ್ತು ತಂತ್ರಜ್ಞಾನ ವಲಯ (ಐಟಿ) ಬೆಳೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ದೊಡ್ಡ ಮಟ್ಟದಲ್ಲಿ ಕೈಗಾರಿಕೀಕರಣ ಆಗಬೇಕು. ಈ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರದ ನೂತನ ಶಾಸಕರು ಮತ್ತು ನಾನು ಸರ್ಕಾರ ಗಮನ ಸೆಳೆಯುತ್ತೇವೆ.
ಎಂ.ವೀರಪ್ಪ ಮೊಯಿಲಿ, ಮಾಜಿ ಸಂಸದ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ‌ಹೂ, ಹಣ್ಣು, ತರಕಾರಿ, ಹಾಲು ಪ್ರಮುಖ ಉತ್ಪನ್ನ. ಇವುಗಳ ಮೌಲ್ಯವರ್ಧನೆ, ಸಂಗ್ರಹ ಅಥವಾ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ದ್ರಾಕ್ಷಿ, ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳು ಬೆಲೆ ಕಳೆದುಕೊಂಡಾಗ ಸ್ಥಳೀಯವಾಗಿ ಅವುಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುವ ಕೈಗಾರಿಕೆಗಳು ಇಂದಿನ ತುರ್ತು ಅಗತ್ಯ. ಅವುಗಳಿಂದ ಉದ್ಯೋಗ ಸೃಷ್ಟಿ ಕೂಡ ಆಗುತ್ತದೆ. ಈ ಬೇಡಿಕೆ ಬಹುವರ್ಷಗಳಿಂದ ಇದೆ. ಆದರೆ, ಇಂದಿಗೂ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳು ಜಿಲ್ಲೆಯಲ್ಲಿ ಇಲ್ಲ. 

ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಬಳಿ ಕೈಗಾರಿಕಾ ಪ್ರಾಂಗಣ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರು ಮಾಡಿಸಿದ್ದೆ. ಆ ನಂತರ ಅಲ್ಲಿ ಯಾವುದೇ ಘಟಕಗಳು ತಲೆ ಎತ್ತಲಿಲ್ಲ. ಈಗಾಗಲೇ ಅಲ್ಲಿ ಕೈಗಾರಿಕಾ ನಿವೇಶಗಳು ಹಂಚಿಕೆ ಆಗಿವೆ. ಕೈಗಾರಿಕೋದ್ಯಮಿಗಳ ಸಭೆ ಕರೆಯುತ್ತೇನೆ. ಸಣ್ಣ ಕೈಗಾರಿಕೆಯಾಗಲಿ ದೊಡ್ಡ ಕೈಗಾರಿಕೆಯಾಗಲಿ ಕೂಡಲೇ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಏನಾದರೂ ತೊಂದರೆ ಸಮಸ್ಯೆಗಳು ಇದ್ದರೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡುತ್ತೇನೆ. ಕನಿಶೆಟ್ಟಿಹಳ್ಳಿ ಬಳಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು. ಕೈಗಾರಿಕೀಕರಣಕ್ಕೆ ಆದ್ಯತೆ ನೀಡಲಾಗುವುದು.
ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಚಿಕ್ಕಬಳ್ಳಾಪುರ

ನೆರೆಯ ಆಂಧ್ರಪ್ರದೇಶದಲ್ಲಿ ಕೊರಿಯಾ ದೇಶದ ಕಿಯಾ ಮೋಟರ್ಸ್ ಈಗಾಗಲೇ ದೊಡ್ಡ ಕೈಗಾರಿಕಾ ಘಟಕಗಳನ್ನು ಹೊಂದಿದೆ. ಅವರು ನೆರೆಯ ಬಾಗೇಪಲ್ಲಿಯಲ್ಲಿ ತಮ್ಮ ನೆಲೆ ವಿಸ್ತರಿಸಲು ಈ ಹಿಂದೆ  ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಸಹ ಮಾಡಿದ್ದರು. ಕೊರಿಯಾ ಕೈಗಾರಿಕೋದ್ಯಮಿಗಳು ಬಾಗೇಪಲ್ಲಿಯಲ್ಲಿ ಜಮೀನು ದೊರೆತರೆ ಘಟಕಗಳನ್ನು ಸ್ಥಾಪಿಸುವ ಮನಸ್ಸು ಹೊಂದಿದ್ದರು. ಆದರೆ ಜಮೀನು ದೊರೆಯದ ಕಾರಣ ಈ ಯೋಜನೆ ಕಾರ್ಯಗತವೂ ಆಗಿಲ್ಲ. 

ಮಂಚೇನಹಳ್ಳಿ ಕೈಗಾರಿಕಾ ಹಬ್ ನನೆಗುದಿಗೆ: ಮಂಚೇನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಕೈಗಾರಿಕೀಕರಣಕ್ಕೆ ಈ ಹಿಂದೆ 4,500 ಎಕರೆ ಸರ್ಕಾರಿ ಜಮೀನು ಸಹ ಗುರುತಿಸಲಾಗಿತ್ತು. ಆದರೆ ಇಷ್ಟು ದೊಡ್ಡ ಪ್ರಮಾಣದ ಸರ್ಕಾರಿ ಜಮೀನು ಒಂದೆಡೆಯೇ ಇಲ್ಲ. ಕೈಗಾರಿಕಾ ಹಬ್ ನಿರ್ಮಾಣಕ್ಕೆ ಜಮೀನು ಒಂದೆಡೆ ಇದ್ದರೆ ಅನುಕೂಲ. ಕೈಗಾರಿಕಾ ಹಬ್‌ ಪ್ರಕ್ರಿಯೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮಂಚೇನಹಳ್ಳಿಯಲ್ಲಿ ಸರ್ಕಾರಿ ಭೂಮಿ ಗರಿಷ್ಠ ಪ್ರಮಾಣದಲ್ಲಿ ಇದೆ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಮಂಚೇನಹಳ್ಳಿ ಕೈಗಾರಿಕಾ ಹಬ್ ಕಾರ್ಯರೂಪಕ್ಕೆ ಬರುತ್ತದೆಯೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ಬಳಿ ಗುರುತಿಸಿರುವ ಕೈಗಾರಿಕಾ ಪ್ರದೇಶವು 14 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ 1,300 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ಸಾವಿರ ಎಕರೆಯನ್ನು 270 ಘಟಕಗಳ ಕಾರ್ಯಾರಂಭಕ್ಕೆ ನೀಡಲಾಗಿದೆ ಎನ್ನಲಾಗುತ್ತಿದೆ. ಆದರೆ 13 ವರ್ಷಗಳಿಂದಲೂ ಒಂದೂ ಕಟ್ಟಡ ಅಥವಾ ಕಾಂಪೌಂಡ್ ಸಹ ಇಲ್ಲಿ ನಿರ್ಮಾಣವಾಗಿಲ್ಲ.

ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಬಳಿಯ ಕೈಗಾರಿಕಾ ಪ್ರದೇಶ ಮಾತ್ರ ಜಿಲ್ಲೆಯಲ್ಲಿ ಒಂದಿಷ್ಟು ಬೆಳವಣಿಗೆಗಳನ್ನು ಕಂಡಿದೆ. ಇದನ್ನು ಹೊರತುಪಡಿಸಿ ಉಳಿದ ಯಾವ ತಾಲ್ಲೂಕಿನಲ್ಲಿಯೂ ಕೈಗಾರಿಕೀಕರಣಕ್ಕೆ ಇಲ್ಲಿಯವರೆಗೂ ಆದ್ಯತೆ ದೊರೆತಿಲ್ಲ. ಶಿಡ್ಲಘಟ್ಟ ತಾಲ್ಲೂಕು ಕೈಗಾರಿಕೆಗಳ ವಿಚಾರದಲ್ಲಿ ಸಣ್ಣ ಮಟ್ಟದಲ್ಲಿಯೂ ಅಭಿವೃದ್ಧಿ ಕಂಡಿಲ್ಲ.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜಿಲ್ಲೆಯ ಕೈಗಾರಿಕೀಕರಣದ ಬೆಳವಣಿಗೆಗಳ ಬಗ್ಗೆ ಅಪಾರವಾದ ನಿರೀಕ್ಷೆಗಳು ಸಹ ಜನರಲ್ಲಿ ಮನೆ ಮಾಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT