ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಟಂಬಸ್ಥರಿಂದಲೇ ಮಕ್ಕಳ ಮೇಲೆ ದೌರ್ಜನ್ಯ ನಡೆದ ಘಟನೆಗಳು ವರದಿಯಾಗಿವೆ: ಸುಧಾಕರ್

Published 4 ಜುಲೈ 2024, 14:32 IST
Last Updated 4 ಜುಲೈ 2024, 14:32 IST
ಅಕ್ಷರ ಗಾತ್ರ

ಬಾಗೇಪಲ್ಲಿ: ವಿದ್ಯಾಭ್ಯಾಸ ಜತೆಗೆ ಭವಿಷ್ಯದ ಬಗ್ಗೆ ಆಲೋಚಿಸಿ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ತಾಲ್ಲೂಕು ಶಿಶು ಕಲ್ಯಾಣಾಧಿಕಾರಿ ರಾಮಚಂದ್ರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಪಟ್ಟಣದ ಪಿಎಂಶ್ರೀ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕಾನೂನು ಸೇವೆ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪದವಿ ಪೂರ್ವ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಮಹಿಳಾ ಸಬಲಿಕರಣ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಶಕ್ತಿ ಯೋಜನೆಯಡಿ ವಿಶೇಷ ಅರಿವು ಹಾಗೂ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿಕ್ಷಣ ಜತೆಗೆ ಮಕ್ಕಳ ಭವಿಷ್ಯದ ಸಮಾಜದ ಆಗು ಹೋಗು ಘಟನೆಗಳ ಬಗ್ಗೆ ಅರಿವು ಮೂಡಿಸಬೇಕು. ನಂಬಿಸಿ ಮೋಸ ಮಾಡುವುದರಿಂದ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗುತ್ತದೆ. ಬಾಲಕಿಯರು ಆಸ–ಆಮಿಷ, ಹಣ ಹಾಗೂ ಪ್ರಚೋದನೆಗೆ ಒಳಗಾಗದೆ ಪ್ರತಿಕ್ಷಣ ಎಚ್ಚರಿಕೆಯಿಂದ ಇರಬೇಕು. ಬಾಲಕಿಯರು ಮಗುವಿಗೆ ಜನ್ಮ ನೀಡುವ ಹೃದಯ ವಿದ್ರಾವಕ ಘಟನೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಆತ್ಯಾಚಾರ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಬಾಲ್ಯವಿವಾಹ ತಡೆಯಬೇಕು. ಬಾಲ್ಯವಿವಾಹ ಮಾಡಿದರೆ ಮಕ್ಕಳ ಸಹಾಯವಾಣಿ 1098 ಅಥವಾ 112 ಕರೆ ಮಾಡಬಹುದು ಎಂದು ತಿಳಿಸಿದರು.

ಹಿರಿಯ ವಕೀಲ ಎ.ಜಿ.ಸುಧಾಕರ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಯಾರನ್ನು ನಂಬುವ ಪರಿಸ್ಥಿತಿ ಇಲ್ಲ. ಕುಟುಂಬ ಸದಸ್ಯರೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆಗಳು ವರದಿಯಾಗಿವೆ. ಯುವಕರ ಪ್ರಚೋದನೆಗಳಿಗೆ ಒಳಗಾಗಿ ಅನೇಕ ಬಾಲಕಿಯರು ತಮ್ಮ ಭವಿಷ್ಯ ಹಾಳು ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ತನುಜಾ, ತಾಲ್ಲೂಕು ಸಮನ್ವಯಧಿಕಾರಿ ವೆಂಕಟರಾಮಪ್ಪ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ, ಶಿಕ್ಷಣ ಅಧಿಕಾರಿಗಳಾದ ಪದ್ಮಾವತಿ, ಬಾಲರಾಜು, ಶಿಶು ಕಲ್ಯಾಣಾಧಿಕಾರಿ ಕಚೇರಿ ಮೇಲ್ವಿಚಾರಕಿ ಅನ್ಸೂಬಾಯಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ವಿ.ಆದಿನಾರಾಯಣ, ಮಕ್ಕಳ ಕಲ್ಯಾಣ ಘಟಕದ ಅಧಿಕಾರಿ ಗಾಯಿತ್ರಿ, ಶಿಕ್ಷಕ ಮಂಜುನಾಥ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT