ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಪರಿಶಿಷ್ಟರಿಗಿಲ್ಲ ಶೇ 18ರಷ್ಟು ಮಳಿಗೆ!

ಚಿಕ್ಕಬಳ್ಳಾಪುರ ನಗರಸಭೆಯಿಂದ ಪೌರಾಡಳಿತ ಇಲಾಖೆ ನಿಯಮಗಳೇ ಜಾರಿಯಿಲ್ಲ
ಡಿ.ಎಂ.ಕುರ್ಕೆ ಪ್ರಶಾಂತ್
Published 24 ಮಾರ್ಚ್ 2024, 7:20 IST
Last Updated 24 ಮಾರ್ಚ್ 2024, 7:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ವಾಣಿಜ್ಯ ಮಳಿಗೆಗಳ ವಿಲೇವಾರಿ ಸಮಯದಲ್ಲಿ ಶೇ 18ರಷ್ಟು ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹರಾಜು ಮೂಲಕ ವಿಲೇವಾರಿ ಮಾಡಲು ಸರ್ಕಾರದ ಆದೇಶವಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮದ ಪ್ರಕಾರ ಶೇ 18ರಷ್ಟು ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ವಿತರಿಸಬೇಕು.

ಆದರೆ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಈ ನಿಯಮ ಜಾರಿ ಆಗುತ್ತಿಲ್ಲ. ನಗರದ ಸಂತೆ ಮಾರುಕಟ್ಟೆಯಲ್ಲಿರುವ 98ಕ್ಕೂ ಹೆಚ್ಚು ಮಳಿಗೆಗಳು ಇವೆ. ನಗರಸಭೆಯ ಈ ಮಳಿಗೆಗಳನ್ನು 30 ವರ್ಷಗಳ ಹಿಂದೆ ಹರಾಜು ಹಾಕಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಮತ್ತೆ ಹರಾಜು ಪ್ರಕ್ರಿಯೆಯೇ ನಡೆದಿಲ್ಲ. ಪೌರಾಡಳಿತ ಇಲಾಖೆಯ ಪ್ರಕಾರ 12 ವರ್ಷಗಳಿಗೆ ಒಮ್ಮೆ ಹರಾಜು ಪ್ರಕ್ರಿಯೆ ನಡೆಯಬೇಕು. ಇಷ್ಟು ಸುದೀರ್ಘ ಅವಧಿಯಿಂದ ನಗರಸಭೆಯು ಈ ವಿಚಾರವಾಗಿ ಮೌನವಾಗಿಯೇ ಇದೆ.

ಸಂತೆ ಮಾರುಕಟ್ಟೆಯಲ್ಲಿರುವ ಮಳಿಗೆಗಳಲ್ಲಿ ಎಷ್ಟು ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಡಿಗೆದಾರರು ಇದ್ದಾರೆ, ನಿಯಮಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ ಎಂದರೆ ನಿರಾಸೆಯ ಉತ್ತರ ದೊರೆಯುತ್ತದೆ.

ಈ ಮಳಿಗೆ ಹರಾಜು ವೇಳೆ ಶೇ 18ರ ನಿಯಮ ಪಾಲಿಸಬೇಕು ಎಂದು ಜನವರಿಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಗರಸಭೆ ಸದಸ್ಯರು ಮನವಿ ಸಹ ಮಾಡಿದ್ದಾರೆ.

ನಗರಸಭೆಯಲ್ಲಿ ಇತ್ತೀಚೆಗೆ ನಡೆದ ಬಜೆಟ್ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಯಿತು. ‘ಒಂದು ವೇಳೆ ಬಾಡಿಗೆ ಹೆಚ್ಚಿಸಿ ಈಗ ಇರುವವರನ್ನೇ ಮುಂದುವರಿಸಿದರೆ ಶೇ 18ರಷ್ಟು ನಿಯಮ ಪಾಲನೆ ಆಗುವುದಿಲ್ಲ. ಪರಿಶಿಷ್ಟರು ಮತ್ತೆ ಕಡೆಗಣನೆಗೆ ಒಳಗಾಗುವುದಿಲ್ಲವೇ’ ಎಂದು ಈ ಸಮುದಾಯದ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಗರಸಭೆಯ ಈ ಮಳಿಗೆ ಹರಾಜಿಗೆ ಸಂಬಂಧಿಸಿದಂತೆ 2021ನೇ ಸಾಲಿನಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ. ಹೀಗಿದ್ದರೂ ಹರಾಜು ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. 

ರಾಜಕೀಯ ಪ್ರಭಾವ: ಪರಿಶಿಷ್ಟರಿಗೆ ಮಳಿಗೆಗಳು ದೊರೆಯದಂತೆ ಮತ್ತು ಈಗ ಇರುವ ಸ್ಥಿತಿಯಲ್ಲಿಯೇ ಮಳಿಗೆಗಳ ಬಾಡಿಗೆದಾರರನ್ನು ಮುಂದುವರಿಸಲು ರಾಜಕೀಯ ಪ್ರಭಾವಗಳು ಕೆಲಸ ಮಾಡುತ್ತಿವೆ ಎನ್ನುತ್ತಾರೆ ನಗರಸಭೆ ಸದಸ್ಯರು.

ಉಪಬಾಡಿಗೆ: ಸಂತೆ ಮಾರುಕಟ್ಟೆಯಲ್ಲಿನ ಅಂಗಡಿ ಮಳಿಗೆಗಳನ್ನು ಬಾಡಿಗೆ ಪಡೆದಿರುವವರಲ್ಲಿ ಬಹಳಷ್ಟು ಮಂದಿ ಉಪಬಾಡಿಗೆಗೂ ನೀಡಿದ್ದಾರೆ. ಮೂಲ ಬಾಡಿಗೆ ಮತ್ತು ಉಪಬಾಡಿಗೆಗೂ ಹೆಚ್ಚಿನ ವ್ಯತ್ಯಾಸವಿದೆ. ನಗರಸಭೆಗೆ ₹ 2 ಸಾವಿರ ಬಾಡಿಗೆ ಪಾವತಿಸಿದರೆ ಅದೇ ಮಳಿಗೆಯನ್ನು ಆರೇಳು ಸಾವಿರಕ್ಕೆ ಉಪಬಾಡಿಗೆ ನೀಡಿದ್ದಾರೆ. 

ನಗರಸಭೆ ಪೌರಾಯುಕ್ತರು ಮಳಿಗೆ ಹರಾಜಿಗೆ ಸಂಬಂಧಿಸಿದಂತೆ ಈ ಹಿಂದೆ ಬಾಡಿಗೆದಾರರಿಗೆ ನೋಟಿಸ್‌ಗಳನ್ನು ಸಹ ನೀಡಿದ್ದರು. ನಂತರ ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮತ್ತು ಶಾಸಕ ಪ್ರದೀಪ್ ಈಶ್ವರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಆ ನಂತರ ಯಾವುದೇ ಪ್ರಕ್ರಿಯೆಗಳು ಮುಂದುವರಿಯಲಿಲ್ಲ. 

ನಗರಸಭೆಯ ಆಡಳಿತ ವರ್ಗಕ್ಕೆ ಈ ಯಾವುದೂ ಉಲ್ಲಂಘನೆಯಾಗಿಯೇ ಕಾಣುತ್ತಿಲ್ಲ. ಶೇ 18ರ ನಿಯಮ ಜಾರಿಗಿಂತ ಬಾಡಿಗೆ ಹೆಚ್ಚಿಸಿ ಕೈತೊಳೆದುಕೊಳ್ಳುವ ಹುನ್ನಾರಗಳು ಸಹ ನಡೆಯುತ್ತಿವೆ ಎನ್ನುವ ದೂರುಗಳು ಇವೆ.

ನಾಗರಾಜ್
ನಾಗರಾಜ್
ಕೆ.ಸಿ.ರಾಜಾಕಾಂತ್
ಕೆ.ಸಿ.ರಾಜಾಕಾಂತ್

ಬಹುಸಂಖ್ಯೆಯ ಪರಿಶಿಷ್ಟರಿಗೆ ಅನ್ಯಾಯ ಚಿಕ್ಕಬಳ್ಳಾಪುರ ನಗರ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರೇ ಬಹುಸಂಖ್ಯಾತರು. ಆದರೆ ಸಂತೆ ಮಾರುಕಟ್ಟೆಯಲ್ಲಿನ ಮಳಿಗೆಗಳ ವಿಚಾರದಲ್ಲಿ ಈ ಸಮುದಾಯಗಳಿಗೆ ಅನ್ಯಾಯವಾಗಿದೆ ಎನ್ನುವ ಮಾತು ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಜ್ಞಾವಂತರಲ್ಲಿ ಇದೆ. 

‘ತಾರತಮ್ಯ ಸರಿಪಡಿಸಬೇಕು’ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಬೇಕಾದ ಮಳಿಗೆಗಳು ಬಲಾಢ್ಯ ಸಮುದಾಯಗಳ ಪಾಲಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದೇವೆ. ಲೋಪದೋಷಗಳನ್ನು ಸರಿಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಈಗ ಇರುವವರಿಗೆ ಬಾಡಿಗೆ ಹೆಚ್ಚಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮತ್ತೆ ಅನ್ಯಾಯ ಆಗುವುದಿಲ್ಲವೇ. ತಾರತಮ್ಯವನ್ನು ಸರಿಪಡಿಸಬೇಕು ಎನ್ನುವುದೇ ನಮ್ಮ ಒತ್ತಾಯ. ಮಟಮಪ್ಪ ನಗರಸಭೆ ಸದಸ್ಯ ಚಿಕ್ಕಬಳ್ಳಾಪುರ *** 12 ವರ್ಷಗಳಿಗೆ ಒಮ್ಮೆ ಹರಾಜು ಆಗಬೇಕು. ಪರಿಶಿಷ್ಟ ಸಮುದಾಯಕ್ಕೆ ನಗರಸಭೆಯಿಂದ ಅನ್ಯಾಯ ಆಗಬಾರದು. ಸಂತೆ ಮಾರುಕಟ್ಟೆಯಲ್ಲಿನ ಮಳಿಗೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 18ರಷ್ಟು ಮಳಿಗೆಗಳು ದೊರೆಯಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ.  ನಾಗರಾಜ್ ನಗರಸಭೆ ಸದಸ್ಯ ಚಿಕ್ಕಬಳ್ಳಾಪುರ *** ಜಾಣ ಕುರುಡುತನ ಸರ್ಕಾರದ ಸುತ್ತೋಲೆಗಳು ನಿಯಮಗಳನ್ನು ಜಾರಿಗೊಳಿಸಬೇಕಾದ ಅಧಿಕಾರಿ ವರ್ಗದ ಜಾಣ ಕುರುಡುತನ ತೋರಿದರೆ ಪರಿಶಿಷ್ಟ ಜಾತಿ ಮತ್ತು ಪಂಡಗಡವರು ಸೌಲಭ್ಯಗಳಿಂದ ವಂಚನೆ ಆಗಬೇಕಾಗುತ್ತದೆ. ಇಂತಹ ಸ್ಥಿತಿ ಈ ಮಳಿಗೆಗಳ ವಿಚಾರದಲ್ಲಿ ಆಗಿದೆ. ಇಷ್ಟು ವರ್ಷಗಳಾದರೂ ಪರಿಶಿಷ್ಟರಿಗೆ ನ್ಯಾಯ ದೊರೆತಿಲ್ಲ. ಕೆ.ಸಿ.ರಾಜಾಕಾಂತ್ ದಲಿತ ಸಂಘರ್ಷ ಸಮಿತಿ ಮುಖಂಡ ಚಿಕ್ಕಬಳ್ಳಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT