ಗೌರಿಬಿದನೂರು: ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ತಾಲ್ಲೂಕಿನ ಮೂರು ಠಾಣೆಗಳ ವ್ಯಾಪ್ತಿಯ ರೌಡಿ ಶೀಟರ್‌ಗಳ ಪರೇಡ್ ನಡೆಯಿತು.
‘ಸಮಾಜದಲ್ಲಿ ಶಾಂತಿ ಕದಡಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟಲಾಗುವುದು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಎಚ್ಚರಿಕೆ ನೀಡಿದರು.
‘ಯಾರೂ ರೌಡಿಗಳಾಗಬೇಕೆಂದು ಬಯಸುವುದಿಲ್ಲ. ಸಮಯ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಕೊಲೆ, ಕೋಮುಗಲಭೆ, ಕಳ್ಳತನ, ಗಲಾಟೆ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಈ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಒಮ್ಮೆ ಕಳಂಕ ಹೊತ್ತುಕೊಂಡರೆ ಅಳಿಸುವುದು ಕಷ್ಟ. ಆದ್ದರಿಂದ ಯೋಚಿಸಿ ಮುನ್ನಡೆಯಬೇಕು. ಹಳೆಯ ತಪ್ಪು ಮರುಕಳಿಸಿದರೆ ನಾವು ನಮ್ಮ ಕೆಲಸ ಮಾಡಬೇಕಾಗುತ್ತದೆ. ಕೋಮು ಗಲಭೆಗಳಲ್ಲಿ ಭಾಗವಹಿಸುವುದು, ಅವುಗಳಿಗೆ ಕುಮ್ಮಕ್ಕು ನೀಡುವುದು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದರು.
‘ಸಮಾಜವನ್ನು ಸರಿ ದಾರಿಯಲ್ಲಿ ಕರೆದೊಯ್ಯಬೇಕಾದ ಉನ್ನತ ಹುದ್ದೆಗಳಲ್ಲಿ ಇರುವವರು ಕೆಲ ಅನಿವಾರ್ಯ ಸಂದರ್ಭಗಳಲ್ಲಿ ರೌಡಿ ಶೀಟರ್‌ಗಳಾಗಿರುತ್ತಾರೆ.
ತಾಲ್ಲೂಕಿನ ಗಲಾಟೆ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ನಿವೃತ್ತ ಯೋಧ, ಶಿಕ್ಷಕ ಹಾಗೂ ಹೈಕೋರ್ಟ್ ವಕೀಲ ಸೇರಿ 98 ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು.
ರೌಡಿ ಪಟ್ಟಿಯಿಂದ ಬಿಡುಗಡೆಗೆ ಶಿಫಾರಸು: ‘ಸಮಾಜಕ್ಕೆ ಬುದ್ದಿ ಹೇಳಬೇಕಾದ ನೀವೇ ರೌಡಿಗಳಾದರೆ ಹೇಗೆ? ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದೀರಿ, ನಿಮಗೆ ನೈತಿಕತೆ ಇದೆಯೇ ಎಂದು ನಿವೃತ್ತ ಯೋಧ, ವಕೀಲ ಹಾಗೂ ಶಿಕ್ಷಕನಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್ ಬುದ್ದಿವಾದ ಹೇಳಿದರು. ಸಮಾಜಕ್ಕೆ ಮಾದರಿಯಾಗಿ ನಡೆದುಕೊಳ್ಳುವಂತೆ ಹೇಳಿ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಾಯಗೊಳಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಯಿತು. ಸಕ್ಕರೆ ಕಾಯಿಲೆಯಿಂದ ಕಾಲು ಕಳೆದುಕೊಂಡಿರುವ ರೌಡಿಯೊಬ್ಬನನ್ನು ಪಟ್ಟಿಯಿಂದ ಬಿಡುಗಡೆ ನೀಡಲು ಶಿಫಾರಸು ಮಾಡಲಾಗಿದೆ.
ಯಾವುದೇ ಅಪರಾಧ ಪ್ರಕರಣ ಇಲ್ಲದಿದ್ದರೂ ವ್ಯಕ್ತಿಯ ಮೇಲೆ ರೌಡಿ ಶೀಟರ್ ಹಾಕಲಾಗಿತ್ತು. ಅದನ್ನು ರೌಡಿಪಟ್ಟಿಯಿಂದ ತೆಗೆಯಲು ಶಿಫಾರಸು ಮಾಡಲಾಗಿದೆ ಎಂದರು.
ನಗರ ಪೊಲೀಸ್ ಠಾಣೆ ಎಸ್ಐ ಗೋಪಾಲ್, ಚಂದ್ರಕಲಾ, ಗ್ರಾಮಾಂತರ ಠಾಣೆ ಎಸ್ಐ ರಮೇಶ್ ಗುಗ್ಗರಿ, ಮಂಚೇನಹಳ್ಳಿ ಠಾಣೆ ಎಸ್ಐ ಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.