ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಆಗ್ನೇಯ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಕಣ ಸಿದ್ದ

Published 7 ಮೇ 2024, 5:27 IST
Last Updated 7 ಮೇ 2024, 5:27 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆಯ ನಂತರ ಜಿಲ್ಲೆಯಲ್ಲಿ ಮತ್ತೊಂದು ಚುನಾವಣೆಗೆ ಕಣ ಸಿದ್ಧವಾಗಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿರುವುದು ಜಿಲ್ಲೆಯ ಶಿಕ್ಷಕ ಮತಕ್ಷೇತ್ರದಲ್ಲಿ ರಾಜಕಾರಣದ ಕಾವು ಹೆಚ್ಚಿಸಿದೆ. 

ಮೇ 9 ರಂದು ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಲಿದ್ದಾರೆ. ಈ ಮೂಲಕ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮೇ 16 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ನಾಮಪತ್ರಗಳ ಪರಿಶೀಲನೆ ಕಾರ್ಯ ಮೇ 17 ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕಡೆಯ ದಿನವಾಗಿದೆ. ಜೂ.3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಧಿ ನಿಗದಿಯಾಗಿದೆ. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ. 

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ, ಡಿಸೆಂಬರ್ 30 ರಂದು ಪ್ರಕಟಿಸಲಾದ ಮತದಾರರ ಪಟ್ಟಿ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3,510 ಮತದಾರರು ಇದ್ದಾರೆ. ಈ ಪೈಕಿ 2,074 ಪುರುಷ ಮತದಾರರು, 1,436 ಮಹಿಳಾ ಮತದಾರರು ಇದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ರಾಜಕಾರಣದ ಪರ್ವದ ಅಲೆ ಎದ್ದಿದೆ. ಕಾಂಗ್ರೆಸ್ ಪಕ್ಷವು 8 ತಿಂಗಳ ಹಿಂದೆಯೇ ಡಿ.ಟಿ.ಶ್ರೀನಿವಾಸ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ಮೂಲಕ ಬಹುಕಾಲದಿಂದ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆಗಳನ್ನು ಆಗಲೇ ಕಾಂಗ್ರೆಸ್ ಆರಂಭಿಸಿದೆ.

ಹಿರಿಯೂರು ಮಾಜಿ ಶಾಸಕ ಕೆ.ಪೂರ್ಣಿಮಾ ಅವರ ಪತಿ ಹಾಗೂ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌ ಅವರನ್ನು ಕಾಂಗ್ರೆಸ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂಟು ತಿಂಗಳಾಗಿದೆ. ಅಧಿಸೂಚನೆಗೂ ಮುನ್ನವೇ ಶ್ರೀನಿವಾಸ್ ಮೂಲಕ ಕಾಂಗ್ರೆಸ್ ‘ಆಟ’ ಆರಂಭಿಸಿತ್ತು. ಪೂರ್ಣಿಮಾ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಜಿಲ್ಲೆಯಲ್ಲಿ ನಡೆಸಿದ್ದಾರೆ. 

2020ರ ಅಕ್ಟೋಬರ್‌ನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಡಿ.ಟಿ.ಶ್ರೀನಿವಾಸ್‌ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕ್ಷೇತ್ರವನ್ನು ಸುತ್ತಾಡಿದ ಅವರು ಮತದಾರರ ನೋಂದಣಿ ಸಹ ಮಾಡಿಸಿದ್ದರು. ಚುನಾವಣೆಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇದೇ ಕಾರಣಕ್ಕೆ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು.

ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದಗೌಡಗೆ ಶ್ರೀನಿವಾಸ್ ಭಾರಿ ಪೈಪೋಟಿ ನೀಡಿದ್ದರು. ಚಿದಾನಂದ ಗೌಡ 30,976 ಮತ ಪಡೆದರೆ ಡಿ.ಟಿ.ಶ್ರೀನಿವಾಸ್ 23,851 ಮತ ಪಡೆದು ಎರಡನೇ ಸ್ಥಾನ ಪಡೆದರು. ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ 18,810 ಮತ್ತು ಕಾಂಗ್ರೆಸ್‌ನ ರಮೇಶ ಬಾಬು 9093 ಮತ ಪಡೆದಿದ್ದರು. ಹೀಗೆ ಪಕ್ಷೇತರ ಅಭ್ಯರ್ಥಿಯಾಗಿ ಉತ್ತಮ ಮತಗಳನ್ನು ಪಡೆಯುವ ಮೂಲಕ ಆ ಚುನಾವಣೆಯಲ್ಲಿ ಗಮನ ಸೆಳೆದಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪೂರ್ಣಿಮಾ ಹಾಗೂ ಶ್ರೀನಿವಾಸ್ ಬಿಜೆಪಿ ತೊರೆದು ‘ಕೈ’ ಹಿಡಿದರು. ಶ್ರೀನಿವಾಸ್ ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಅಗ್ನೇಯ ಶಿಕ್ಷಕರ ಕ್ಷೇತ್ರದ ಟಿಕೆಟ್ ಸಹ ದೊರೆತಿತು.  

ದಾವಣಗೆರೆ (ದಾವಣಗೆರೆ, ಹರಿಹರ, ಜಗಳೂರು), ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿವೆ.

ಕಮಲಕ್ಕೆ ಗೆಲುವು ತರುವರೇ ನಾರಾಯಣಸ್ವಾಮಿ: ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿ ಮತ್ತು ಜೆಡಿಎಸ್ ಇನ್ನೂ ಈ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಆದರೆ  ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರೇ ಮತ್ತೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. 

ನಾರಾಯಣಸ್ವಾಮಿ ಪಕ್ಷೇತರರಾಗಿ ಮೊದಲ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ನಂತರ ಈ ಕ್ಷೇತ್ರದಲ್ಲಿ ಪ್ರಬಲವಾದ ಹಿಡಿತವನ್ನೇ ಹೊಂದಿದ್ದಾರೆ. ಕೋಲಾರ ಜಿಲ್ಲೆಯವರಾದ ನಾರಾಯಣಸ್ವಾಮಿ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಉತ್ತಮವಾದ ಸಂಪರ್ಕ ಜಾಲವನ್ನು ಹೊಂದಿದ್ದಾರೆ. 

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಕ್ಷೇತ್ರ ಗಮನ ಸೆಳೆದಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆಯೇ ಇಲ್ಲವೇ ಎನ್ನುವ ಕುತೂಹಲ ಮನೆ ಮಾಡಿದೆ.  

ಈ ಎಲ್ಲ ಕಾರಣದಿಂದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಜಿಲ್ಲೆಯಲ್ಲಿ ಗಮನ ಸೆಳೆಯುತ್ತಿದೆ. ಅಧಿಸೂಚನೆಯ ನಂತರ ಈ ಕಾವು ಮತ್ತಷ್ಟು ಹೆಚ್ಚಲಿದೆ.

ಎಂಟು ತಿಂಗಳ ಮುನ್ನವೇ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್ ಬಿಜೆಪಿಯಿಂದ ಮತ್ತೆ ಕಣಕ್ಕೆ ಇಳಿಯುವರೇ ನಾರಾಯಣಸ್ವಾಮಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಿಂದ ಜಿಲ್ಲೆಯಲ್ಲಿ ಪ್ರಚಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT