ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ತಾತ್ಸಾರ; ಕೈ ತಪ್ಪಿತು ಜಮೀನು

ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಗೆ ಚಿತ್ರಾವತಿ ಬಳಿ ನೀಡಿದ ಜಾಗ ವಾಪಸ್ ಪಡೆದ ಜಿಲ್ಲಾಡಳಿತ
Last Updated 30 ಜನವರಿ 2023, 10:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಚೇರಿಗೆ ಕಟ್ಟಡಗಳ ನಿರ್ಮಾಣ ಸೇರಿದಂತೆ ಯಾವುದೇ ವಿಚಾರಗಳಿಗೆ ಸರ್ಕಾರ ಜಮೀನು ಮಂಜೂರು ಮಾಡಿದರೆ ಆ ಜಾಗವನ್ನು ನಿಗದಿತ ಸಮಯದ ಒಳಗೆ ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ಭೂ ಮಂಜೂರಾತಿ ಅಧಿನಿಯಮದ ಅನ್ವಯ ಸರ್ಕಾರ ಆ ಜಮೀನು ಮಂಜೂರು ಆದೇಶ ರದ್ದುಪಡಿಸಿ ಜಮೀನು ಅಥವಾ ನಿವೇಶನವನ್ನು ವಾಪಸ್ ಪಡೆಯುತ್ತದೆ.

ಈ ಕಾರಣದಿಂದ ಸಾಮಾನ್ಯವಾಗಿ ಯಾವುದೇ ಇಲಾಖೆಗಳು, ಸಂಘ ಸಂಸ್ಥೆಗಳು ತಮಗೆ ಜಮೀನು ಮಂಜೂರು ಮಾಡಿದರೆ ಅವುಗಳನ್ನು ನಿಗದಿತ ಸಮಯದ ಒಳಗೆ ಬಳಕೆ ಮಾಡಿಕೊಳ್ಳುತ್ತವೆ. ಆದರೆ ಚಿಕ್ಕಬಳ್ಳಾಪುರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿದ್ದ 25 ಗುಂಟೆ ಜಮೀನನ್ನು ಜಿಲ್ಲಾಡಳಿತ ವಾಪಸ್ ಪಡೆದಿದೆ. ಮಂಡಳಿಯ ಅಧಿಕಾರಿಗಳು ಜಮೀನನ್ನು ಬಳಸಿಕೊಳ್ಳುವಲ್ಲಿ ತೋರಿದ ನಿರ್ಲಕ್ಷ್ಯದಿಂದ ಜಮೀನು ಮಂಡಳಿಯ ಕೈ ತಪ್ಪಿದೆ. ಸರ್ಕಾರಿ ಇಲಾಖೆಯೊಂದು ಸರ್ಕಾರವೇ ಮಂಜೂರು ಮಾಡಿದ್ದ ಜಮೀನನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.

ಬಾಡಿಗೆ ಕಟ್ಟಡವೇ ಗತಿ: ನಗರದ ಎಚ್‌.ಎಚ್‌.ಗಾರ್ಡನ್‌ನ ಆಟೊ ನಿಲ್ದಾಣದ ಬಳಿಯ ಮನೆಯೊಂದರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಾರ್ಯನಿರ್ವಹಿಸುತ್ತಿದೆ. 2009ರಿಂದಲೂ ಈ ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ. ಸ್ವಂತ ಕಚೇರಿಗೆ ಕಟ್ಟಡ ಅಗತ್ಯವಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 2016ರ ನವೆಂಬರ್‌ನಲ್ಲಿ ನಗರದ ಹೊರವಲಯದ ಹೊನ್ನೇನಹಳ್ಳಿ ಗ್ರಾಮ ವ್ಯಾಪ್ತಿಯ ಚಿತ್ರಾವತಿ ಬಳಿ ಸರ್ವೆ ನಂ 26/1ರಲ್ಲಿ 25 ಗುಂಟೆ ಜಮೀನನ್ನು ಮಂಡಳಿಗೆ ಮಂಜೂರು ಮಾಡಿತು.

ಜಿಲ್ಲಾಡಳಿತ ಮಂಡಳಿಗೆ ಮಂಜೂರು ಮಾಡಿರುವ ಜಾಗದಲ್ಲಿ ‘ಈ ಸ್ವತ್ತು ಸರ್ವೆ ನಂಬರ್ ಹೊನ್ನೇನಹಳ್ಳಿ ಗ್ರಾಮ 25 ಗುಂಟೆ ಜಾಗವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ. ಅತಿಕ್ರಮಣವನ್ನು ನಿಷೇಧಿಸಲಾಗಿದೆ’ ಎನ್ನುವ ಬೋರ್ಡ್ ಇಂದಿಗೂ ಇದೆ. ಹಲವು ವರ್ಷಗಳ ಹಿಂದೆಯೇ ಇಲ್ಲಿ ನಾಮಫಲಕ ಅಳವಡಿಸಲಾಗಿದೆ. ಈಗ ಅದರಲ್ಲಿನ ಅಕ್ಷರಗಳು ಅಸ್ಪಷ್ಟವಾಗಿದೆ. ಈ ಅಸ್ಪಷ್ಟವೇ ಜಮೀನು ಬಳಕೆಯ ವಿಚಾರದಲ್ಲಿ ತೋರಿರುವ ತಾತ್ಸಾರಕ್ಕೆ ರೂಪಕದಂತೆ ಕಾಣುತ್ತದೆ.

ಈ ಜಮೀನು ಅತ್ಯುತ್ತಮವಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಆರ್‌ಟಿಒ), ಸುಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಇದೆ. ರಾಷ್ಟ್ರೀಯ ಹೆದ್ದಾರಿ ಕೂಗಳತೆಯ ದೂರದಲ್ಲಿ ಹಾದು ಹೋಗುತ್ತದೆ. ಹೀಗೆ ಉತ್ತಮವಾದ ಜಮೀನು ಮಂಡಳಿಗೆ ಮಂಜೂರಾದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

‘ಐದು ವರ್ಷಗಳಾದರೂ ಕಾಮಗಾರಿ ನಡೆಸಿಲ್ಲ. ಆದ ಕಾರಣ ಜಮೀನು ವಾಪಸ್ ಪಡೆಯಲಾಗಿದೆ’ ಎಂದು 2021ರ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅವರು ತಹಶೀಲ್ದಾರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮಂಡಳಿಗೆ ನೀಡಿದ್ದ ಜಮೀನನ್ನು ಜಿಲ್ಲಾಡಳಿತ ವಾಪಸ್ ಪಡೆದು ‘ಪಾಲಿ ಕ್ಲಿನಿಕ್‌’ ನಿರ್ಮಾಣಕ್ಕೆ ಪಶುಸಂಗೋಪನಾ ಇಲಾಖೆಗೆ ನೀಡಿದೆ ಎನ್ನಲಾಗಿದೆ.

ಈಗ ಮತ್ತೆ ಮಂಡಳಿಯ ಅಧಿಕಾರಿಗಳು ಜಮೀನು ನೀಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಅಣಕನೂರು ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಬಳಿ ಜಮೀನು ದೊರೆಯುವ ಆಶಾಭಾವವನ್ನು ವ್ಯಕ್ತಪಡಿಸುತ್ತಾರೆ. ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಯಾವುದೇ ಅನುದಾನವನ್ನು ಸರ್ಕಾರ ನೀಡಲಿಲ್ಲ. ಈ ಕಾರಣದಿಂದ ಕಟ್ಟಡ ನಿರ್ಮಾಣ ವಿಳಂಬವಾಯಿತು ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT