ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಗುಣಮಟ್ಟದ ಆಹಾರ ಅಗತ್ಯ

ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಯ ಎರಡು ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ
Last Updated 21 ಡಿಸೆಂಬರ್ 2019, 13:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಶಿಕ್ಷಕರು ಅಕ್ಷರ ಜ್ಞಾನ ನೀಡಿದರೆ ಸಾಲದು, ಪೌಷ್ಟಿಕಾಂಶಯುಕ್ತ, ಗುಣಮಟ್ಟದ ಬಿಸಿಯೂಟ ಸಿಗುವಂತೆ ನೋಡಿಕೊಳ್ಳುವ ಮೂಲಕ ತಾಲ್ಲೂಕನ್ನು ಅಪೌಷ್ಟಿಕತೆ ಮುಕ್ತ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ತಿಳಿಸಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಯ ಎರಡು ದಿನಗಳ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜತೆಗೆ ಸರ್ಕಾರ ಅಪೌಷ್ಟಿಕತೆ ದೂರ ಮಾಡಲು ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಸುತ್ತಿದೆ. ಅಕ್ಕಿ, ಬೇಳೆ ಸೇರಿದಂತೆ ವಿವಿಧ ಧಾನ್ಯಗಳು ಕಳಪೆ ಇರುವುದು ಕಂಡು ಬಂದರೆ ತಕ್ಷಣವೇ ಅಡುಗೆ ಸಿಬ್ಬಂದಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಅಡುಗೆ ಗುಣಮಟ್ಟದ ಬಗ್ಗೆ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸಬೇಕು. ಅಶುದ್ಧತೆಯಿಂದ ನಾನಾ ಕಾಯಿಲೆಗಳು ಹರಡುತ್ತವೆ. ಹೀಗಾಗಿ ದಾಸ್ತಾನು ಹಾಗೂ ಅಡುಗೆ ಕೊಠಡಿ, ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು’ ಎಂದು ಹೇಳಿದರು.


‘ಸರ್ಕಾರಿ ಶಾಲೆಗಳಿಗೆ ಬಹುತೇಕ ಬಡವರ ಮಕ್ಕಳು ದಾಖಲಾಗುತ್ತಾರೆ. ಅವರನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಜತೆಗೆ ಅವರ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುವಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಹೆಚ್ಚಿದೆ. ಕಾರ್ಯಾಗಾರದಲ್ಲಿ ಪರಿಣತರು ನೀಡುವ ತರಬೇತಿ ಪಡೆದು, ಶಾಲೆಯಲ್ಲಿ ಪರಿಣಾಮಕಾರಿಯಾಗಿ, ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಉತ್ತಮ ಗುಣಮಟ್ಟದ ತರಕಾರಿ, ಸೊಪ್ಪು ಬಳಸಬೇಕು. ಅಡುಗೆ ಸಿದ್ಧವಾದ ಬಳಿಕ ಮೊದಲು ಅಡುಗೆ ಸಿಬ್ಬಂದಿ ಊಟ ಮಾಡಿ ಆಹಾರ ಗುಣಮಟ್ಟ ಪರೀಕ್ಷಿಸಬೇಕು’ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಸಿಯೂಟ ನೌಕರರನ್ನು ಕಾಯಂ ನೌಕರರು ಎಂದು ಪರಿಗಣಿಸಿ ಕೆಲಸದ ಭದ್ರತೆ ಒದಗಿಸಬೇಕು. ಪಿಂಚಣಿ, ಕನಿಷ್ಠ ವೇತನ ಜಾರಿಗೊಳಿಸುವ ಮೂಲಕ ನೌಕರರ ಸೇವೆಯನ್ನು ಎತ್ತಿ ಹಿಡಿಯಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಶಿವಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಮಳಪ್ಪ, ಕೊಂಡೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೇಷಪ್ಪ, ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಲಲಿತಾ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಉಪಾಧ್ಯಕ್ಷೆ ಮುನಿಲಕ್ಷಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT