ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಗಮನ ಸೆಳೆಯುತ್ತಿದೆ ಕಲ್ಲಿನಾಯಕನಹಳ್ಳಿ ಶಾಲೆ

ಗೌರಿಬಿದನೂರು ತಾಲ್ಲೂಕು; ದಾನಿಗಳ ನೆರವಿನಿಂದ ಬೆಳವಣಿಗೆ
ನರಸಿಂಹಮೂರ್ತಿ ಕೆ.ಎನ್
Published 30 ಮಾರ್ಚ್ 2024, 8:42 IST
Last Updated 30 ಮಾರ್ಚ್ 2024, 8:42 IST
ಅಕ್ಷರ ಗಾತ್ರ

ಗೌರಿಬಿದನೂರು: ಶಿಕ್ಷಕರ ಸೇವಾ ಮನೋಭಾವ, ಗ್ರಾಮಸ್ಥರ ಸಹಕಾರ, ಮಕ್ಕಳಲ್ಲಿ ಕಲಿಯುವ ಹುಮ್ಮಸ್ಸು ಇಷ್ಟಿದ್ದರೆ ಸಾಕು ಯಾವುದೇ ಸರ್ಕಾರಿ ಶಾಲೆ ಮಹತ್ವ ಪೂರ್ಣವಾಗಿ ಅಭಿವೃದ್ಧಿ ಹೊಂದುತ್ತದೆ. ಇದಕ್ಕೆ ನಿದರ್ಶನ ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿ ಸರ್ಕಾರಿ ಶಾಲೆ. ಇಲ್ಲಿ ಒಂದರಿಂದ 10ರ ವರೆಗೆ ತರಗತಿಗಳು ನಡೆಯುತ್ತಿವೆ.

ಇಲ್ಲಿನ ಶಿಕ್ಷಕರ ಪರಿಶ್ರಮ ಅಪಾರ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಮುತುವರ್ಜಿ ವಹಿಸಿ ಬೋಧಿಸುವ ರೀತಿ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ. ಕಲಿಕೆಯ ಜೊತೆಗೆ ಶಾಲೆಯ ವಾತಾವರಣವನ್ನು ನೋಡಿದರೆ ಉತ್ತಮ ಎನ್ನುವ ಮಾತು ಬರುತ್ತದೆ. 

ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸುವುದು, ಪರಿಸರ ಸಂರಕ್ಷಣೆ, ಕೈ ತೋಟ ಬೆಳೆಸುವುದು, ನೀರಿನ ಮಿತ ಬಳಕೆ, ತ್ಯಾಜ್ಯ ನಿರ್ವಹಣೆ, ಜೀವನದ ಮೌಲ್ಯಗಳನ್ನು ತಿಳಿಸುವುದು ಹೀಗೆ ಅನೇಕ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತಿದೆ. 

ದೇವರಹಳ್ಳಿ, ಕ್ರಿಶ್ಚಿಯನ್ ಕಾಲೊನಿ, ಬಂದಾರ್ಲಹಳ್ಳಿ, ಬಸವಾಪುರ ಇನ್ನು ಹಲವು ಗ್ರಾಮಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳು ಬರುವರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. 

ಶಾಲೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಶಿಕ್ಷಣ ಇಲಾಖೆ ಮತ್ತು ಪಂಚಾಯಿತಿ ಒದಗಿಸಿದೆ.   ಹೆಣ್ಣುಮಕ್ಕಳಿಗೆ ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಶಾಲೆಯಲ್ಲಿ ಶುದ್ಧ ಕುಡಿ‌ಯುವ ನೀರಿನ ಘಟಕ ಸಹ ಇದೆ.

 Corteva ಅಗ್ರಿ ಸೈನ್ಸ್ ಸಂಸ್ಥೆಯು ಶಾಲೆಗೆ ಕಂಪ್ಯೂಟರ್, ಪ್ರೋಜೆಕ್ಟರ್, ಎಲ್ಲಾ ಕೊಠಡಿಗಳಿಗೂ ಗ್ರೀನ್ ಬೋರ್ಡ್, ಫ್ಯಾನ್‌ಗಳನ್ನು ಕೊಡುಗೆಯಾಗಿ ನೀಡಿದೆ. ಎ.ಸಿ.ಸಿ. ಕಾರ್ಖಾನೆಯವರು ಡೆಸ್ಕ್ ನೀಡಿದ್ದಾರೆ.
ಗ್ರಾಮದ ಮುಖಂಡರು, ಸ್ಮಾರ್ಟ್ ಟಿವಿ ಮತ್ತು ಪ್ರಿಂಟರ್ ನೀಡಿದ್ದಾರೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನ ಲ್ಯಾಬ್ ನೀಡಿದೆ. ಹೀಗೆ ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. 

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಸಹ ಮಹತ್ವದ ಪಾತ್ರವಹಿಸುತ್ತಿದೆ. ಎಸ್‌ಡಿಎಂಸಿಯು ಕಾಲಕಾಲಕ್ಕೆ ಪೋಷಕರ ಸಭೆಗಳನ್ನು ಕರೆದು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ನೀಡುತ್ತಿದೆ. ಈ ಸಭೆಯಿಂದ ಶಿಕ್ಷಕರು ಮತ್ತು ಪೋಷಕರ ನಡುವೆ ಬಂಧ ಮತ್ತಷ್ಟು ಗಟ್ಟಿಯಾಗಿದೆ.

ಪಠ್ಯದ ಜೊತೆಗೆ ಕಲ್ಲಿನಾಯಕನಹಳ್ಳಿ ಶಾಲೆಯು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿದೆ.  ಶಾಲೆಯಲ್ಲಿ ನಿರಂತರವಾಗಿ ಪ್ರತಿಭಾ ಕಾರಂಜಿ, ರಸಪ್ರಶ್ನೆ, ವಾಲಿಬಾಲ್, ಥ್ರೋ ಬಾಲ್ ಕ್ರೀಡೆಗಳು ಸೇರಿದಂತೆ ಇನ್ನೂ ಹಲವು ಬಗೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಸಾಂಸ್ಕೃತಿಕ ಮತ್ತು ಕ್ರೀಡಾ ಆಸಕ್ತಿಯು ಹೆಚ್ಚುತ್ತಿದೆ. 

ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು ಮಕ್ಕಳ ಜ್ಞಾನ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುತ್ತಿದೆ. ಗ್ರಂಥಾಲಯದಲ್ಲಿ ದೊಡ್ಡ ಮಟ್ಟದಲ್ಲಿ ಪುಸ್ತಕಗಳು ಇವೆ. ಮಕ್ಕಳ ಜ್ಞಾನರ್ಜನೆಗಾಗೆ ಗ್ರಂಥಾಲಯ ಮತ್ತು ವಿಜ್ಞಾನ ಗ್ರಂಥಾಲಯದ ನಿರ್ಮಾಣವಾಗಿದೆ. ವಿಜ್ಞಾನ ಗ್ರಂಥಾಲಯವು ಮಕ್ಕಳಿಗೆ ವೈಜ್ಞಾನಿಕ ವಿಷಯಗಳ ಬಗ್ಗೆ ತಿಳಿಯಲು ನೆರವಾಗಿದೆ.

ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಗಿಡಗಳ ಪೋಷಣೆ ಮತ್ತು ಕೈ ತೋಟ ನಿರ್ವಹಣೆಯು ಶಾಲೆಯಲ್ಲಿ ನಡೆಯುತ್ತಿದೆ. ಕೈ ತೋಟದ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತಿದೆ. 

ಎಸ್. ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದ ವೇಳೆ ಶಾಲೆಗೆ ಭೇಟಿ ನೀಡಿದ್ದರು. ಇಲ್ಲಿನ ಪರಿಸರ ಮತ್ತು ಮಕ್ಕಳ ಕಲಿಕೆಯ ಬಗ್ಗೆ ಮನಸಾರೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಶಿಕ್ಷಕರ ಮುತುವರ್ಜಿ, ‌ಪೋಷಕರ ಸಹಕಾರ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಶಾಲೆ ತಾಲ್ಲೂಕಿನಲ್ಲಿ ಮಾದರಿ ಎನಿಸಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿಯು ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 

ಹೀಗೆ ತಾಲ್ಲೂಕಿನ ಗ್ರಾಮೀಣ ಶಾಲೆಯೊಂದು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಗಮನ ಸೆಳೆಯುತ್ತಿದೆ.

ಗಿಡ ಮರಗಳಿಂದ ಆವರಿಸಿರುವ ಕಲ್ಲಿನಾಯಕನಹಳ್ಳಿ ಶಾಲೆ
ಗಿಡ ಮರಗಳಿಂದ ಆವರಿಸಿರುವ ಕಲ್ಲಿನಾಯಕನಹಳ್ಳಿ ಶಾಲೆ

200ಕ್ಕೂ ಹೆಚ್ಚು ವಿದ್ಯಾರ್ಥಿಗಳ ವ್ಯಾಸಂಗ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಕೈ ತೋಟ  ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ದಾಖಲಾತಿ

ಖಾಸಗಿ ಶಾಲೆಗಳ ತೀವ್ರ ಸ್ಪರ್ಧೆಯ ನಡುವೆಯೂ ನಮ್ಮ ಶಾಲಾ ಶಿಕ್ಷಕರ ಶ್ರಮ ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.

-ನರಸಮ್ಮ ಮುಖ್ಯಶಿಕ್ಷಕಿ ಕಲ್ಲಿನಾಯಕನಹಳ್ಳಿ ಶಾಲೆ ಗೌರಿಬಿದನೂರು

ಶಿಕ್ಷಕರ ಸಂಕಲ್ಪ ಗ್ರಾಮಸ್ಥರ ಸಹಕಾರದಿಂದ ಮತ್ತು ಮಕ್ಕಳ ಜ್ಞಾನದ ಹಸಿವು ಕಲ್ಲಿನಾಯಕನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದೆ.

- ಶ್ರೀನಿವಾಸ ಮೂರ್ತಿ. ಕ್ಷೇತ್ರ ಶಿಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT